ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ: ಪ್ರಭು ಬಿ.ಚವ್ಹಾಣ್
ಮಡಿಕೇರಿ ಜೂ.28: ಸರ್ಕಾರ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದು, ಗೋವುಗಳನ್ನು ಕಸಾಯಿ ಖಾನೆಗೆ ಹೋಗದಂತೆ ತಡೆಯಬೇಕು. ಆ ನಿಟ್ಟಿನಲ್ಲಿ ಚೆಕ್‍ಪೋಸ್ಟ್‍ಗಳಲ್ಲಿ ಬಿಗಿ ಕ್ರಮವಹಿಸುವಂತೆ ಪಶುಪಾಲನಾ ಇಲಾಖೆ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ತಾಕೀತು ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಗೋಶಾಲೆ ನಿರ್ಮಾಣ, ಗೋಹತ್ಯೆ ನಿಷೇಧ ಕಾಯ್ದೆ ಸಮರ್ಪಕ ಜಾರಿ, ಇಲಾಖೆ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡದಂತೆ ಅಗತ್ಯ ಬಿಗಿ ಕ್ರಮ ಕೈಗೊಳ್ಳಬೇಕು. ಚೆಕ್ ಪೋಸ್ಟ್‍ಗಳಲ್ಲಿ ಪಶು ವೈದ್ಯ ಸಿಬ್ಬಂದಿಗಳ ಜೊತೆ ಪೊಲೀಸರನ್ನು ನಿಯೋಜಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಪಶುಸಂಗೋಪನಾ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಸೂಚಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸರನ್ನು ನಿಯೋಜಿಸಿ, ಸರಿಯಾದ ತಪಾಸಣೆ ನಡೆಸಬೇಕು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ಆರಂಭಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ಗೋಶಾಲೆಗೆ ಕನಿಷ್ಠ 20 ರಿಂದ 25 ಎಕರೆ ಭೂಮಿ ಕಾಯ್ದಿರಿಸಬೇಕಿದೆ. ಹಾಗೆಯೇ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಗೋಶಾಲೆ ನಿರ್ಮಾಣಕ್ಕೆ 10 ಎಕರೆ ಭೂಮಿ ಕಾಯ್ದಿರಿಸಬೇಕಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಗೋಶಾಲೆ ಆರಂಭಕ್ಕೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸಹ ಗೋಶಾಲೆ ಆರಂಭಕ್ಕೆ ಚಾಲನೆ ದೊರೆತಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಗೋಮಾಳ ಜಾಗವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ಜಿಲ್ಲಾಡಳಿತದಿಂದ ಈಗಾಗಲೇ 8 ಎಕರೆ ಜಾಗ ಕಾಯ್ದಿರಿಸಲಾಗಿದೆ. ಉಳಿದ 12 ಎಕರೆ ಭೂಮಿ ಇದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಸೆಪ್ಟೆಂಬರ್ ಅಂತ್ಯದೊಳಗೆ ಗೋಶಾಲೆ ಆರಂಭಿಸಬಹುದಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡಿದರು.
ಈಗಾಗಲೇ 53 ಲಕ್ಷ ರೂ. ಬಿಡುಗಡೆಯಾಗಿದ್ದು, 38 ಲಕ್ಷ ರೂ. ವೆಚ್ಚದಲ್ಲಿ ಶೆಡ್ ನಿರ್ಮಾಣ ಮತ್ತಿತರ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಉಪ ನಿರ್ದೇಶಕರು ಮಾಹಿತಿ ನೀಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಪಶುವೈದ್ಯಕೀಯ ಇಲಾಖೆಯ ಎಲ್ಲಾ ಹಂತದ ಹುದ್ದೆಗಳನ್ನು ನೇಮಕ ಮಾಡಬೇಕು. ಸದ್ಯ ಹೊರಗುತ್ತಿಗೆಯಡಿ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವರು ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹಂತದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ. ಶೀಘ್ರದಲ್ಲೇ 400 ವಿವಿಧ ಹಂತದ ಹುದ್ದೆಗಳು ಭರ್ತಿಯಾಗಲಿದ್ದು, ಕೊಡಗು ಜಿಲ್ಲೆಗೆ ಆದ್ಯತೆ ನೀಡಲಾಗುವುದು ಎಂದರು.
ಸದ್ಯ ಈಗಿರುವ ಪಶು ವೈದ್ಯಾಧಿಕಾರಿಗಳನ್ನು ಹತ್ತಿರದ ಕಡೆಗಳಿಗೆ ನಿಯೋಜಿಸಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಾದಾಮಿ, ಡಾ.ಪ್ರಸನ್ನ, ಡಾ.ಶಾಂತೇಶ್, ಡಾ.ನವೀನ್ ಕುಮಾರ್ ಮತ್ತು ಡಾ.ಶ್ರೀದೇವ್ ಅವರು ಮಾತನಾಡಿ ಮುಖ್ಯಮಂತ್ರಿ ಅವರ ಅಮೃತ ಯೋಜನೆ, ವಿಮೆ, ಅನುಗ್ರಹ, ಹೊಸ ಗೋ ಶಾಲೆಗಳ ನಿರ್ಮಾಣ, ಪುಣ್ಯಕೋಟಿ, ಪಶು ಸಂಜೀವಿನಿ, ಪ್ರಾಥಮಿಕ ಪಶು ವೈದ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿರುವುದು, ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭ, ಗೋ ಹತ್ಯೆ ನಿಷೇಧ ಕಾಯ್ದೆ, ಹೀಗೆ ಹಲವು ಕಾರ್ಯಕ್ರಮಗಳು ಹಾಗೂ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಿಕ್ಲೀನಿಕ್ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಜಾಗ ಕಾಯ್ದಿರಿಸಿದ್ದು, ಕಟ್ಟಡ ನಿರ್ಮಿಸಬೇಕಿದೆ ಎಂದು ಡಾ.ಚಿದಾನಂದ ಅವರು ಮಾಹಿತಿ ನೀಡಿದರು.
ಹಾಸನ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಪ್ರಸನ್ನ ಅವರು ಜಿಲ್ಲೆಯಲ್ಲಿ 36 ಹಾಲು ಉತ್ಪಾದಕರ ಸಹಕಾರ ಸಂಘವಿದ್ದು, 20 ಸಾವಿರ ಲೀ ಹಾಲು ಸಂಗ್ರಹಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಈಗಾಗಲೇ ಪ್ರಾಣಿ ಸಹಾಯವಾಣಿ ಕೇಂದ್ರ 8277100200 ಆರಂಭಿಸಲಾಗಿದ್ದು, ಕಳೆದ 9 ತಿಂಗಳಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಸ್ಪಂದಿಸಲಾಗಿದೆ. ಆ ನಿಟ್ಟಿನಲ್ಲಿ ಕರೆ ಮಾಡಿದರೆ ಸಂಚಾರಿ ಪಶು ಚಿಕಿತ್ಸೆ ಮೂಲಕ ಪಶುಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಪುಣ್ಯಕೋಟಿ ಯೋಜನೆ, ಹಾವೇರಿ ಜಿಲ್ಲೆಯಲ್ಲಿ ಮೆಘಾ ಡೈರಿ ಸ್ಥಾಪನೆ, ನೇರ ನೇಮಕಾತಿ ಮೂಲಕ ಕಿರಿಯ ಪಶುವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕುರಿ, ಮೇಕೆ ಸಾಕಾಣಿಕೆ ಬಗ್ಗೆ ಶಾಸಕರು ಮಾಹಿತಿ ಪಡೆದರು. ಹೆಚ್ಚುವರಿ ನಿರ್ದೇಶಕರಾದ ಶಿವರುದ್ರಪ್ಪ, ಜಂಟಿ ನಿರ್ದೇಶಕರಾದ ವೀರಭದ್ರಯ್ಯ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಭಾಸ್ಕರ್ ನಾಯಕ್, ಡಾ.ಜಯಪ್ರಕಾಶ್,ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network