Header Ads Widget

Responsive Advertisement

ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ’ ಸಮಾರಂಭ ಹಾಗೂ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ


ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ’ ಸಮಾರಂಭ ಹಾಗೂ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ

ಯಶಸ್ವಿನಿ ಯೋಜನೆ ಮತ್ತೆ ಜಾರಿ: ಸೋಮಶೇಖರ್

ಮಡಿಕೇರಿ: ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಿಂದ ಮತ್ತೆ ಯಶಸ್ವಿನಿ ಯೋಜನೆ ಜಾರಿಗೆ ಚಿಂತಿಸಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದ್ದಾರೆ.  

ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತ ಸಹಕಾರ ಭವನದಲ್ಲಿ ಸೋಮವಾರ ನಡೆದ ‘ಕುಶಾಲನಗರ ಸಹಕಾರ ಸಂಘದ ಶತಮಾನೋತ್ಸವ’ ಸಮಾರಂಭ ಹಾಗೂ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಮಾದರಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಸುಲಭ ವ್ಯವಸ್ಥೆಯಲ್ಲಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲು ಯೋಚಿಸಲಾಗಿದೆ ಎಂದು ಸಹಕಾರ ಸಚಿವರು ನುಡಿದರು. 

ರಾಜ್ಯದಲ್ಲಿ ಸುಮಾರು 9 ಲಕ್ಷ ಮಹಿಳಾ ಹಾಲು ಉತ್ಪಾದಕರು ಸೇರಿದಂತೆ ಒಟ್ಟು 26 ಲಕ್ಷ ಹಾಲು ಉತ್ಪಾದಕರಿಗೆ ಸುಗಮವಾಗಿ ಸಾಲ ಸೌಲಭ್ಯ ದೊರೆಯುವಂತಾಗಲು ಅಗತ್ಯ ಕ್ರಮವಹಿಸಲಾಗಿದೆ ಎಂದರು. 

ರಾಜ್ಯದಲ್ಲಿ 6 ಸಾವಿರ ಕೋಟಿ ರೂ. ಗೂ ಹೆಚ್ಚು ಸಾಲ ಮನ್ನಾ ಮಾಡಲಾಗಿದೆ. ಇನ್ನೂ 31 ಸಾವಿರ ರೈತರ ಸಾಲ ಮನ್ನಾಕ್ಕೆ ಬಾಕಿ ಇದ್ದು, ಈ ಸಂಬಂಧ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ ಎಂದು ಸಹಕಾರ ಸಚಿವರು ಹೇಳಿದರು. 

ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‍ಗಳು ಇದ್ದು, 5,477 ಪ್ಯಾಕ್ಸ್ ಸಹಕಾರ ಸಂಘಗಳು ಇವೆ. ಎಲ್ಲಾ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು, ಶೇ.99 ರಷ್ಟು ಸಾಲವನ್ನು ಮರುಪಾವತಿ ಮಾಡಲಾಗುತ್ತಿದೆ ಎಂದರು.

3 ಲಕ್ಷ ಹೊಸ ರೈತರಿಗೆ ಸಾಲ ನೀಡಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಬಜೆಟಿನಲ್ಲಿ ಪ್ರಕಟಿಸಿದ್ದಾರೆ. ಸ್ವಸಹಾಯ ಗುಂಪುಗಳಿಗೆ ಹಾಗೂ ಇತರರಿಗೆ ಸಾಲ ನೀಡಲಾಗುತ್ತದೆ ಎಂದು ಸಹಕಾರ ಸಚಿವರು  ಹೇಳಿದರು. 

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಮಾತನಾಡಿ ಸಹಕಾರ ಸಂಘಗಳು ಸಮಾಜಮುಖಿಯಾಗಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.  

ಸಹಕಾರ ಸಂಘಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಹಕಾರ ಸಂಘಗಳಿಂದ ಕೃಷಿಕರಿಗೆ ಬೇಕಾದ ಸಂದರ್ಭದಲ್ಲಿ ಸಾಲ ಪಡೆಯಲು ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ಸಹಕಾರ ಸಂಘಗಳನ್ನು ಬಲಪಡಿಸಲು ಮುಂದಾಗಬೇಕು ಎಂದರು.   

ಸಹಕಾರ ಸಂಘಗಳು ನಂಬಿಕೆ ಮೇಲೆ ನಡೆಯುತ್ತಿವೆ. ಕೃಷಿಕರ ಶ್ರೇಯೋಭಿವೃದ್ದಿಯೇ ಸಹಕಾರ ಸಂಘಗಳ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು. 


ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಸಹಕಾರ ಸಂಘಗಳು ನಿಸ್ವಾರ್ಥದಿಂದ ಕೆಲಸ ಮಾಡಬೇಕು. ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಸಹಕಾರ ಸಂಘಗಳನ್ನು ಕಟ್ಟಲು ಸಾಧ್ಯ. ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಹಕಾರ ಸಂಘಗಳನ್ನು ಬಲಪಡಿಸಬೇಕು. ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗಬಾರದು ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಮಾತನಾಡಿ ಜಿಲ್ಲೆಯಲ್ಲಿ 9 ಸಹಕಾರ ಸಂಘಗಳು ಶತಮಾನ ಪೂರೈಸಿದೆ. ಹಾಗೆಯೇ ಜಿಲ್ಲೆಯಲ್ಲಿ 98 ಧವಸ ಭಂಡಾರ ಸಹಕಾರ ಸಂಘಗಳಲ್ಲಿ 8 ಸಂಘಗಳು ಶತಮಾನ ಕಂಡಿವೆ ಎಂದರು.  

ಸ್ಮರಣ ಸಂಚಿಕೆ ಬಿಡುಗಡೆ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರು ಸಹಕಾರ ಸಂಘಗಳನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸಹಕಾರ ಸಂಘಗಳು ಅಭಿವೃದ್ಧಿಯಾದಷ್ಟು ಕೃಷಿಕರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಸಹಕಾರ ಸಂಘದ ಸೌಲಭ್ಯಗಳು ಎಲ್ಲರಿಗೂ ದೊರೆಯಬೇಕು ಎಂದರು.   

      ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಟಿ.ಆರ್.ಶರವಣಕುಮಾರ್ ಅವರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಹಕಾರ ಸಂಘಗಳನ್ನು ಬಲಪಡಿಸಲು ಶ್ರಮಿಸಲಾಗುತ್ತದೆ ಎಂದರು. 

      ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್.ಎನ್.ರಮೇಶ್, ಸಹಾಯಕ ನಿಬಂಧಕರಾದ ಎಂ.ಇ.ಮೋಹನ್ ಇತರರು ಇದ್ದರು. ಸಂವೇದಿತಾ ಪ್ರಾರ್ಥಿಸಿದರು. ನಂಜುಂಡಸ್ವಾಮಿ ರೈತ ಗೀತೆ ಹಾಡಿದರು. ನಾಗೇಂದ್ರ ಬಾಬು ಸ್ವಾಗತಿಸಿದರು. ಯೋಗೇಂದ್ರ ನಾಯಕ್ ಮತ್ತು ಮಂಜುಳ ಅವರು ನಿರೂಪಿಸಿದರು. ಆನಂದ್ ಕುಮಾರ್ ವಂದಿಸಿದರು.