Header Ads Widget

Responsive Advertisement

Nariyandada: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯತ್ತ ನನ್ನ ಹೆಜ್ಜೆ; ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯ


Nariyandada: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯತ್ತ ನನ್ನ ಹೆಜ್ಜೆ; ಬಿದ್ದಂಡ  ಎಂ. ರಾಜೇಶ್ ಅಚ್ಚಯ್ಯ, 
ಅಧ್ಯಕ್ಷರು: ನರಿಯಂದಡ ಗ್ರಾಮ ಪಂಚಾಯಿತಿ 

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ನರಿಯಂದಡ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ .ಸದರಿ ಗ್ರಾಮ ಪಂಚಾಯತಿಯು ವಿರಾಜಪೇಟೆ ತಾಲ್ಲೂಕಿಗೆ ಹತ್ತಿರವಾಗಿರುತ್ತದೆ. ಪ್ರಸ್ತುತ ನರಿಯಂದಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯನವರು ಕಾರ್ಯನಿರ್ವಹಿಸುತ್ತಿದ್ದಾರೆ.

ನರಿಯಂದಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ  ಬಿದ್ದಂಡ  ಎಂ. ರಾಜೇಶ್ ಅಚ್ಚಯ್ಯನವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ”ದ "ನಮ್ಮ ಕೊಡಗು-ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಿದಾಗ, “ಸರ್ಚ್‌ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಅಧ್ಯಕ್ಷರಾದ  ಬಿದ್ದಂಡ  ಎಂ.ರಾಜೇಶ್ ಅಚ್ಚಯ್ಯನವರು, "ನನಗೆ ನನ್ನ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಎನಿಸಿತು.  ಆಗ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಬಯಸಿದಾಗ ಊರ ಜನರಿಂದ ಉತ್ತಮ ಬೆಂಬಲ ಸಿಕ್ಕಿತು. ಗೆಲುವು ಸಹ ಸಾಧಿಸಿದೆ, ಈಗ ಅಧ್ಯಕ್ಷನಾಗಿದ್ದೇನೆ" ಎಂದು ರಾಜೇಶ್ ಅಚ್ಚಯ್ಯ ಹೇಳಿದರು. ತಮ್ಮ ತಾಯಿ ಬಿದ್ದಂಡ ಸೀತಮ್ಮನವರು ಬಿಜೆಪಿಯ ಅಪ್ಪಟ್ಟ ಅಭಿಮಾನಿಯಾಗಿದ್ದರು ಎಂದ ರಾಜೇಶ್‌ ಅಚ್ಚಯ್ಯನವರು, ಪ್ರಧಾನಮಂತ್ರಿ  ಮೋದಿಜಿಯವರ ಕಾರ್ಯವೈಖರಿಗಳನ್ನು ನೋಡಿ  ರಾಜಕೀಯ ಪ್ರವೇಶದಿಂದ ಸಮಾಜ ಸೇವೆಗೆಂದು ತಮ್ಮನ್ನು ತಾವು ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದರು.

ರಾಜೇಶ್ ಅಚ್ಚಯ್ಯನವರು ಪ್ರಥಮ ಬಾರಿಗೆ 2020ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ಜನಸೇವೆ ಮಾತ್ರವಲ್ಲದೆ, ತ್ವರಿತಗತಿಯಲ್ಲಿ ಸೇವೆ ಎಂಬುದೇ ನನ್ನ ವೇದವಾಕ್ಯ ಎಂದ ರಾಜೇಶ್ ಅಚ್ಚಯ್ಯನವರು, ಹೀಗಾಗಲೆ…. ಪಂಚಾಯತಿ ಮೂಲಕ 90 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛ ಭಾರತ ಅಭಿಯಾನದಡಿ ಮನೆ-ಮನೆಗೆ ಶೌಚಾಲಯದ ವ್ಯವಸ್ಥೆ ಪೂರ್ಣಗೊಂಡಿರುವುದಾಗಿ ತಿಳಿಸಿದರು. 

ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದ್ದು, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಿಂದ ಅನುದಾನ ಸಿಗಲಿಲ್ಲವಾದರೂ,  ಎಂ.ಎಲ್.ಎ ಹಾಗೂ ಎಂ.ಪಿ. ನಿಧಿಯಿಂದ ದೊರೆತ ಅನುದಾನದಲ್ಲಿ ಬಾವಲಿ-ಮರಂದೋಡ ಸಂಪರ್ಕ ರಸ್ತೆ ಕಾಮಗಾರಿಯು ಪೂರ್ಣಗೊಂಡಿದೆ ಎಂದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕೋಕೇರಿ-ಕೊಳಕೇರಿ ಸಂಪರ್ಕ ರಸ್ತೆಯ ಅಂದಾಜು 1.7 ಕೋಟಿ ರೂಪಾಯಿಗಳ ಅಂದಾಜು ಪಟ್ಟಿ ಮುಗಿದಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜೇಶ್‌ ಅಚ್ಚಯ್ಯ ಈ ಸಂದರ್ಭದಲ್ಲಿ ತಿಳಿಸಿದರು. ಬಾವಲಿ ರಸ್ತೆ ದುರಸ್ತಿ ಕಾರ್ಯ ಎಂಎಲ್ಸಿ ಅನುದಾನದಿಂದ ಮುಗಿಸಲಾಗಿದೆ ಎಂದು ಮಾಹಿತಿ ನೀಡಿದ ರಾಜೇಶ್‌ ಅಚ್ಚಯ್ಯ, ಎಂಎಲ್ಸಿ, ಎಂಎಲ್ಎ ಮತ್ತು ಎಂಪಿ ಅವರಿಂದ ಹೆಚ್ಚಿನ ಅನುದಾನ ದೊರೆತಲ್ಲಿ ಇನ್ನು ಉತ್ತಮ ಕಾರ್ಯ ಮುಂದುವರಿಸಿಕೊಂಡು ಹೋಗುವ ಅಭಿಪ್ರಾಯವನ್ನು ಹೊಂದಿದ್ದೇನೆ ಎಂಬುದಾಗಿ ತಿಳಿಸಿದರು.

ಕೋಕೇರಿ ಗ್ರಾಮದಲ್ಲಿ ವೈಯಕ್ತಿಕ ಆಸಕ್ತಿಯಿಂದ ಪಡಿತರ ಚೀಟಿಯನ್ನು ಒದಗಿಸುವ ಕಾರ್ಯ ನಡೆದಿದೆ ಎಂದ ರಾಜೇಶ್‌ ಅಚ್ಚಯ್ಯ, ಪಂಚಾಯಿತಿ ವ್ಯಾಪ್ತಿಯ ಘನತ್ಯಾಜ್ಯ ಕಸ ವಿಲೇವಾರಿಗಾಗಿ 18 ಸೆಂಟ್ ಜಾಗವನ್ನು ಪೊದುವಾಡ ಗ್ರಾಮದಲ್ಲಿ 11 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದ್ದು, ಅನುಮೋದನೆ ದೊರೆತೊಡೆನೆ ಕಸವಿಲೇವಾರಿ ಘಟಕವನ್ನು ಸ್ಥಾಪಿಸಲಾಗುವುದು ಹಾಗೆ ಸದ್ಯದ ಮಟ್ಟಿಗೆ ಒಂದು ಕಸ ವಿಲೇವಾರಿ ವಾಹನವನ್ನು ಪಂಚಾಯಿತಿ ಹೊಂದಿದೆ ಎಂದರು.  

ಬಸವ ವಸತಿ ಯೋಜನೆಯಲ್ಲಿ 30 ಮನೆಗಳನ್ನು ಕಟ್ಟಿ ಕೊಟ್ಟಿದ್ದೇವೆ.15ನೇ ಹಣಕಾಸು ಯೋಜನೆಯು ಪ್ರಗತಿಯಲ್ಲಿದೆ. ಕೆರೆ, ತೋಡುಗಳಲ್ಲಿ ಹೂಳು ತೆಗೆಯುವ ಕೆಲಸವು ಮುಗಿದಿರುತ್ತದೆ. ಕಾಡುಪ್ರಾಣಿಗಳ ಸಮಸ್ಯೆ ಹೆಚ್ಚಾಗಿದ್ದು ಅವುಗಳ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಒತ್ತಡ ಹಾಕಿದ್ದೇವೆ ಎಂದು ತಿಳಿಸಿದ ರಾಜೇಶ್ ಅಚ್ಚಯ್ಯ, ನರಿಯಂದಡ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕಡಂಗ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆಯುಷ್‌ ಆರೋಗ್ಯ ಕೇಂದ್ರ, ಪ್ರಾಥಮಿಕ ಶಾಲೆ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಹಾಗೂ ರಾಷ್ಟ್ರಿಕೃತ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ.ಜಿ. ಬೋಪಯ್ಯನವರಿಂದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡದಲ್ಲಿ ಸಾರ್ವಜನಿಕ ಡಿಜಿಟಿಲ್ ಲೈಬ್ರರಿ ಉದ್ಘಾಟನೆ ನೇರವೇರಿದೆ ಎಂದ ರಾಜೇಶ್‌ ಅಚ್ಚಯ್ಯ, ರಾಜ್ಯದಲ್ಲಿ ಮಾದರಿ ಡಿಜಿಟಲ್‌ ಗ್ರಂಥಾಲಯ ವ್ಯವಸ್ಥೆ ಹೊಂದಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಕೊಡಗು ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲೂ ಪುಸ್ತಕಗಳು ಡಿಜಿಟಲೀಕರಣಗೊಂಡು ಮಕ್ಕಳನ್ನು ಆಕರ್ಷಿಸುತ್ತಿವೆ. ಡಿಜಿಟಲ್ ಗ್ರಂಥಾಲಯದಲ್ಲಿ ಅಂತರ್ಜಾಲ ಪ್ರಿಂಟರ್ ಸೌಲಭ್ಯ, ಇ-ಪುಸ್ತಕಗಳು, ಅಂಡ್ರಾಯ್ಡ್  ಟೆಲಿವಿಷನ್​ಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ, ಕನ್ನಡ ಕಾದಂಬರಿ, ಕನ್ನಡ ಸಾಹಿತ್ಯ, ಮಕ್ಕಳ ಸಾಹಿತ್ಯ, ವ್ಯಕ್ತಿ ಜೀವನಾಧಾರಿತ ಪುಸ್ತಕಗಳು, ಅಧ್ಯಾತ್ಮಿಕ ಧಾರ್ವಿುಕ ಗ್ರಂಥಗಳು, ದಿನ ಪತ್ರಿಕೆಗಳು‌,  ಸ್ಮಾರ್ಟ್ ಪುಸ್ತಕಗಳು ದೊರೆಯುತ್ತವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಪಂಚಾಯಿತಿಗೆ ಮೀನು ಮಾರುಕಟ್ಟೆ, ಹೋಂಸ್ಟೇ ಮತ್ತು ರೆಸೋರ್ಟ್ ಗಳಿಂದ ಸ್ವಲ್ಪಮಟ್ಟಿಗೆ ಆದಾಯವೂ ಬರುತ್ತಿದೆ ಎಂದ ರಾಜೇಶ್‌ ಅಚ್ಚಯ್ಯ, ನರಿಯಂದಡ ಗ್ರಾಮ ಪಂಚಾಯಿತಿ ಆಡಳಿತ ಕಛೇರಿಯ ಕಟ್ಟಡವು ದುಸ್ಥಿತಿಯಲ್ಲಿದ್ದು, ನನ್ನ ಅಧಿಕಾರ ಅವಧಿಯಲ್ಲಿ ಹಳೆ ಕಟ್ಟಡವನ್ನು ಕೆಡವಿ ಹೊಸ ಪಂಚಾಯಿತಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದ್ದೇವೆ ನೂತನ ಕಟ್ಟಡಕ್ಕೆ ಸರ್ಕಾರದಿಂದ 18 ಸೆಂಟ್ ಜಾಗವು ಮಂಜೂರಾಗಿದ್ದು, ಪಂಚಾಯಿತಿಗೆ RTC ಕೂಡ ಬಂದಿದೆ ಎಂದು ಮಾಹಿತಿ ನೀಡಿದ ರಾಜೇಶ್‌ ಅಚ್ಚಯ್ಯ, ನನ್ನ ಆಡಳಿತ ಅವಧಿಯಲ್ಲಿ ನರಿಯಂದಡ ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯಾಗಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.

ಪಂಚಾಯಿತಿ ಆಡಳಿತಕ್ಕೆ ಚುನಾವಣೆಗೆ ಸ್ಪರ್ಧಿಸುವವರು ಕನಿಷ್ಠ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದ್ದರೆ ಆಡಳಿತ ನಡೆಸಲು ಉತ್ತಮವಾಗುತ್ತದೆ ಎಂದು ಅಭಿಪ್ರಾಯಪಟ್ಟ ರಾಜೇಶ್‌ ಅಚ್ಚಯ್ಯ. ಇಂದಿನ ಯುವಕರು ಹೆಚ್ಚೆಚ್ಚು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ಮೂಲಕ ಗ್ರಾಮ ಪಂಚಾಯಿತಿಗೆ ಚುನಾವಣೆಗಳಲ್ಲಿ ಸ್ಪರ್ದಿಸಿ  ಗೆದ್ದು ಉತ್ತಮ ಆಡಳಿತ ನಡೆಸುವಂತಾಗಬೇಕೆಂದು ತಿಳಿಸಿದರು.

ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಚೆಯ್ಯಂಡಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ 2013ರಲ್ಲಿ ಕೋಕೆರಿ ಭಗವತಿ ದೇವಾಲಯದ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ದೇವಾಲಯದ ಜಿರ್ಣೋದ್ದಾರ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ. ಆರ್‌.ಎಸ್‌.ಎಸ್‌ ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ನರಿಯಂದಡ ಕೇಂದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಪೋಕ್ಲು ಕೊಡವ ಸಮಾಜದ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. 

ಮೂಲತಃ ಕೃಷಿಕರಾಗಿರುವ ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯನವರ ತಂದೆ ಬಿದ್ದಂಡ ಮುತ್ತಪ್ಪ ಮಾಜಿ ಸೈನಿಕರು ಹಾಗೂ ಕೆಎಸ್ಆರ್‌ಟಿಸಿ ನೌಕರರಾಗಿ ನೀವೃತ್ತಿ ಹೊಂದಿದ್ದಾರೆ. ತಾಯಿ ಸೀತಮ್ಮ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಪತ್ನಿ ಮಿನ್ನು ಗೃಹಿಣಿಯಾಗಿದ್ದು, ಮಗ ದ್ರುವ್‌ ಹಾಗೂ ಮಗಳು ನವಿಷ್ಕ ವ್ಯಾಸಂಗ ನಿರತರಾಗಿದ್ದಾರೆ. ಪ್ರಸ್ತುತ ಕುಟುಂಬದೊಂದಿಗೆ  ನರಿಯಂದಡ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೈಯಂಡಾಣೆ ಗ್ರಾಮದಲ್ಲಿ ವಾಸವಾಗಿದ್ದಾರೆ. ಶ್ರೀಯುತರ ಕೌಟುಂಬಿಕ ಜೀವನವು, ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ  ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

(ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದಲ್ಲಿ ಸಾರ್ವಜನಿಕ ಡಿಜಿಟಿಲ್ ಲೈಬ್ರರಿ ಉದ್ಘಾಟನೆ ಹಾಗೂ ಹೊಸ ಪಂಚಾಯಿತಿ ಆಡಳಿತ ಕಛೇರಿ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ಸಂದರ್ಭ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪರೊಂದಿಗೆ ಅಧ್ಯಕ್ಷ ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯ)