Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿಗೆ ಡಿಸಿ ಮನವಿ


ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿಗೆ ಡಿಸಿ ಮನವಿ

ಮಡಿಕೇರಿ ಜು.16: ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಕೊಡಗು ಜಿಲ್ಲೆಗೆ ಮುಖ್ಯಮಂತ್ರಿಗಳು ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚಿಸಿರುವಂತೆ ಕಾವೇರಿ ಫ್ರೂಟ್ಸ್ ಸಂಯೋಜಿತ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಿ, ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕ ಆಕರಣೆಯಿಂದ ಬೇರೆ ರೈತರಿಗೆ ವಿನಾಯಿತಿ ನೀಡಿದಂತೆ ಕಾಫಿ ಬೆಳೆಗಾರರಿಗೂ ಸಹ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.  

ಪತ್ರದ ವಿವರ ಇಂತಿದೆ: ಸರ್ಕಾರದ ಆದೇಶದನ್ವಯ 2022 ರ ಏಪ್ರಿಲ್, 01 ರಿಂದ ಜಾರಿಗೆ ಬರುವಂತೆ ಫಾರಂ-3 ಡಿಕ್ಲರೇಷನ್‍ಗಳು ಮತ್ತು ಅಡಮಾನದ ಕೃಷಿ ಸಾಲಗಳನ್ನು ಫ್ರೂಟ್ಸ್ ತಂತ್ರಾಂಶದಿಂದ ಬರುವ ಡಾಟಾ(ದತ್ತಾಂಶ)ವನ್ನು ಬಳಸಿಯೇ ನೋಂದಣಿ ಮಾಡಲು ಉಪ ನೋಂದಣಾಧಿಕಾರಿಗಳಿಗೆ ಆದೇಶಿಸಿರುತ್ತಾರೆ. ಆದರೆ ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಷನ್ಸ್ ಅಂಡ್ ಮಿಷಲೇನಿಯನ್ಸ್ ಪ್ರಾವಿಷನ್ಸ್ ಆಕ್ಟ್, 1974 ರ ವಿವರಣೆಗಳು ಕಲಂ 2 ರಲ್ಲಿ ಕೃಷಿ ಉದ್ದೇಶಗಳನ್ನು ವಿವರಿಸಿದ್ದಾರೆ. 

 ನೋಂದಣಿ ಉಪಮಹಾಪರಿವೀಕ್ಷಕರು (ಆಡಳಿತ ಮತ್ತು ಕಾನೂನು), ಬೆಂಗಳೂರುರವರ ಪತ್ರದ ಸಂಖ್ಯೆ :ಎಸ್.ಟಿ.ಪಿ /150/2007-08, ದಿನಾಂಕ :27-07-2007ರ ಪ್ರಕಾರ  ಕಾಫಿ ಬೆಳೆಗಾರರು ಬರೆದುಕೊಡುವ ಡಿಪಾಸಿಟ್ ಆಪ್ ಟೈಟಲ್ ಡೀಡ್ಸ್/ ಫಾರಂ-3 ಡಿಕ್ಲರೇಷನ್‍ಗಳಿಗೆ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ನೀಡಲು ನಿಯಮಗಳಲ್ಲಿ ಅವಕಾಶ ಇಲ್ಲದಿರುವುದರಿಂದ ಕಾವೇರಿ-ಫ್ರೂಟ್ಸ್ ಸಂಯೋಜಿತ ತಂತ್ರಾಂಶದಲ್ಲಿಯೂ ಸಹ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕ ಆಕರಣೆ ಮಾಡಲು ಅವಕಾಶ ಕಲ್ಪಿಸಿರುವುದಿಲ್ಲ,  ಇದರಿಂದಾಗಿ ಕಾಫಿ ಬೆಳೆಗಾರರು ಬ್ಯಾಂಕುಗಳಿಂದ ಪಡೆಯುವ ಪ್ಲಾಂಟೇಶನ್ ಜಮೀನು ಅಭಿವೃದ್ಧಿ ಸಾಲಗಳಿಗೆ ಸಂಬಂಧಪಟ್ಟ ಆಧಾರ ಪತ್ರಗಳು/ ಡಿಪಾಸಿಟ್ ಆಫ್ ಟೈಟಲ್ ಡೀಡ್ಸ್ ಹಾಗೂ ಫಾರಂ-3 ಡಿಕ್ಲರೇಷನ್‍ಗಳನ್ನು ನೋಂದಾಯಿಸಲು ಸಾಧ್ಯ ಆಗದಿರುವುದರಿಂದ ಕಾಫಿ ಬೆಳೆಗಾರರಿಗೆ ಬ್ಯಾಂಕ್ ಸಾಲ ಸಕಾಲಕ್ಕೆ ಸಿಗದೆ ತೊಂದರೆಯಾಗಿದೆ. ಈ ಸಂಬಂಧ ಈಗಾಗಲೇ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಅರೆ ಸರ್ಕಾರಿ ಪತ್ರ ಬರೆಯಲಾಗಿದೆ. 

ಫ್ರೂಟ್ಸ್ ತಂತ್ರಾಂಶದಲ್ಲಿ ಕಾಫಿ ಬೆಳೆಯ ಸಾಲ ವಿತರಣೆಗೆ ಸಂಬಂಧಿಸಿದಂತೆ ಫಾರಂ-3 ಪ್ರಕ್ರಿಯೆ ಕೈಗೊಳ್ಳುವ ಹಂತದಲ್ಲಿ ‘ಕಾಫಿ ಕ್ರಾಫ್ ಕೆನಾಟ್ ಬಿ ಸೆಲೆಕ್ಟೆಡ್ ಫಾರ್ ಫಾರಂ-3, ಕೈಂಡ್ಲಿ ಸೆಲೆಕ್ಟ್ ಮಾರ್ಟ್‍ಗೇಜ್ ಟ್ರಾಂಕ್ಸನ್’ ಎಂಬ ಷರಾದೊಂದಿಗೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಇದರಿಂದಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರದ ಬೆಳೆ ಸಾಲ ವಿತರಣೆಗೆ ಅಡಚಣೆಯಾಗಿದೆ ಎಂದು ಅಧ್ಯಕ್ಷರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಇವರು ತಿಳಿಸಿರುತ್ತಾರೆ. ಹಾಗೂ ಮುದ್ರಾಂಕ ಶುಲ್ಕ ವಿನಾಯಿತಿಗೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಬರೆದುಕೊಡುವ  ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕದಲ್ಲಿ ಬೇರೆ ರೈತರಿಗೆ ನೀಡಿದಂತೆ ಕಾಫಿ ಬೆಳೆಗಾರರಿಗೂ ಸಹ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸರ್ಕಾರದ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.