ಕೇಂದ್ರ ಕೃಷಿ ಸಚಿವರು, ರಸಗೊಬ್ಬರ ಸಚಿವರು ಮತ್ತು ಕರ್ನಾಟಕ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನ ಆರಂಭ
ಹಳ್ಳಿಗಳಲ್ಲಿನ ಸಣ್ಣ ರೈತರ ಜೀವನದಲ್ಲಿ ಬದಲಾವಣೆ ತರಲು ಒಟ್ಟಾಗಿ ಕೆಲಸ ಮಾಡೋಣ - ಶ್ರೀ ತೋಮರ್
ದೇಶಾದ್ಯಂತ ರಸಗೊಬ್ಬರಗಳ ಸುಲಭ ಲಭ್ಯತೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ - ಡಾ.ಮಾಂಡವೀಯ
ಬೇಸಾಯ ನಮ್ಮ ಸಂಸ್ಕೃತಿ, ರೈತರು ಮತ್ತು ಕೆಲಸಗಾರರ ದುಡಿಮೆಯು ದೈವಿಕವಾದುದು - ಶ್ರೀ ಬೊಮ್ಮಾಯಿ
ಎರಡು ವರ್ಷಗಳ ಕೊರೊನಾ ಬಿಕ್ಕಟ್ಟಿನ ನಂತರ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಇದನ್ನು ಇಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಈ ಸಮಾವೇಶವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ‘ಆಜಾದಿ ಕಾ ಅಮೃತ ಮಹೋತ್ಸವ’ಕ್ಕೆ ಅನುಗುಣವಾಗಿ ಆಯೋಜಿಸಿದೆ, ಸಮಾವೇಶದಲ್ಲಿ ದೇಶದ ಕೃಷಿ ಮತ್ತು ರೈತರ ಅಭಿವೃದ್ಧಿಯ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಲಾಗುವುದು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಶ್ರೀ ಕೈಲಾಶ್ ಚೌಧರಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳು ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ, ಕರ್ನಾಟಕದ ಕೃಷಿ ಸಚಿವ ಶ್ರೀ ಬಿ.ಸಿ. ಪಾಟೀಲ್ ಸೇರಿದಂತೆ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರು, ಕೇಂದ್ರ ಕೃಷಿ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ, ರಸಗೊಬ್ಬರ ಕಾರ್ಯದರ್ಶಿ ಶ್ರೀಮತಿ ಆರ್ತಿ ಅಹುಜಾ, ಡಿ ಎ ಆರ್ ಇ ಕಾರ್ಯದರ್ಶಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಹಾನಿರ್ದೇಶಕ ಡಾ. ತ್ರಿಲೋಚನ್ ಮೊಹಾಪಾತ್ರ, ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ/ಸಂಸ್ಥೆಗಳ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶ್ರೀ ತೋಮರ್ ಅವರು, ಕೃಷಿ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ, ಆದರೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸುವ, ನೀತಿಗಳನ್ನು ರೂಪಿಸುವ ಮತ್ತು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಪ್ರಮುಖ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
“ನಮ್ಮ ದೇಶವು ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ, ಇಲ್ಲಿ ಸಿದ್ಧಾಂತ, ಭಾಷೆ, ಭೌಗೋಳಿಕತೆ ಮತ್ತು ಹವಾಮಾನದಲ್ಲಿ ವೈವಿಧ್ಯತೆ ಇದೆ, ಆದರೆ ಇದರಲ್ಲಿಯೇ ಭಾರತದ ಶಕ್ತಿ ಅಡಗಿದೆ. ಇದನ್ನು ಕೃಷಿಯ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ದೇಶದ ಹಿತಾಸಕ್ತಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಚರ್ಚಿಸಬೇಕಾಗಿದೆ. ಕೃಷಿಯು ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿದ್ದು, ಕೋಟ್ಯಂತರ ರೈತರೊಂದಿಗೆ ಬೆಸೆದುಕೊಂಡಿದೆ. ಕೇಂದ್ರ ಮತ್ತು ರಾಜ್ಯಗಳು ಹಳ್ಳಿಗಳಲ್ಲಿರುವ ಸಣ್ಣ ರೈತರ ಜೀವನದಲ್ಲಿ ಹೇಗೆ ಬದಲಾವಣೆ ತರಬಹುದು ಎಂಬುದರ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲದೇ ಕೆಲಸ ಮಾಡಬೇಕಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇತ್ತೀಚೆಗೆ ಭೂಮಿಯಲ್ಲಿ ನಡೆಯುವುದು ಪ್ರಯೋಗಾಲಯಕ್ಕೂ ತಲುಪಬೇಕು ಎಂದು ಹೇಳಿದ್ದಾರೆ. ಇದರ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ. ಏಕೆಂದರೆ ಇದುವರೆಗೆ ‘ಲ್ಯಾಬ್ ಟು ಲ್ಯಾಂಡ್’ಮೇಲೆ ಗಮನ ಕೇಂದ್ರೀಕೃತವಾಗಿತ್ತು, ”ಎಂದು ಅವರು ಹೇಳಿದರು.
ದೇಶವು ರಸಗೊಬ್ಬರಗಳ ಆಮದಿನ ಮೇಲೆ ಅವಲಂಬಿತವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೆಲೆ ಏರಿಕೆಯ ಹೊರೆಯು ನಮ್ಮ ರೈತರ ಮೇಲೆ ಬೀಳಬಾರದು ಎಂದು ಕೇಂದ್ರ ಸರ್ಕಾರವು ರೈತರ ಹಿತದೃಷ್ಟಿಯಿಂದ ವಾರ್ಷಿಕವಾಗಿ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳ ಸಹಾಯಧನವನ್ನು ಭರಿಸುತ್ತಿದೆ. ಆದರೆ ಈ ಪರಿಸ್ಥಿತಿಯು ಎಂದಾದರೂ ಅಂತ್ಯ ಕಾಣಲೇಬೇಕು. ಆದ್ದರಿಂದ ಈಗ ರಸಗೊಬ್ಬರ ಕ್ಷೇತ್ರದಲ್ಲಿ ನಾವು ಆತ್ಮನಿರ್ಭರ (ಸ್ವಾವಲಂಬಿ) ಆಗಬೇಕಾಗಿದೆ, 'ಮೇಕ್ ಇನ್ ಇಂಡಿಯಾ' ದ ಅಗತ್ಯವಿದೆ" ಎಂದು ಶ್ರೀ ತೋಮರ್ ಹೇಳಿದರು.
ನ್ಯಾನೊ ರಸಗೊಬ್ಬರದ ಮಹತ್ವವನ್ನು ವಿವರಿಸಿದ ಶ್ರೀ ತೋಮರ್, ಅದನ್ನು ಉತ್ತೇಜಿಸುವಲ್ಲಿ ರಾಜ್ಯಗಳ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು. ರೈತರ ಕಠಿಣ ಪರಿಶ್ರಮ, ವಿಜ್ಞಾನಿಗಳ ಕೌಶಲ್ಯ ಹಾಗೂ ಕೇಂದ್ರ ಮತ್ತು ರಾಜ್ಯಗಳ ನೀತಿಗಳಿಂದಾಗಿ ದೇಶದಲ್ಲಿ ಕೃಷಿ ಉತ್ತಮ ಅಭಿವೃದ್ಧಿ ಹೊಂದಿದ್ದು, ಸುಸ್ಥಿರವಾಗುತ್ತಿದೆ. ಕೃಷಿಯ ತ್ವರಿತ ಪ್ರಗತಿಗಾಗಿ ರಾಜ್ಯಗಳ ಸಚಿವರು ತಮ್ಮ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ಶ್ರೀ ತೋಮರ್ ಅವರು ಎರಡು ದಿನಗಳ ಸಮಾವೇಶದಲ್ಲಿ ಚರ್ಚಿಸಬೇಕಾದ ವಿವಿಧ ವಿಷಯಗಳನ್ನು ಪಟ್ಟಿ ಮಾಡಿದರು. ಡಿಜಿಟಲ್ ಕೃಷಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ಮತ್ತು ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒಗಳು), ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಅದರ ಸಂಪೂರ್ಣ ಮಟ್ಟಕ್ಕೆ ಕೊಂಡೊಯ್ಯುವುದು, ಅಂತರರಾಷ್ಟ್ರೀಯ ಕಿರು(ಸಿರಿ) ಧಾನ್ಯದ ವರ್ಷ (2023), 1 ಲಕ್ಷ ಕೋಟಿ ರೂ. ಮೌಲ್ಯದ ಕೃಷಿ ಮೂಲಸೌಕರ್ಯ ನಿಧಿ, ಸಹಜ ಕೃಷಿಯ ಉತ್ತೇಜನ, ಹೊಸ ತಲೆಮಾರಿನ ರಸಗೊಬ್ಬರಗಳು ಮತ್ತು ಐಸಿಎಆರ್ ಅಭಿವೃದ್ಧಿಪಡಿಸಿದ ಹೊಸ ತಂತ್ರಜ್ಞಾನಗಳು ಇವುಗಳಲ್ಲಿ ಸೇರಿವೆ.
ಡಾ.ಮನ್ಸುಖ್ ಮಾಂಡವೀಯ ಅವರು ತಮ್ಮ ಭಾಷಣದಲ್ಲಿ, ರಸಗೊಬ್ಬರಗಳ ಜಾಗತಿಕ ಪರಿಸ್ಥಿತಿಯನ್ನು ವಿವರಿಸುತ್ತಾ, ಭಾರತವು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಾಗಿದೆ, ಕಚ್ಚಾವಸ್ತುಗಳೂ ತುಂಬಾ ದುಬಾರಿಯಾಗಿವೆ, ಆದರೂ ಕೇಂದ್ರ ಸರ್ಕಾರವು ಅತಿಯಾದ ಸಹಾಯಧನವನ್ನು ನೀಡುತ್ತಿದೆ. ಡಿಎಪಿ ಮೇಲಿನ ಸಬ್ಸಿಡಿಯನ್ನು 2020-21 ರಲ್ಲಿದ್ದ 512 ರೂ.ಗಳಿಂದ 2022-23 ನೇ ಹಿಂಗಾರು ಹಂಗಾಮಿಗೆ 2,501 ರೂ.ಗೆ ಹೆಚ್ಚಿಸಲಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡಿಎಪಿ ಬೆಲೆ ಕಡಿಮೆ ಇದೆ ಎಂದರು. ಪ್ರಧಾನಮಂತ್ರಿಯವರ ನಿರ್ದೇಶನದಂತೆ ಹೆಚ್ಚಾಗಿರುವ ವೆಚ್ಚದ ಹೊರೆಯನ್ನು ರೈತರ ಮೇಲೆ ಹೊರಿಸುತ್ತಿಲ್ಲ ಮತ್ತು ದೇಶಾದ್ಯಂತ ರಸಗೊಬ್ಬರಗಳ ಸುಲಭ ಲಭ್ಯತೆಗೆ ಸರ್ಕಾರ ಬದ್ಧವಾಗಿದೆ, ಆದರೆ ಈಗ ನ್ಯಾನೊ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸುವ ಮತ್ತು ಇದನ್ನು ದೇಶಾದ್ಯಂತ ಅಭಿಯಾನವಾಗಿ ಕೈಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯಗಳಿಂದ ಸಹಕಾರವನ್ನು ಕೋರಿದ ಅವರು, ರಸಗೊಬ್ಬರಗಳ ಲಭ್ಯತೆಯ ಜಿಲ್ಲಾವಾರು ದತ್ತಾಂಶವನ್ನು ನಿರ್ವಹಿಸುವ ಮೂಲಕ ರಸಗೊಬ್ಬರಗಳ ಸೂಕ್ತ ನಿರ್ವಹಣೆ ಮತ್ತು ವಿತರಣೆ ಮಾಡಬಹುದು ಎಂದು ಹೇಳಿದರು. ರೈತರಿಗೆ ದೊರೆಯಬೇಕಾದ ರಸಗೊಬ್ಬರಗಳು ಎಲ್ಲಿಯೂ ಕೈಗಾರಿಕೆಗಳ ಕಡೆಗೆ ತಿರುಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದರು. ಶೀಘ್ರದಲ್ಲೇ ದೇಶಾದ್ಯಂತ ಮಾದರಿ ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮಾತನಾಡಿ, ಬೇಸಾಯ ನಮ್ಮ ಸಂಸ್ಕೃತಿ ಮತ್ತು ನಮ್ಮ ದೇಶದ ಆರ್ಥಿಕತೆಯ ಆಧಾರ ಸ್ತಂಭವಾಗಿದೆ ಮತ್ತು ಭಾರತದ ಕೃಷಿ ಕ್ಷೇತ್ರವು ಆಹಾರ ಭದ್ರತೆಯನ್ನು ಖಾತರಿಪಡಿಸುತ್ತಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ 8 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಹಲವು ಮಹತ್ವದ ನೀತಿಗಳನ್ನು ರೂಪಿಸಿ ದೃಢವಾದ ಕೆಲಸಗಳನ್ನು ಮಾಡಲಾಗಿದೆ ಮತ್ತು 130 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ ಆಹಾರ ಉತ್ಪಾದನೆಯಲ್ಲಿ ನಮ್ಮ ದೇಶವು ಸ್ವಾವಲಂಬಿಯಾಗಿದೆ ಎಂದು ಹೇಳಿದರು. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವ ದೇಶವು ಸ್ವಾಭಿಮಾನಿ ರಾಷ್ಟ್ರವಾಗುತ್ತದೆ. ರೈತರು ಭೂಮಿಯಿಂದ ದೂರವಾದರೆ ತುಂಬಾ ಕಷ್ಟವಾಗುತ್ತದೆ, ಆದ್ದರಿಂದ ರೈತರು ತಮ್ಮ ಭೂಮಿಯೊಂದಿಗೆ ಬೆಸೆದುಕೊಂಡಿರುವುದು ಮುಖ್ಯ ಮತ್ತು ರೈತರನ್ನು ಮತ್ತಷ್ಟು ಬಲಪಡಿಸಲು ನಾವು ಪ್ರಯತ್ನಿಸಬೇಕು ಎಂದು ಹೇಳಿದರು. ರೈತರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಎಲ್ಲಾ ಅಂಶಗಳಲ್ಲಿ ಸುದೃಢರಾಗಬೇಕು ಎಂದು ಶ್ರೀ ಬೊಮ್ಮಾಯಿ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಯ ಬಗ್ಗೆ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಕೃಷಿ ಮತ್ತು ರೈತರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು. ಕೃಷಿಯಲ್ಲಿ ಹೂಡಿಕೆಯ ಮಹತ್ವವನ್ನು ವಿವರಿಸಿದ ಅವರು, ಮಣ್ಣಿನ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಅದರ ಫಲವತ್ತತೆಯನ್ನು ಹೆಚ್ಚಿಸಲು ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡಬೇಕು ಎಂದು ತಿಳಿಸಿದರು. ಪ್ರಧಾನಮಂತ್ರಿಯವರು, ಕೃಷಿ ಸಚಿವರು, ರಸಗೊಬ್ಬರ ಸಚಿವರು ಮತ್ತು ಕೇಂದ್ರ ಸರ್ಕಾರ ನೀಡಿದ ಸಹಕಾರಕ್ಕೆ ಮುಖ್ಯಮಂತ್ರಿಯವರು ಧನ್ಯವಾದ ತಿಳಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network