Header Ads Widget

ಸರ್ಚ್ ಕೂರ್ಗ್ ಮೀಡಿಯ

ಭಾರತದಲ್ಲಿ ಉತ್ಪಾದಿಸಲಾದ "ಕಮಲಂ ಫ್ರೂಟ್" ಅಂದರೆ "ಡ್ರ್ಯಾಗನ್ ಫ್ರೂಟ್" ಬೆಳೆಯ ಬ್ರ್ಯಾಂಡ್ ಆಗಿ ಮಾನ್ಯತೆ ನೀಡಲು ಕಾರ್ಯಕ್ರಮ


ಸ್ವಾವಲಂಬಿ ಭಾರತ ಅಭಿಯಾನದಡಿ ಭಾರತದಲ್ಲಿ ಉತ್ಪಾದಿಸಲಾದ "ಕಮಲಂ ಫ್ರೂಟ್" ಅಂದರೆ "ಡ್ರ್ಯಾಗನ್ ಫ್ರೂಟ್" ಬೆಳೆಯ ಬ್ರ್ಯಾಂಡ್ ಆಗಿ ಮಾನ್ಯತೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಅಭಿಲಾಶ್ ಲಿಖಿ ಅವರು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮರಳಕುಂಟೆ ಹಳ್ಳಿಯ ಕಮಲಂ [ಡ್ರ್ಯಾಗನ್ ಫ್ರೂಟ್ ] ತೋಟಕ್ಕೆ ಭೇಟಿ ನೀಡಿದರು.

ದಿನಾಂಕ 13.07.2022 ರಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮರಳಕುಂಟೆಯ ಶ್ರೀ ನಾರಾಯಣ ಸ್ವಾಮಿ ಅವರ “ಡ್ರ್ಯಾಗನ್ ಫ್ರೂಟ್ “ ತೋಟಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿದರು.

ಭಾರತದಲ್ಲಿ ಕಮಲಂ ಫ್ರೂಟ್ ಅಂದರೆ ಡ್ರ್ಯಾಗನ್ ಫ್ರೂಟ್ ಬೆಳೆಯುವವರ ಸಂಖ್ಯೆ ಸೀಮಿತವಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಛತ್ತೀಸ್ ಗಢ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಮಿಜೋರಾಂ ಮತ್ತು ನಾಗಾಲ್ಯಾಂಡ್ ನಲ್ಲಿ ಈ ಫಲವನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಒಟ್ಟಾರೆ ಡ್ರ್ಯಾಗನ್ ಫ್ರೂಟ್ ಬೆಳೆಯುವ ಪ್ರದೇಶ ಸುಮಾರು 3,000 ಹೆಕ್ಟೇರ್ ನಷ್ಟಿದೆ.

ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಅಭಿಯಾನ [ಎಂ.ಐ.ಡಿ.ಎಚ್]ದಡಿ 2021 – 22 ರ ಸಾಲಿನಲ್ಲಿ ಕಮಲಂ ಬೆಳೆಯುವ ಪ್ರದೇಶದ ವಿಸ್ತರಣಾ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲಾಗಿದೆ ಮತ್ತು ವಿವಿಧ ರಾಜ್ಯಗಳಲ್ಲಿ 4,133 ಹೆಕ್ಟೇರ್ ಪ್ರದೇಶಕ್ಕೆ ಈ ಬೆಳೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿತ್ತು. ಅನುಮೋದಿತ ಗುರಿ ಪ್ರದೇಶ ಕಾರ್ಯಕ್ರಮಗಳನ್ನು ಮಿಜೋರಾಂ, ನಾಗಾಲ್ಯಾಂಡ್, ಛತ್ತೀಸ್ ಗಢ್, ಗುಜರಾತ್, ಕರ್ನಾಟಕ, ಅಸ್ಸಾಂ, ಆಂಧ್ರಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ.

ಕಮಲಂ ನ ಮಹತ್ವವನ್ನು ಪರಿಗಣಿಸಿ 5 ವರ್ಷದ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಎಂ.ಐ.ಡಿ.ಎಚ್ ನಡಿ ಮುಂದಿನ 5 ವರ್ಷಗಳಲ್ಲಿ ಕಮಲಂ ಫಲವನ್ನು ಆಮದು ಮಾಡಿಕೊಳ್ಳುವ ಬದಲು 4,000 ಹೆಕ್ಟೇರ್ ನಿಂದ 50,000 ಹೆಕ್ಟೇರ್ ಗೆ ವಿಸ್ತರಿಸಿ ಸ್ವಾವಲಂಬಿ ಭಾರತ ಅಭಿಯಾನದಡಿ ಪ್ರಮುಖ ಸಾಧನೆ ಮಾಡಲು ಉದ್ದೇಶಿಸಲಾಗಿದೆ.

ಹಣ್ಣುಗಳ ಮೇಲೆ ಕಮಲದಂತೆ ದಳಗಳು ಮತ್ತು ಆಕಾರ ಇರುವ ಕಾರಣದಿಂದ ಈ ಹಣ್ಣನ್ನು ಕಮಲಂ ಎಂದು ಜನಪ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಭಾರತದಲ್ಲಿ ಉತ್ಪಾದಿಸಲಾದ ಕಮಲಂನ ಉತ್ಪನ್ನಗಳಿಗೆ ವಿಶೇಷ ಮಹತ್ವ ನೀಡಲು ಮತ್ತು ಭಾರತದಲ್ಲಿ ಉತ್ಪಾದಿಸಲಾದ ಬೆಳೆಯ ಬ್ರ್ಯಾಂಡ್ ಆಗಿ ಮಾನ್ಯತೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.

ಈ ಗಿಡ ಮರಳಿನ ಗೋಡು ಮಣ್ಣಿನಿಂದ ಹಿಡಿದು ಜೇಡಿ ಮಣ್ಣು ಮತ್ತು ವಿವಿಧ ತಾಪಮಾನದಲ್ಲಿ ಬದುಕುಳಿಯುತ್ತದೆ. ಅದರ ಬೇಸಾಯಕ್ಕೆ ಉಷ್ಣವಲಯದ ಹವಾಗುಣ ಹೆಚ್ಚು ಸೂಕ್ತವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆಯಾದರೂ ಡ್ರ್ಯಾಗನ್ ಫಲವನ್ನು ಸಾವಯವ ಮಾದರಿ ಮತ್ತು ಬೃಹತ್ ಕೊಳವೆಗಳಲ್ಲಿ ಗಿಡಗಳನ್ನು ಬೆಳೆಯಬಹುದಾಗಿದೆ.  

ಮೂರು ಮಾದರಿಯ ಡ್ರ್ಯಾಗನ್ ಫಲವನ್ನು ನಾವು ಮಾರುಕಟ್ಟೆಯಲ್ಲಿ ಹೆಚ್ಚಾಗಿ ನೋಡುತ್ತೇವೆ. (i) ಕೆಂಪು ಚರ್ಮದೊಂದಿಗೆ ಕೆಂಪು ಅಂಶ ಹೊಂದಿರುವ, (ಹೈಲೊಸೆರಿಯುಸ್ಕೋಸ್ಟಾರಿಕ್ಸೆನ್ಸಿಸ್), (ii) ಕೆಂಪು ಚರ್ಮದೊಂದಿಗೆ ಬಿಳಿ ಅಂಶ ಹೊಂದಿರುವ (ಹೈಲೊಸೆರೆಯುಸುಂಡಟಸ್) ಮತ್ತು (iii) ಹಳದಿ ಚರ್ಮದೊಂದಿಗೆ ಬಿಳಿ ಅಂಶ ಹೊಂದಿರುವ (ಹೈಲೊಸೆರಿಯಸ್ ಮೆಗಲಂಥಸ್) ಫಲಗಳನ್ನು ನಾವು ಕಾಣುತ್ತೇವೆ. ಇವುಗಳಲ್ಲದೇ ಹಳದಿಯಿಂದ ಆಳವಾದ ಮೆಜೆಂಟಾ ಅಥವಾ ಗಾಢ ಕೆಂಪು ಬಣ್ಣದವರೆಗೆ ವಿಭಿನ್ನ ಚರ್ಮ ಮತ್ತು ಬಣ್ಣ ಸಂಯೋಜನೆಗಳನ್ನು ಹೊಂದಿರುವ ಹಲವಾರು ಮಿಶ್ರ ತಳಿಗಳು ಪ್ರಪಂಚದ ವಿವಿಧ ಬಾಗಗಳಲ್ಲಿವೆ.

ಡ್ರ್ಯಾಗನ್ ಹಣ್ಣಿನ ಬಿತ್ತನೆಯ ಸಾಮಾನ್ಯ ವಿಧಾನವೆಂದರೆ 20 ರಿಂದ 30 ಸೆಂಟಿಮೀಟರ್ ಬೇರುಗಳನ್ನು ಹೊಲದಲ್ಲಿ ನೆಡಲಾಗುತ್ತದೆ. ಕೋಲುಗಳ ಆಧಾರದ ಮೇಲೆ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಗಿಡಗಳ ಸರಿಯಾದ ನೇರ ಬೆಳವಣಿಗೆಗೆ ಸಹಕಾರಿಯಾಗುವಂತೆ ಮತ್ತು ಅಭಿವೃದ್ಧಿ ಕಾಣಲು ಕಾಂಕ್ರಿಟ್ ಅಥವಾ ಮರದ ಕಾಲಂಗಳಿಂದಲೂ ಸಹ ನೆರವು ಪಡೆಯಲಾಗುತ್ತದೆ. ಟೈರ್ ಗಳು ಅಥವಾ ಕಾಂಕ್ರೀಟ್ ಚೌಕಾಕಾರದ ರಚನೆಗಳಲ್ಲೂ ಸಹ ಇದನ್ನು ಬೆಳೆಯಲಾಗುತ್ತದೆ. ಇದು ಮಣ್ಣಿನ ಸವೆತ ತಪ್ಪಿಸಲಿದೆ. ಕೃಷಿ ಚಟುವಟಿಕೆ ನಡೆಸುತ್ತಿರುವ ಪ್ರದೇಶದ ನಡುವೆ ಗಿಡಗಳನ್ನು ಬೆಳೆಸಲು ಮರದ ಅಥವಾ ಕಾಂಕ್ರಿಟ್ ಸ್ತಂಭಗಳನ್ನು ನಿರ್ಮಿಸಬೇಕಾಗುತ್ತದೆ. ನೆಟ್ಟ ಗಿಡ ಬೆಳೆಯಲು ಪ್ರಾರಂಭಿಸಿದ ನಂತರ ಕಾಂಡಗಳನ್ನು ಈ ಸ್ತಂಭದೊಳಗೆ ಕಟ್ಟಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಸ್ತಂಭಕ್ಕೆ ನಾಲ್ಕು ಸಸಿಗಳನ್ನು ನೆಡಲಾಗುತ್ತದೆ. ಸ್ತಂಭದಲ್ಲಿ 90 ಸೆಂಟಿಮೀಟರ್ ಎತ್ತರ ಬೆಳೆದ ನಂತರ ಕಾಂಡ ಕವಲೊಡೆಯುವಂತೆ ಮಾಡಲಾಗುತ್ತದೆ. ಒಂದು ರಚನೆಯಿಂದ ಮತ್ತೊಂದು ರಚನೆ ಮತ್ತು ಒಂದು ಸಾಲಿನಿಂದ ಮತ್ತೊಂದು ಸಾಲಿನ ನಡುವೆ 3 ಮೀಟರ್ ಅಂತರ ಇರಲಿದೆ. ಡ್ರ್ಯಾಗನ್ ಪೊದೆ ಸಮತೋಲಿತವಾಗಿ ಜೋತುಬೀಳುವ ರೂಪದಲ್ಲಿ ನಿರ್ವಹಿಸಲು ಸ್ತಂಭದ ಮೇಲ್ಭಾಗದಲ್ಲಿ ದುಂಡಗಿನ ಮತ್ತು ವೃತ್ತಾಕಾರದ ಲೋಹದ ಚೌಕಟ್ಟು ಇಲ್ಲವೆ ಕಾಂಕ್ರೀಟ್ ನಿಂದ ಚೌಕಾಕಾರದ ರಚನೆಯನ್ನು ನಿರ್ಮಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಡ್ರ್ಯಾಗನ್ ಫಲದ ಕೃಷಿಯಲ್ಲಿ ಸಾವಯವ ಗೊಬ್ಬರ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿಯೊಂದು ಗಿಡಕ್ಕೆ 10 ರಿಂದ 15 ಕೆ.ಜಿ. ಸಾವಯವ ಮಿಶ್ರ ಗೊಬ್ಬರ/ಸಾವಯವ ಗೊಬ್ಬರ ಹಾಕಬೇಕಾಗುತ್ತದೆ. ಬಳಿಕ ಪ್ರತಿ ವರ್ಷ ಎರಡು ಕೆ.ಜಿಯಷ್ಟು ಗೊಬ್ಬರವನ್ನು ಹೆಚ್ಚಿಸಬಹುದಾಗಿದೆ. ಡ್ರ್ಯಾಗನ್ ಫಲ ಕ್ಯಾಕ್ಟಿ ವರ್ಗಕ್ಕೆ ಸೇರಿರುವುದರಿಂದ ಕಡಿಮೆ ನೀರು ಸಾಕಾಗುತ್ತದೆ. ಆದಾಗ್ಯೂ ನಾಟಿ, ಹೂ ಬಿಡುವ, ಹಣ್ಣಿನ ಬೆಳವಣಿಗೆಯ ಹಂತ ಮತ್ತು ಶುಷ್ಕ ಹವಾಮಾನದ ಪರಿಸ್ಥಿತಿಗಳಲ್ಲಿ ಆಗಿಂದಾಗ್ಗೆ ನೀರು ಹರಿಸುವ ಅಗತ್ಯವಿದೆ. ಪರಿಣಾಮಕಾರಿ ನೀರು ಪೂರೈಕೆಗಾಗಿ ಹನಿ ನೀರಾವರಿ ಕ್ರಮ ಅನುಸರಿಸಬಹುದಾಗಿದೆ. ಆಂಥ್ರಾಕ್ನೋಸ್ ಮತ್ತು ಶಿಲೀಂಧ್ರದ ಚುಕ್ಕೆಗಳು ಇದಕ್ಕೆ ಕಂಡು ಬರುವ ಎರಡು ಪ್ರಮುಖ ರೋಗ ಬಾಧೆಗಳಾಗಿವೆ.

ಹೂವು ಬಿಟ್ಟ ನಂತರ ಡ್ರ್ಯಾಗನ್ ಫಲವನ್ನು 25 ರಿಂದ 35 ದಿನಗಳ ಅವಧಿಯಲ್ಲಿ ಕೋಯ್ಲು ಮಾಡಬಹುದಾಗಿದೆ. ಹಣ್ಣಿನ ಕೋಯ್ಲಿನ ಸಂದರ್ಭದಲ್ಲಿ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾಗುವ ಹಂತಗಳನ್ನು ಗಮನಿಸಬಹುದು. ಬಣ್ಣ ಬದಲಾವಣೆಯ ನಂತರ 3 ರಿಂದ 4 ದಿನಗಳಲ್ಲಿ ಕೊಯ್ಲು ಮಾಡಿ ಸ್ಥಳೀಯ ಮಾರುಕಟ್ಟೆಗಳಿಗೆ ಸಾಗಿಸುವುದು ಇದರ ನಿಖರವಾದ ಸಮಯವಾಗಿದೆ. ದೂರದ ಪ್ರದೇಶಗಳಿಗೆ ಸಾಗಣೆ ಮಾಡುವ/ರಫ್ತು ಮಾಡುವಂತಿದ್ದರೆ ಬಣ್ಣ ಬದಲಾವಣೆಯಾಗುತ್ತಿರುವಾಗಲೇ ಕೋಯ್ಲು ಮಾಡಬೇಕಾಗುತ್ತದೆ. ಈ ಫಲವನ್ನು ಚೂರಿ ಇಲ್ಲವೆ ಕುಡಗೋಲು ಬಳಸಿ ಕಟಾವು ಮಾಡಲಾಗುತ್ತದೆ.

ಡ್ರ್ಯಾಗನ್ ಫಲದ ಬೆಳೆ ಬೆಳೆಯಲು ಆರಂಭಿಕ ಹಂತದಲ್ಲಿ, ವಿಶೇಷವಾಗಿ ಗಿಡಗಳಿಗೆ ನೆರವಾಗಲು ನಿರ್ಮಿಸುವ ಟ್ರಿಲ್ಲರ್ ಗಳು ಮತ್ತಿತರ ವೆಚ್ಚ ಹೆಚ್ಚಾಗಿರುತ್ತದೆ. ಒಮ್ಮೆ ಗಿಡ ಬೆಳವಣಿಗೆಯಾದರೆ ನಿರಂತರವಾಗಿ 20 ವರ್ಷಗಳ ಕಾಲ ಫಲವನ್ನು ತೆಗೆಯಬಹುದಾಗಿದೆ. ಎರಡನೇ ವರ್ಷದ ನಂತರ ಡ್ರ್ಯಾಗನ್ ಫಲದ ಇಳುವರಿ ದೊರೆಯುತ್ತದೆ. ಮೂರನೇ ವರ್ಷದ ಕೊನೆಗೆ ಪ್ರತಿಯೊಂದು ಹೆಕ್ಟೇರ್ ನಲ್ಲಿ 10000-12000 ಕೆ.ಜಿ. ಫಲ ದೊರೆಯಲಿದೆ.

ದ್ವೀಪ ಪ್ರದೇಶ ಅಂಡಮಾನ್ ನ ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆ –ಐಸಿಎಆರ್ ಕೃಷಿಕರ ಜೀವನೋಪಾಯ ಆಯ್ಕೆಗಳನ್ನು ಹೆಚ್ಚಿಸಲು ಅಗಾಧವಾದ ಕ್ರಮಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಇದು ಕೃಷಿ – ಪ್ರವಾಸೋದ್ಯಮ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.