Header Ads Widget

ಸರ್ಚ್ ಕೂರ್ಗ್ ಮೀಡಿಯ

ಸೆ.1 ರಿಂದ ಮುಂಗಾರು ಬೆಳೆ ಸಮೀಕ್ಷೆ ಆರಂಭ: ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ


ಸೆ.1 ರಿಂದ ಮುಂಗಾರು ಬೆಳೆ ಸಮೀಕ್ಷೆ ಆರಂಭ: ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ

ಮಡಿಕೇರಿ ಆ.25: ಕೊಡಗು ಜಿಲ್ಲೆಯಲ್ಲಿ ಒಟ್ಟು 525 ಹಳ್ಳಿಗಳಲ್ಲಿ 2,90,972 ಸರ್ವೆ ನಂಬರ್‍ಗಳಿದ್ದು, ಈ ಸರ್ವೆ ನಂಬರ್‍ಗಳ ಪೈಕಿ 2,60,610 ತಾಕುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಕಾರ್ಯ ಕೊಡಗು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 01 ರಿಂದ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಆದೇಶದ ಅನುಸಾರ ಈ ಬಾರಿಯ ರೈತರ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ  ಕಲ್ಪಿಸಲಾಗಿದೆ. ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು “Farmer Crop Survey App-2022-23” ಎಂಬ ಹೆಸರಿನ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇ-ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಆ್ಯಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 353 ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ ಎಂದರು. 

ರೈತರು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ಬಳಸಲು ಗೂಗಲ್ ಪ್ಲೆಸ್ಟೋರ್ ನಲ್ಲಿ “Farmer Crop Survey App-2022-23” ನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಆರ್ಥಿಕ ವರ್ಷ ಹಾಗೂ ಋತು ದಾಖಲಿಸಬೇಕು. ರೈತರ ಹೆಸರು, ಮೊಬೈಲ್ ಸಂಖ್ಯೆ OTP ನಮೂದಿಸಿ ರೈತರು ತಮ್ಮ ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು. ರೈತರ ಆಧಾರ್ ಕಾರ್ಡ್‍ನ್ನು ಸ್ಕ್ಯಾನ್ ಮಾಡುವುದು, ಸ್ಕ್ಯಾನ್ ಆಗದೇ ಇದ್ದಲ್ಲಿ ನಿಗದಿತ ನಮೂನೆಯಂತೆ ವಿವರ ದಾಖಲಿಸುವುದು. ಮೊಬೈಲ್ ಆಪ್‍ನಲ್ಲಿ ಮೊದಲು ಮಾಸ್ಟರ್ ವಿವರ, ಪಹಣಿ ವಿವರ ಮತ್ತು ಮಾಲೀಕರ ವಿವರ, ಪಾಲಿಗಾನ್ ಹಾಗೂ ಜಿಐಎಸ್. ಮ್ಯಾಪ್ ಡೌನ್‍ಲೋಡ್ ಮಾಡಿಕೊಳ್ಳುವುದು. ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ತಮ್ಮ ಜಮೀನಿನ ಸರ್ವೆ ನಂಬರ್‍ಗಳನ್ನು ಆಪ್‍ಗೆ ಸೇರಿಸಿಕೊಳ್ಳಬೇಕು ಹಾಗೂ ಹಿಸ್ಸಾ ಇದ್ದರೆ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು. 

ಆಧಾರ್‍ನಲ್ಲಿರುವ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ಹೊಂದಾಣಿಕೆಯಾಗದಿದ್ದಲ್ಲಿ ಕೆಳಗೆ ಕೊಟ್ಟಿರುವ 3 ಆಯ್ಕೆಗಳಲ್ಲಿ ತಮಗೆ ಅನ್ವಯಿಸುವ ಒಂದನ್ನು ಆರಿಸುವುದು. ಬೆಳೆ ಸರ್ವೆ ಪ್ರಾರಂಭಿಸಿ ಕ್ಲಿಕ್ ಮಾಡುವುದು. ಮಾಲೀಕರ ಹೆಸರು ಆಯ್ಕೆ ಮಾಡಿ, ಕ್ಷೇತ್ರ ನಮೂದಿಸುವುದು. ಮಾಲೀಕರ ಪರವಾಗಿ ಇನ್ನೊಬ್ಬರ ಬೆಳೆ ದಾಖಲೆ ಮಾಡುತ್ತಿದ್ದರೆ ರೈತರ ಪರವಾಗಿ ಬೆಳೆ ಮಾಹಿತಿಯನ್ನು ದಾಖಲಿಸುತ್ತಿದ್ದೇನೆಂದು ಆಯ್ಕೆ ಮಾಡುವುದು. ರೈತರ ಪರವಾಗಿ ದಾಖಲಿಸುತ್ತಿದ್ದರೆ, ಈ ರೈತರ ಮೊಬೈಲ್ ನಂಬರ್‍ನ್ನು ಮತ್ತು ಆಧಾರ್‍ನ್ನು ದಾಖಲಿಸಿ ಮಾಹಿತಿಯನ್ನು ಡೌನ್‍ಲೋಡ್ ಮಾಡುವುದು. ರೈತರ ಹೊಲಕ್ಕೆ ಹೋಗಿ ಸರ್ವೆ ನಂಬರ್‍ನ ಗಡಿ ರೇಖೆಯೊಳಗೆ ನಿಂತು ವಿವರ ದಾಖಲಿಸುವಂತೆ ಕೋರಿದರು. 

ಮೊದಲು ಕೃಷಿಯೇತರ ಜಾಗವನ್ನು ದಾಖಲಿಸಿ 2 ಫೋಟೋ ತೆಗೆಯುವುದು, ನಂತರ ಪಾಳು ಬಿದ್ದ ಅಥವಾ ಕಟವಾದ ಪ್ರದೇಶದ ಮಾಹಿತಿಯನ್ನು ಸೇರಿಸಿ 2 ಫೋಟೋ ತೆಗೆಯುವುದು, ನಂತರ ಮೊದಲು ಬಹುವಾರ್ಷಿಕ ಬೆಳೆಗಳನ್ನು ದಾಖಲಸಿ ನಂತರ ವಾರ್ಷಿಕ ಬೆಳೆಗಳನ್ನು ದಾಖಲಿಸುವುದು. ಎಲ್ಲಾ ಮಾಹಿತಿಯನ್ನು ಉಳಿಸಿದ ನಂತರ ಅಪ್ಲೋಡ್ ಮಾಡಿ ಮಾಹಿತಿಗಳನ್ನು ಸೇರಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬನಾ ಎಂ.ಶೇಖ್ ಅವರು ಹೇಳಿದರು. 

ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು ಮೇಲ್ವಿಚಾರಕರು (Supervisors)”  ಎಂಬ ಪರಿಶೀಲಿಸಿ ಅನುಮೋದಿಸುತ್ತಾರೆ. ಜಿಲ್ಲೆಯಲ್ಲಿ ಒಟ್ಟು 96 ಮೇಲ್ವಿಚಾರಕರನ್ನು ನೇಮಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ರೈತರು ದಾಖಲಿಸಿದ ಬೆಳೆ ವಿವರಕ್ಕೂ, ಛಾಯಾಚಿತ್ರಕ್ಕೂ ತಾಳೆಯಾಗದ ಸಂದರ್ಭದಲ್ಲಿ ಮೇಲ್ವಿಚಾರಕರು ಅಂತಹ ಮಾಹಿತಿಯನ್ನು ತಿರಸ್ಕರಿಸಿ ಮರು-ಸಮೀಕ್ಷೆಗೆ ಖಾಸಗೀ ನಿವಾಸಿಗಳಿಗೆ ಕಳುಹಿಸುತ್ತಾರೆ ಎಂದರು. 

ಒಂದು ವೇಳೆ, ರೈತರು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಹಾಯ ಮಾಡುವುದಾದರೆ ಅವರ ಸರ್ವೆ ನಂಬರ್‍ಗಳನ್ನು ಸಹ ತಮ್ಮ ಮೊಬೈಲ್ ಆಪ್‍ನಲ್ಲಿ ಸೇರಿಸಿಕೊಂಡು ಅವರ ಜಮೀನಿನ ವಿವರ ದಾಖಲಿಸಲೂ ಸಹ ಮೊಬೈಲ್ ಆಪ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು. 

ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ನಾರಾಯಣ ರೆಡ್ಡಿ ಅವರು ಮಾತನಾಡಿ ಸಂಗ್ರಹಿಸಲಾದ ರೈತರ ಬೆಳೆ ಸಮೀಕ್ಷೆ ಮಾಹಿತಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು. ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು. ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ. ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು. ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ. ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಬೇಕು ಎಂದರು. 

ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ರೈತರು ಈ ಅವಕಾಶದ ಸದುಪಯೋಗ ಪಡೆದುಕೊಂಡು “ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ತಾವೇ ಸರ್ಕಾರಕ್ಕೆ ನಿಗದಿತ ಸಮಯದೊಳಗೆ ವರದಿ ಮಾಡುವಂತೆ ಅವರು ಕೋರಿದರು.  

ಹೆಚ್ಚಿನ ಮಾಹಿತಿಗೆ ಕೇಂದ್ರ ಕಚೇರಿಯ ಸಹಾಯವಾಣಿ ಸಂಖ್ಯೆ:7848914915, ತಮ್ಮ ಗ್ರಾಮದ ಖಾಸಗಿ ನಿವಾಸಿಯನ್ನು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು, ತಮ್ಮ ಗ್ರಾಮದ ಗ್ರಾಮ ಲೆಕ್ಕಿಗರನ್ನು ಅಥವಾ ನಾಡ ಕಚೇರಿ  ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಶಬನಾ ಎಂ.ಷೇಕ್ ಅವರು ನುಡಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶಿವಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ತಹಶೀಲ್ದಾರ್ ಮಹೇಶ್, ಗೋವಿಂದರಾಜು, ಅರ್ಚನ, ಪ್ರಶಾಂತ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗೌರಿ, ಭೂದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ಇತರರು ಇದ್ದರು.