ಆ.29 ರಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ಒಟ್ಟು ರೂ.2736.39 ಲಕ್ಷಗಳ ವಹಿವಾಟು ನಡೆಸುವ ಮೂಲಕ ರೂ.50.42 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಶೇ.15ರಂತೆ ಡಿವಿಡೆಂಟ್ ನೀಡಲಾಗುವುದು ಎಂದರು.
ಸಂಘದಲ್ಲಿ 2021-22ನೇ ಸಾಲಿನ ಒಟ್ಟು ‘ಎ’ ತರಗತಿಯ 1116 ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳವಾಗಿ ರೂ.120.42 ಲಕ್ಷಗಳಿರುತ್ತದೆ. ಕ್ಷೇಮ ನಿಧಿ ಸೇರಿ ಇತರೆ ನಿಧಿಗಳು ರೂ.236.27 ಲಕ್ಷ ಹಾಗೂ ನಿರುಖು ಠೇವಣಿ, ಸಂಚಯ ಠೇವಣಿ ಹಾಗೂ ಇತರೆ ಠೇವಣಿ ಸೇರಿ ಒಟ್ಟು ರೂ.1296.17 ಲಕ್ಷಗಳಿರುತ್ತದೆ. ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರುಖು ಠೇವಣಿಯಲ್ಲಿ ಹಾಗೂ ಇತರೆ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ರೂ.470.41 ಲಕ್ಷಗಳನ್ನು ಠೇವಣಿ ಮಾಡಲಾಗಿದೆ ಎಂದು ತಿಳಿಸಿದರು.
ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ 2021-22ನೇ ಸಾಲಿನಲ್ಲಿ ರೂ.1627.66 ಲಕ್ಷಗಳ ಸಾಲ ವಿತರಿಸಲಾಗಿದೆ ಎಂದರು. ಎಂ.ಸಿ.ಎಫ್ ಮದ್ರಾಸ್ ಫರ್ಟಿಲೈಸರ್ಸ್, ಇಂಡಿಯನ್ ಪೊಟ್ಯಾಷ್ ಇಫ್ಕೊ, ಫ್ಯಾಕ್ಟ್, ಫ್ಯೂಚರ್ ಫರ್ಟಿಲೈಸರ್ಸ್, ಜುವಾರಿ, ಕೋರಮಂಡಲ್ ಸಂಸ್ಥೆಗಳ ಸಗಟು ಲೈಸನ್ಸ್ ಹೊಂದಿದ್ದು, ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ 2021-22ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಮಾಗ್ರಿ ಬಾಪ್ತು ರೂ.543.49 ಲಕ್ಷಗಳ ವಹಿವಾಟು ಮೂಲಕ ರೂ.28.49 ಲಕ್ಷಗಳ ವ್ಯಾಪಾರ ಲಾಭಗಳಿಸಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ ಪುಣ್ಯಕೋಟಿ ಅತಿಥಿಗೃಹ ನಿರ್ಮಿಸಿದ್ದು, ಬಾಡಿಗೆಗೆ ನೀಡುತ್ತಿದ್ದೇವೆ. ಆಸಕ್ತರು ವ್ಯಾಪಾರ ಮಳಿಗೆಯನ್ನು ಮುಂಗಡವಾಗಿ ಕಾಯ್ದಿರಿಸಬಹುದು ಎಂದು ಮಣಿಉತ್ತಪ್ಪ ತಿಳಿಸಿದರು.
ಮಹಾಸಭೆಗೂ ಮೊದಲು ಬೆಳಗ್ಗೆ ಸಂಘದ ಈರಳೆವಳಮುಡಿ ಶಾಖೆಯ ಪಂಚಮುಖಿ ವಾಯುಪುತ್ರ ವಾಣಿಜ್ಯ ಸಂಕೀರ್ಣ ಹಾಗೂ ವಸತಿಗೃಹಗಳ ಉದ್ಘಾಟನಾ ಕಾರ್ಯಕ್ರಮ ಗಣಪತಿ ಹೋಮದೊಂದಿಗೆ ನೆರವೇರಲಿದೆ ಎಂದರು. ಆ.29 ರಂದು ಸಂಘದ 45ನೇ ಮಹಾಸಭೆಯು ಶ್ರೀ ನರೇಂದ್ರಮೋದಿ ಭವನದಲ್ಲಿ ನಡೆಯಲಿದ್ದು, ಸದಸ್ಯರುಗಳು ತಪ್ಪದೆ ಸಭೆಗೆ ಹಾಜರಾಗುವಂತೆ ಮನವಿ ಮಾಡಿದರು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಸಂಘ ಪ್ರಗತಿಯತ್ತ ಸಾಗುತ್ತಿದೆ. ಸಾಲಗಳು ಮುಗಿದು ಲಾಭದ ಹಾದಿಯಲ್ಲಿದೆ, ರೈತ ಸಹಕಾರಿಗಳಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ನಾವು ಮಾಡಿದ್ದೇವೆ.
ನರೇಂದ್ರಮೋದಿ ಭವನ, ಪುಣ್ಯಕೋಟಿ ಭವನ ನಿರ್ಮಾಣ ಮಾಡಿದ್ದೇವೆ, ರೂ.5 ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರು ನೀಡುತ್ತಿದ್ದೇವೆ, ಗೊಬ್ಬರ ಸೇರಿದಂತೆ ಎಲ್ಲಾ ಕೃಷಿ ಪರಿಕರಗಳನ್ನು ಸಂಘದ ಮೂಲಕ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ. ರೈತರ ಅನುಕೂಲಕ್ಕಾಗಿ ಕಾಫಿ ಗುಣಮಟ್ಟ ಪರಿಶೀಲನಾ ಯಂತ್ರ ಮತ್ತು ಅಲ್ಲದೆ ಮಣ್ಣು ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಿದ್ದೇವೆ. ಇದೀಗ 93 ವರ್ಷಗಳಷ್ಟು ಹಳೆಯದಾದ ಈರಳೆವಳಮುಡಿ ಶಾಖೆಯ ಕಟ್ಟಡವನ್ನು ಅಭಿವೃದ್ಧಿ ಪಡಿಸಿ ಪಂಚಮುಖಿ ವಾಯುಪುತ್ರ ವಾಣಿಜ್ಯ ಸಂಕೀರ್ಣ ಹಾಗೂ ವಸತಿಗೃಹಗಳನ್ನು ನಿರ್ಮಾಣ ಮಾಡಿ ಉದ್ಘಾಟಿಸುತ್ತಿದ್ದೇವೆ.
ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಸಹಕಾರ ಇಲಾಖೆ ಮತ್ತು ಸರ್ಕಾರ ನಮ್ಮನ್ನು ಹಾಗೂ ನಮ್ಮ ಸಂಘವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಇನ್ನಾದರೂ ಚೆಟ್ಟಳ್ಳಿ ಸಹಕಾರ ಸಂಘದ ಸಾಧನೆ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಮಣಿಉತ್ತಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಣಜಾಲು ಕೆ.ಪೂವಯ್ಯ, ನಿರ್ದೇಶಕರುಗಳಾದ ಮರದಾಳು ಎಸ್.ಉಲ್ಲಾಸ, ಟಿ.ಎಸ್.ಧನಂಜಯ, ಪುತ್ತರೀರ ಪಿ.ನಂಜಪ್ಪ ಹಾಗೂ ನಿರ್ದೇಶಕ ಅಡಿಕೇರ ಈ.ಮುತ್ತಪ್ಪ ಉಪಸ್ಥಿತರಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network