Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ಯಾನಲ್ ವಕೀಲರುಗಳಿಗೆ ನಡೆದ ತರಬೇತಿ ಕಾರ್ಯಕ್ರಮ


ಪ್ಯಾನಲ್ ವಕೀಲರುಗಳಿಗೆ ನಡೆದ ತರಬೇತಿ ಕಾರ್ಯಕ್ರಮ

ಯಾವುದೇ ವೃತ್ತಿಯಲ್ಲಿ ಜ್ಞಾನಾರ್ಜನೆಯು ನಿರಂತರವಾಗಿರಬೇಕು: ಎಂ.ಭೃಂಗೇಶ್

ಮಡಿಕೇರಿ ಆ.24: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಡಿಕೇರಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪ್ಯಾನಲ್ ವಕೀಲರುಗಳಿಗೆ ತರಬೇತಿ ಕಾರ್ಯಕ್ರಮವು ನಗರದ ರೋಟರಿ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು. 

ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಎಂ.ಭೃಂಗೇಶ್ ಅವರು ಮಾತನಾಡಿ ಹೊಸದಾಗಿ ವಕೀಲ ವೃತ್ತಿಯನ್ನು ಆರಂಭಿಸುವ ವಕೀಲರುಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಪ್ಯಾನಲ್ ವಕೀಲರಾಗಿ ನೇಮಕವಾಗುವುದು ಮತ್ತು ಉಚಿತ ವಕೀಲರಾಗಿ ಸೇವೆ ಸಲ್ಲಿಸುವುದು ಅವರುಗಳು ಭವಿಷ್ಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಅನುಭವ ಮತ್ತು ಯಶಸ್ಸು ಗಳಿಸಲು ಸಹಕಾರಿಯಾಗುತ್ತದೆ ಎಂದರು. 

ಯಾವುದೇ ವೃತ್ತಿಯಲ್ಲಿ ಜ್ಞಾನಾರ್ಜನೆಯು ನಿರಂತರವಾಗಿರಬೇಕು. ಆಗ ಮಾತ್ರ ವೃತ್ತಿಯಲ್ಲಿ ಘನತೆ ಮತ್ತು ಗೌರವ ಗಳಿಸಲು ಮತ್ತು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

ವಕೀಲರ ಸಂಘದ ಅಧ್ಯಕ್ಷರಾದ ಕೆ.ಡಿ.ದಯಾನಂದ ಅವರು ಮಾತಾನಾಡಿ ಪ್ಯಾನಲ್ ವಕೀಲರುಗಳಿಗೆ ತರಬೇತಿ ಕಾರ್ಯಕ್ರಮವು ಯುವ ವಕೀಲರುಗಳಿಗೆ ಉತ್ತಮ ಅವಕಾಶ ನೀಡುತ್ತದೆ. ಆ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಸರಿಯಾಗಿ ಬಳಸಿಕೊಂಡು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಿರಿಯ ವಕೀಲರಾದ ಎಂ.ಎ.ನಿರಂಜನ್ ಅವರು ಮಾತನಾಡಿ ವಕೀಲ ವೃತ್ತಿಯ ಪ್ರಾರಂಭದಿಂದಲೇ ನ್ಯಾಯಾಂಗ ವ್ಯವಸ್ಥೆ ಘನತೆಯನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬ ವಕೀಲನು ಸಹ ಇಡೀ ವಕೀಲ ಸಮುದಾಯವನ್ನು ಪ್ರತಿನಿಧಿಸುವುದರಿಂದ ಯಾವ ವಕೀಲರು ಸಹ ನ್ಯಾಯಾಂಗ ವ್ಯವಸ್ಥೆಗೆ ಚ್ಯುತಿ ಬಾರದಂತೆ ಗೌರಯುತವಾಗಿ ನೆಡೆದುಕೊಳ್ಳಬೇಕು. ಸಮಾಜದ ನ್ಯಾಯ ವಂಚಿತ ಜನರಿಗೆ ತಮ್ಮ ಉಚಿತ ಕಾನೂನು ಸೇವೆಯು ಕಲ್ಪಿಸಬೇಕು  ಎಂದು ಆಶಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಕೆ.ಬಿ.ಪ್ರಸಾದ್ ಅವರು ಮಾತಾನಾಡಿ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯ ಬಗ್ಗೆ ವಿವರಿಸಿ ಸಮಾಜದಲ್ಲಿ ನ್ಯಾಯಾಲಯದ ಬಾಗಿಲು ತಟ್ಟಲು ಇರುವ ಅಡಚಣೆಗಳಾದ ಹಣ, ಲಿಂಗ, ವಯಸ್ಸು ಮತ್ತಿತರವುಗಳಿಂದ ಯಾವುದೇ ವ್ಯಕ್ತಿಯೂ ನ್ಯಾಯ ಪಡೆಯುವಲ್ಲಿ ವಂಚಿತನಾಗಬಾರದು ಎಂದರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ಕೆ.ಸಿ.ಕಾರ್ಯಪ್ಪ ಅವರು ಹಾಜರಿದ್ದರು.