Header Ads Widget

Responsive Advertisement

ಕೆಎಸ್‍ಎಫ್‍ಸಿಗೆ 66.61 ಕೋಟಿ ರೂ.ನಿವ್ವಳ ಲಾಭ; ಮಹಾಸಭೆಯಲ್ಲಿ ವಾರ್ಷಿಕ ವರದಿ ಬಿಡುಗಡೆ


ಕೆಎಸ್‍ಎಫ್‍ಸಿಗೆ 66.61 ಕೋಟಿ ರೂ.ನಿವ್ವಳ ಲಾಭ; ಮಹಾಸಭೆಯಲ್ಲಿ ವಾರ್ಷಿಕ ವರದಿ ಬಿಡುಗಡೆ

ಮಡಿಕೇರಿ ಆ.24: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2021-22 ನೇ ಆರ್ಥಿಕ ವರ್ಷದಲ್ಲಿ 66.61 ಕೋಟಿ ರೂ. ನಿವ್ವಳ ಲಾಭ ಹಾಗೂ ತೆರಿಗೆ ಪೂರ್ವ 107.33 ಕೋಟಿ ರೂ. ದಾಖಲೆಯ ಲಾಭ ಗಳಿಸಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಸ್ಥೆಯ 63 ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಕರೂಪ್ ಕೌರ್ ಸಂಸ್ಥೆಯ ಷೇರುದಾರರಿಗೆ ವಾರ್ಷಿಕ ವರದಿಯ ಬಗ್ಗೆ ತಿಳಿಸಿದರು.

ಸಂಸ್ಥೆಯು 2021-22 ನೇ ಹಣಕಾಸು ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 493.25 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದ್ದು, ಇದರಲ್ಲಿ 432.72 ಕೋಟಿ ರೂ. ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಘಟಕಗಳಿಗೆ ಮಂಜೂರಾಗಿದೆ.

2022 ರ ಮಾರ್ಚ್ ಅಂತ್ಯದವರೆಗೆ 1,75,123 ಉದ್ಯಮಗಳಿಗೆ 18,779.63 ಕೋಟಿ ರೂ.ಗಳ ಸಂಚಿತ ಸಾಲ ಮಂಜೂರಾತಿ ಮಾಡಲಾಗಿದೆ. ಈ ವರ್ಷದಲ್ಲಿ 386.46 ಕೋಟಿ ರೂ.ಗಳ ಸಾಲ ವಿತರಿಸಿದ್ದು, 2022 ರ ಮಾರ್ಚ್ ಅಂತ್ಯದವರೆಗೆ 14,776.29 ಕೋಟಿ ರೂ.ಗಳಷ್ಟು ಸಂಚಿತ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ವರ್ಷದಲ್ಲಿ ಒಟ್ಟು 741.89  ಕೋಟಿ ರೂ.ಗಳ ವಸೂಲಾತಿ ಮಾಡಲಾಗಿದೆ. ಇದರಲ್ಲಿ 317.64 ಕೋಟಿ ರೂ.ಗಳಷ್ಟು ಮೊತ್ತವು ಬಡ್ಡಿಯ ಪಾಲಾಗಿರುತ್ತದೆ. 2022 ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಸೂಲಾತಿಯ ಮೊತ್ತವು 19,259.93 ಕೋಟಿ ರೂ. ಅಷ್ಟಾಗಿರುತ್ತದೆ. ಹಾಗೆಯೇ ಹಿಂದಿನ ಹಣಕಾಸು ವರ್ಷ ಶೇ.5.09 ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇ.4.74ಕ್ಕೆ ಇಳಿದಿದೆ.

ರಾಜ್ಯ ಸರ್ಕಾರದ ಬೆಂಬಲದೊಂದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಯೋಜನೆಗಳಲ್ಲಿ 37 ಮಹಿಳಾ ಉದ್ಯಮಿಗಳಿಗೆ 42.76 ಕೋಟಿ ರೂ. ಮಂಜೂರಾತಿ ಮಾಡಲಾಗಿದೆ. 31 ನೇ ಮಾರ್ಚ್ 2022 ರ ಅಂತ್ಯದವರೆಗೆ 917.34 ಕೋಟಿ ರೂ.ಗಳ ಸಂಚಿತ ನೆರವನ್ನು 1,252 ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ. ಹಾಗೆಯೇ 177 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 164.61 ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ಹಣಕಾಸು ವರ್ಷದ ಅಂತ್ಯದವರೆಗೆ 1,942.19 ಕೋಟಿ ರೂ.ಗಳ ಸಂಚಿತ ನೆರವನ್ನು 3,456 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ನೀಡಲಾಗಿದೆ.

ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ 213 ಘಟಕಗಳಿಗೆ 243.02 ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಸದರಿ ಹಣಕಾಸು ವರ್ಷದ ಅಂತ್ಯದವರೆಗೆ, 912 ಉದ್ಯಮಗಳಿಗೆ 995.20 ಕೋಟಿ ರೂ.ಗಳ ಸಂಚಿತ ನೆರವನ್ನು ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಕರೂಪ್ ಕೌರ್ ಅವರು ತಿಳಿಸಿದ್ದಾರೆ.