ಆಗಸ್ಟ್ 24ರಿಂದ 27ರವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಕ್ರಮವನ್ನು ಅ.ಕೊ.ಸ ಹಾಗೂ ಅ.ಕೊ.ಸ.ಯೂ.ವಿ ಸ್ವಾಗತಿಸಿದೆ
ಕೊಡಗು ಜಿಲ್ಲೆ ಮತ್ತೊಮ್ಮೆ ರಣರಂಗವಾಗಲು ಅವಕಾಶ ಮಾಡಿಕೊಡದೆ ಆಗಸ್ಟ್ 24ರಿಂದ 27ರ ವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಅಳವಡಿಸಿದ ಜಿಲ್ಲಾಡಳಿತ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸ್ವಾಗತಿಸಿದೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಇತ್ತೀಚಿನ ದಿನಗಳಲ್ಲಿ ರಾಜಕೀಯ ತಿಕ್ಕಾಟಕ್ಕೆ ಜಿಲ್ಲೆಯ ಜನರ ನೆಮ್ಮದಿ ಹಾಳಾಗುತ್ತಿದೆ. ಜನಾಂಗದ ನಡುವಿನ ಸಾಮರಸ್ಯ ಕದಡಿದೆ, ಜಿಲ್ಲೆಯಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿದೆ, ನೆಮ್ಮದಿಯಿಂದ ಸಹಬಾಳ್ವೆ ನಡೆಸುತ್ತಿದ್ದ ಕೊಡಗು ಇದೀಗ ಬೂದಿಮುಚ್ಚಿದ ಕೆಂಡದಂತ್ತಿದೆ.
ಈಗಾಗಲೇ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ "ಕೈಲ್ ಪೊಳ್ದ್" ಸಮೀಪಿಸುತ್ತಿದ್ದು, ಕೊಡವ ಜನಾಂಗದ ಪಾಲಿಗೆ ಇದು ಪ್ರಮುಖ ಹಬ್ಬವಾಗಿದೆ ಮಾತ್ರವಲ್ಲ ಕೊಡಗು ಜಿಲ್ಲೆಯಲ್ಲಿ ನೆಲೆಕಂಡುಕೊಂಡಿರುವ ಬಹುತೇಕ ಎಲ್ಲಾ ಜಾತಿಜನಾಂಗ ಈ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದು, ಇದರ ಜೊತೆಜೊತೆಗೆ ಹಿಂದುಗಳ ಭಾವನಾತ್ಮಕ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಕೂಡ ಸಮೀಪಿಸುತ್ತಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಕೊಡಗು ಚಲೋ ಕಾರ್ಯಕ್ರಮದ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾದರೆ, ಬಿಜೆಪಿ ಕೂಡ ಜನ ಜಾಗೃತಿ ಸಮಾವೇಶ ಮಾಡಲು ಹೊರಟಿತ್ತು, ಇದೆಲ್ಲಾವನ್ನು ಸೂಕ್ಷ್ಮವಾಗಿ ನೋಡಿದ್ದಾಗ ಕೊಡಗು ಜಿಲ್ಲೆ ಮತ್ತೊಮ್ಮೆ ಟಿಪ್ಪು ಜಯಂತಿಯ ಕರಾಳ ದಿನವನ್ನು ನೆನಪಿಸುತ್ತಿತ್ತು ಮಾತ್ರವಲ್ಲ ಅಪಾಯದ ಮುನ್ಸೂಚನೆ ಕಾಣುತ್ತಿತ್ತು. ಇದರ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲು ಒತ್ತಡ ಹೇರಲು ನಮ್ಮ ಸಂಸ್ಥೆ ಮುಂದಾಗಿತ್ತು.
ಆದರೆ ಇದೀಗ ಜಿಲ್ಲಾಡಳಿತವೇ ಆಗಸ್ಟ್ 24ರಿಂದ 27ರ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೊರಡಿಸುವ ಮೂಲಕ ಬಹಳ ಒಳ್ಳೆಯ ಕೆಲಸ ಮಾಡಿದೆ. ಜಿಲ್ಲಾಡಳಿತದ ಈ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಜನರು ಕೊರೋನ ಮಹಾಮಾರಿಯ ಹೊಡೆತದಿಂದ ತತ್ತರಿಸಿ ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗ ಎರಡು ಪಕ್ಷಗಳು ತಮ್ಮ ರಾಜಕೀಯ ಬಲಾಬಲವನ್ನು ಪ್ರದರ್ಶಿಸುವ ಮೂಲಕ ಅನಾಹುತಕ್ಕೆ ಆಹ್ವಾನ ನೀಡಿತು ಎಂದರೆ ತಪ್ಪಲ್ಲ. ಸ್ವಪ್ರತಿಷ್ಠೆಯ ದಳ್ಳುರಿಯಲ್ಲಿ ಕೊಡಗನ್ನು ಈ ರಾಜಕೀಯ ಪಕ್ಷಗಳು ಏನೂ ಮಾಡಲು ಹೊರಟಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಈಗಾಗಲೇ ಕೊಡಗಿನ ಪ್ರಮುಖ ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದೆ,
ಹೀಗಿರುವಾಗ 26ರಂದು ಏನಾದರೂ ಅನಾಹುತ ಸಂಭವಿಸಿ ಕಳೆದ ಬಾರಿಯ ಟಿಪ್ಪು ಜಯಂತಿಯಂತೆ ಕರ್ಫ್ಯೂ ಅಳವಡಿಸಿದ್ದರೆ ಹಬ್ಬದ ಮೇಲೆ ದುಷ್ಪರಿಣಾಮ ಬೀಳುತ್ತಿತ್ತು ಎಂಬ ಭಯ ಎಲ್ಲಾರಲ್ಲೂ ಕಾಡುತ್ತಿತ್ತು.
ಹಾಗೆ ಮಡಿಕೇರಿಯಲ್ಲಿ ಸಾರ್ವಜನಿಕ ಜನಸಂದಣಿಯ ವಿಸ್ತೀರ್ಣವನ್ನು ತೆಗೆದುಕೊಂಡರೆ ಇದು ಯಾವುದೇ ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಇರುವ ಪ್ರದೇಶವಲ್ಲ. ಇಲ್ಲಿ ಸ್ಥಳೀಯವಾಗಿ ಜನರು ಸೇರಬಹುದು ಹೊರತು ಹೊರಜಿಲ್ಲೆ ಹೊರ ರಾಜ್ಯದಿಂದ ಲಕ್ಷಾಂತರ ಜನರು ಬಂದು ಸೇರಲು ಯೋಗ್ಯವಾದ ಸ್ಥಳ ಕೂಡ ಅಲ್ಲಾ. ಹೀಗಿರುವಾಗ ಎರಡು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬಲಾಬಲವನ್ನು ಮಡಿಕೇರಿಯಲ್ಲಿ ಪ್ರದರ್ಶಿಸುವ ಮೂಲಕ ಮತ್ತೊಂದು ಟಿಪ್ಪು ಜಯಂತಿಯ ಕರಿನೆರಳು ಜಿಲ್ಲೆಯಲ್ಲಿ ಹಾದುಹೋದಂತೆ ಕಾಣುತ್ತಿತ್ತು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತ್ತಾಗಿದೆ. ಇದರ ಮೇಲೆ ಯಾವುದೇ ಪಕ್ಷ ತನ್ನ ಬಲಾಬಲವನ್ನು ಪ್ರದರ್ಶಿಸಲು ಮುಂದಾದರೆ ಅಂತಹವರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸರಿಯಾದ ಪಾಠ ಕಲಿಸಬೇಕಿದೆ. ಜಿಲ್ಲೆಯಲ್ಲಿ ಈಗ ತಾನೇ ಸುರಿದ ಮಳೆಗಾಳಿಯಿಂದ ಜನರು ಕಂಗೆಟ್ಟಿದ್ದು ಕೊಡಗು ಅತಿವೃಷ್ಟಿಗೆ ಬಲಿಯಾಗಿದೆ, ಇಲ್ಲಿನ ರೈತರ ಒಂದು ವರ್ಷದ ಬದುಕು ಮೂರಾಬಟ್ಟೆಯಾಗಿದ್ದು ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರುಗಳು ತಮ್ಮ ಸ್ವಪ್ರತಿಷ್ಠೆಯನ್ನು ಮುಂದಾಗಿಸಿಕೊಂಡು ಮತ್ತೊಮ್ಮೆ ಕೊಡಗಿನ ಜನರನ್ನು ಬಲಿಕೊಡಲು ಮುಂದಾಗಿದ್ದರು ಇದನ್ನು ಮನಗಂಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಆಗಸ್ಟ್ 24ರಿಂದ 27ರ ವರೆಗೆ 144 ಸೆಕ್ಷನ್ ಅಳವಡಿಸಿರುವುದು ಶ್ಲಾಘನೀಯ, ಇದರಿಂದ ಮುಂದಾಗಬಹುದಾದ ಅನಾಹುತ ತಪ್ಪಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಭಿಪ್ರಾಯ ವ್ಯಕ್ತಪಡಿಸಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network