ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಆಡಳಿತ ವ್ಯಸ್ಥೆಯಲ್ಲಿ ಜನರ ಜವಾಬ್ದಾರಿಯು ಅಷ್ಟೇ ಅವಶ್ಯಕವಾಗಿದೆ; ಮಣವಟ್ಟಿರ ಎನ್.ಕುಶಾಲಪ್ಪ (ಹರೀಶ್)
ಅಧ್ಯಕ್ಷರು: ಬಲ್ಲಮಾವಟಿ ಗ್ರಾಮ ಪಂಚಾಯಿತಿ
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಬಲ್ಲಮಾವಟಿ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 30 ಕಿ.ಮೀ ದೂರದಲ್ಲಿದೆ. ಪ್ರಸ್ತುತ ಬಲ್ಲಮಾವಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಮಣವಟ್ಟಿರ ಎನ್. ಕುಶಾಲಪ್ಪ(ಹರೀಶ್)ನವರು ಕಾರ್ಯನಿರ್ವಹಿಸುತ್ತಿದ್ದಾರೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಮಣವಟ್ಟಿರ ಎನ್. ಕುಶಾಲಪ್ಪ(ಹರೀಶ್)ರವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ "ನಮ್ಮ ಕೊಡಗು - ನಮ್ಮ ಗ್ರಾಮ" ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಿತ್ತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಅಧ್ಯಕ್ಷರಾದ ಎಂ.ಎನ್. ಕುಶಾಲಪ್ಪನವರು, "ನಾನು ರಾಜಕೀಯ ಕ್ಷೇತ್ರಕ್ಕೆ ಬರುಲು ಮುಖ್ಯ ಕಾರಣ ನನ್ನ ಗ್ರಾಮಸ್ಥರ ಒತ್ತಾಸೆ, ನಾನು ಈ ಹಿಂದೆ ನೆಲಜಿ ಗ್ರಾಮದಲ್ಲಿರುವ ಭಗವತಿ ದೇವಾಲಯದ ಕಾರ್ಯದರ್ಶಿಯಾಗಿ ದೇವಾಲಯದ ಅಭಿವೃದ್ಧಿಗೆ ತುಂಬಾ ಜಾಗರೂಕತೆಯಿಂದ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದೆ, ಆಗ ಅಲ್ಲಿ ನಾನು ಮಾಡಿದ ಕೆಲಸ ಕಾರ್ಯಗಳನ್ನು ಗುರುತಿಸಿದ ಗ್ರಾಮಸ್ಥರು 2021ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ಮಾಡಿಕೊಟ್ಟರು. ಗ್ರಾಮಸ್ಥರ ಬೆಂಬಲದಿಂದ ನಾನು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದೆ, ಗೆಲುವು ಸಹ ಸಾಧಿಸಿದೆ, ಈಗ ಅಧ್ಯಕ್ಷನಾಗಿದ್ದೇನೆ ಆದರಿಂದ ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಮ್ಮ ಗ್ರಾಮದ ಅಭಿವೃದ್ದಿಗಾಗಿ ನಾನು ಶ್ರಮಿಸುತ್ತಿದ್ದೇನೆ" ಎಂದು ಎಂ.ಎನ್. ಕುಶಾಲಪ್ಪ(ಹರೀಶ್) ತಿಳಿಸಿದರು.
ಎಂ.ಎನ್. ಕುಶಾಲಪ್ಪ 2021ರಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಅವಧಿಯಲ್ಲೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಅಭಿವೃದ್ಧಿ ಕಾಮಗಾರಿಯ ಬಗ್ಗೆ ಮಾತನಾಡಿದ ಅವರು ನಾನು ಮೊದಲ ಬಾರಿಗೆ ಜನಪ್ರತಿನಿಧಿಯಾಗಿ ಹಾಗೂ ಪಂಚಾಯಿತಿಯ ಸದಸ್ಯ ಆದ ಕಾರಣ ಪಂಚಾಯಿತಿಯ ಆಡಳಿತ ಕಾರ್ಯ, ವ್ಯವಸ್ಥೆಗಳ ಬಗ್ಗೆ ಅಷ್ಟಾಗಿ ನನಗೆ ಅನುಭವವಿರಲಿಲ್ಲ. ಅದಕ್ಕಾಗಿ ನಾನು ಅಧ್ಯಕ್ಷನಾಗಿ ಆಯ್ಕೆಗೊಂಡ ನಂತರ ಪ್ರತಿನಿತ್ಯ ಪಂಚಾಯಿತಿ ಕಛೇರಿಗೆ ಭೇಟಿ ನೀಡಿ ಅಲ್ಲಿನ ಆಡಳಿತ ಕಾರ್ಯದ, ಜನರ ಸಮಸ್ಯೆಗಳ ಬಗ್ಗೆ ಹಾಗೂ ಅದನ್ನು ಯಾವ ರೀತಿಯಲ್ಲಿ ಪರಿಹರಿಸಬಹುದಾಗಿ ತಿಳಿದು ಅದನ್ನು ಕಾರ್ಯರೂಪಕ್ಕೆ ಇಳಿಸುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಕುಡಿಯುವ ನೀರಿನ ವ್ಯವಸ್ಥೆಗೆ ಜಲಜೀವನ್ ಮಿಷನ್ ಯೋಜನೆಯು ಪುಲಿಕೊಟ್ಟು ಮತ್ತು ಬಲ್ಲಮಾವಟಿ ವ್ಯಾಪ್ತಿಯಲ್ಲಿ 90% ಅನುಷ್ಠಾನ ಆಗಿದೆ. ಉಳಿದ ಗ್ರಾಮಗಳಲ್ಲಿ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಕಸ ವಿಲೇವಾರಿಗೆ ಕಳೆದ ಅವಧಿಯಲ್ಲಿ 20 ಲಕ್ಷ ಅನುದಾನ ಮಂಜೂರಾಗಿದ್ದು, ಸೂಕ್ತವಾದ ಸ್ಥಳವನ್ನು ತೋರಿಸದ ಕಾರಣ ಆ ಅನುದಾನ ವಾಪಸ್ ಆಗಿರುತ್ತದೆ. ಆದರೆ ನಮ್ಮ ಅವಧಿಯಲ್ಲಿ 50 ಸೇಂಟ್ ಜಾಗವನ್ನು ಬೆಳ್ಳಬ್ಬೆ ರಸ್ತೆಯಲ್ಲಿ ಗುರುತಿಸಿ ಅಲ್ಲಿ 7 ಲಕ್ಷ ವೆಚ್ಛದ ಕಸ ವಿಲೇವಾರಿ ಘಟಕವನ್ನು ತಯಾರಿಸಲಾಗಿದೆ. ಹಾಗೂ ಕಸವಿಲೇವಾರಿಗೆ 5.5 ಲಕ್ಷ ವೆಚ್ಚದ ಟ್ಯಾಕ್ಟರ್ ಅನ್ನು ಸಹ ಖರೀದಿಸಲಾಗಿದೆ ಎಂದು ಮಣವಟ್ಟಿರ ಹರೀಶ್‌ರವರು ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 100% ಶೌಚಾಲಯ ನಿರ್ಮಾಣವಾಗಿದ್ದು, ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿಯಾಗಿದೆ. 15ನೇ ಹಣಕಾಸು ಯೋಜನೆಯು, 100% ರಷ್ಟು ಸದ್ಬಳಕೆಯಾಗಿದೆ. ನರೇಗಾ ಯೋಜನೆ ಅಡಿಯಲ್ಲಿ ಉತ್ತಮವಾದ ಕಾಮಗಾರಿಗಳು ನಡೆದಿದೆ.
ನೆಲಜಿ ಗ್ರಾಮದ ಅಂಗನವಾಡಿಯಲ್ಲಿ ಉದ್ಯಾನವನ ಹಾಗೂ ಪುಲಿಕೋಟು ಗ್ರಾಮದಲ್ಲಿರುವ ಶಾಲೆಯಲ್ಲಿ ಔಷಧಿ ಗಿಡಗಳಿರುವ ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಕೊಡಗು ಹಲವಾರು ಔಷಧಿ ಗಿಡಗಳ ನೆಲೆಯಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬಲ್ಲಮಾವಟಿ ಆಯುಷ್ ಆಸ್ಪತ್ರೆಯ ಉದ್ಯಾನವನದಲ್ಲಿ ಹೊಸ ಪ್ರಯೋಗವಾಗಿ 50% ಸ್ಥಳೀಯ ಔಷಧಿ ಗಿಡಗಳು ಹಾಗೂ 50% ಹೂವಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಪೇರೂರು ಇಗ್ಗುತಪ್ಪ ಗ್ರಾಮದಲ್ಲಿ ಅಮೃತ ಸರೋವರ ಯೋಜನೆ ಅಡಿಯಲ್ಲಿ ಕೆರೆಯ ಅಭಿವೃದ್ಧಿ ಜೊತೆಗೆ 1/2 ಎಕರೆ ಜಾಗದಲ್ಲಿ ಕೊಡಗಿನಲ್ಲಿ ನೈಸರ್ಗಿಕವಾಗಿ ದೊರೆಯುತ್ತಿದ್ದ ಹಾಗೂ ಈಗ ವಿರಳವಾಗಿರುವ ಮತ್ತು ಲಭ್ಯವಿರದ ಅಪರೂಪದ ಹಣ್ಣಿನ ಗಿಡಗಳ ಉದ್ಯಾನವನವನ್ನು ಮುಂದಿನ ಪೀಳಿಗೆಗೆ ಉಪಯೋಗವಾಗುವ ದೃಷ್ಠಿಯಿಂದ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ಸಲುವಾಗಿ ಕಸವಿಲೇವಾರಿ ಮಾಡುವ ಸ್ಥಳದಲ್ಲಿ ಅರಣ್ಯ ಮರಗಳ ಸಸಿಗಳನ್ನು ಸಹ ನೆಡಲಾಗಿದೆ. ಜೊತೆಗೆ ನೆಲಜಿ ಅಯ್ಯಪ್ಪ ಮಹಾದೇವ ದೇವರ ಕಾಡಿನಲ್ಲಿ ಬಿದ್ದ ಹಳೆ ಮರಗಳನ್ನು ತೆಗೆದು ಹೊಸ ಮರಗಳ ಗಿಡಗಳನ್ನು ನೆಡಲಾಗಿದೆ ಎಂದು ಈ ಸಂದರ್ಭದಲ್ಲಿ ಹರೀಶ್‌ರವರು ತಿಳಿಸಿದರು.
ಪ್ರಸ್ತುತ ಇರುವ ಪಂಚಾಯಿತಿ ಕಚೇರಿಗೆ ಸೂಕ್ತವಾದ ದಾಖಲಾತಿ ಇಲ್ಲದ ಕಾರಣ ಹಲವು ಸಮಸ್ಯೆಗಳು ಎದುರಾಗಿದ್ದು, ಹಾಗೂ ಕಟ್ಟಡ ಹಳೆಯದಾಗಿದೆ ಹಾಗಾಗಿ ನಾವು ಅಧಿಕಾರಕ್ಕೆ ಬಂದ ನಂತರ ಪಂಚಾಯಿತಿಗೆ ದಾಖಲಾತಿಗಳೊಂದಿಗೆ ಸೂಕ್ತವಾದ ಸ್ವಂತ ಜಾಗದ ವ್ಯವಸ್ಥೆ ಮಾಡಲಾಗಿ ಸುಸಜ್ಜಿತವಾದ ಹೊಸ ಕಟ್ಟಡ ಮತ್ತು ಆಡಳಿತ ಕಚೇರಿಯ ನಿರ್ಮಾಣಕ್ಕೆ ನರೇಗಾ ಯೋಜನೆಯಿಂದ 35ಲಕ್ಷ, ಪಂಚಾಯಿತಿಯಿಂದ 10 ಲಕ್ಷ ಜಿಲ್ಲಾ ಪಂಚಾಯಿತಿಯಿಂದ ಎಂಟರಿಂದ ಹತ್ತು ಲಕ್ಷ, 15ನೇ ಹಣಕಾಸು ಯೋಜನೆಯಲ್ಲಿ ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಮಾಡಲಾಗಿದೆ. Mp, MLA ಅವರ ಅನುದಾನ ಸಿಗುವ ಭರವಸೆ ಇದೆ ಎಂದು ಹರೀಶ್‌ರವರು ವಿಶ್ವಾಸ ವ್ಯಕ್ತಪಡಿಸಿದರು.
ಬಲ್ಲಮಾವಟಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮಸ್ಥರ ಜ್ಞಾನವನ್ನು ಜಾಗೃತಿ ಮೂಡಿಸುವ ಸಲುವಾಗಿ ಡಿಜಿಟಲ್ ಲೈಬ್ರರಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟವು ತುಂಬಾ ವ್ಯವಸ್ಥಿತವಾದ ರೀತಿಯಲ್ಲಿ ನಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಬಲ್ಲಮಾವಟಿ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು ನಮ್ಮಲ್ಲಿ ಗ್ರಾಮೀಣಾ ರಸ್ತೆಗಳು ಹೆಚ್ಚಾಗಿದ್ದು ಬಲ್ಲಮಾವಟಿ ಪಂಚಾಯಿತಿ ಗುಡ್ಡಗಾಡು ಪ್ರದೇಶವಾಗಿದ್ದು ಮಳೆ ಹೆಚ್ಚಾಗಿ ಬರುವುದರಿಂದ ಶೇಕಡ 70ರಷ್ಟು ರಸ್ತೆಗಳು ಮಳೆ ಹಾನಿಗೆ ಒಳಗಾಗುವುದು.
ಹಾಗೂ ಸಾಮಾನ್ಯವಾಗಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಜನಸಂಖ್ಯೆಯ ಆಧಾರದ ಮೇಲೆ ನೀಡಲಾಗುತ್ತದೆ. ಆದರೆ ನಮ್ಮ ಪಂಚಾಯಿತಿಯಲ್ಲಿ ಜನಸಂಖ್ಯೆ ಕಡಿಮೆಯಿದ್ದು ಈ ಒಂದು ಕಾರಣದಿಂದ ರಸ್ತೆ ಅಭಿವೃದ್ದಿಗೆ ಬೇಕಾದಷ್ಟು ಅನುದಾನ ಸಿಗುತ್ತಿಲ್ಲ. ಹಾಗಾಗಿ ನಮಗೆ MLC , MLA , ಹಾಗೂ ಜಿಲ್ಲಾ ಪಂಚಾಯಿತಿ ಅನುದಾನ ಹೆಚ್ಚಾಗಿ ಬೇಕಾಗಿದೆ ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹೆಚ್ಚು ಮಳೆಯ ಕಾರಣದಿಂದ ವಿದ್ಯುತ್ ಸಮಸ್ಯೆಯೂ ಇದೆ, ನಿರಂತರವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದರು. ಜೊತೆಗೆ ಪಂಚಾಯಿತಿಗೆ ಸೋಲಾರ್ ಲ್ಯಾಂಪನ್ನು ಕೂಡ ಉಪಯೋಗಿಸಲು ಸೂಕ್ತವಾಗುವುದಿಲ್ಲ, ಏಕೆಂದರೆ ಅದರ ಬೆಲೆ ಹೆಚ್ಚಾಗಿದ್ದು ಎರಡು ವರ್ಷಕ್ಕಿಂತ ಹೆಚ್ಚಿನ ನಿರ್ವಹಣೆ ಸೋಲಾರ್ ವಿದ್ಯುತ್‌ನಿಂದ ದೊರೆಯುವುದಿಲ್ಲ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವು ಹೆಚ್ಚಾಗಿದ್ದು, ಆನೆಗಳ ಉಪಟಳ ತುಂಬಾ ಇದೆ. ಅದರೊಂದಿಗೆ ಇತ್ತೀಚೆಗೆ ಕೆನ್ನಾಯಿಗಳ(ತೋಳಗಳ) ತೊಂದರೆ ಕಾಡುತ್ತಿದೆ. ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ತುಂಬಾ ತೊಂದರೆ ಆಗುತ್ತಿದ್ದು, ಆದರೆ ಇದಕ್ಕೆಲ್ಲ ಮುಖ್ಯವಾಗಿ ವನ್ಯ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ಪರಿಹರಿಸ ಬೇಕಾಗಿರುವ ಅರಣ್ಯ ಇಲಾಖೆಯು ಸರಿಯಾದ ಸ್ಪಂದನೆಯನ್ನು ನೀಡುತ್ತಿಲ್ಲ ಎಂದು ತಮ್ಮ ವಿಷಾದವನ್ನು ಹರೀಶ್‌ರವರು ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ, ಮೀನು ಹಾಗೂ ವಾಣಿಜ್ಯ ಮಳಿಗೆಗಳು, ರೆಸಾರ್ಟ್ ಉದ್ಯಮಗಳು ಇಲ್ಲವಾದ ಕಾರಣ ಕೇವಲ ಮನೆ ಕಂದಾಯ ಮಾತ್ರ ಪಂಚಾಯಿತಿಗೆ ಆದಾಯಾವಾಗಿ ದೊರೆಯುತ್ತದೆ. ಅದರಿಂದ ಪಂಚಾಯಿತಿಗೆ ಆದಾಯ ಕೂಡಾ ಕಡಿಮೆ ಇದೆ. ಪಡಿತರ ವ್ಯವಸ್ಥೆಗೆ ಇಲಾಖೆಯಿಂದ ತೊಂದರೆಯಾಗಿದದ್ದು ಸರಿಯಾದ ಪಡಿತರ ದೊರೆಯುತ್ತಿಲ್ಲ ಎಂದು ಹರೀಶ್‌ರವರು ತಿಳಿಸಿದರು.
ತಮ್ಮ ಮುಂದಿನ ಕ್ರಿಯಾಯೋಜನೆಗಳ ಬಗ್ಗೆ ಮಾತನಾಡಿದ ಮಣವಟ್ಟಿರ ಎನ್. ಕುಶಾಲಪ್ಪ(ಹರೀಶ್)ನವರು, ಸಾಮಾನ್ಯವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕರಿಗೆ ಪಂಚಾಯಿತಿಯ ಆಡಳಿತ ವ್ಯವಸ್ಥೆಯ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ ಇದರಿಂದಾಗಿ ನಮಗೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ತುಂಬಾ ಕಷ್ಟವಾಗುತ್ತದೆ. ಈ ಕಾರಣ ಜನರಿಗೆ ಪಂಚಾಯಿತಿ ಆಡಳಿತ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ನೀಡುವುದು ನನ್ನ ಮುಖ್ಯ ಕರ್ತವ್ಯವಾಗಿ ತೆಗೆದುಕೊಂಡಿದ್ದೇನೆ. ಹಾಗೂ ಪಂಚಾಯತಿ ಅಭಿವೃದ್ಧಿಗೆ ಜನರ ಜವಾಬ್ದಾರಿಯು ಅಷ್ಟೇ ಅವಶ್ಯಕವಾಗಿದೆ ಅವರು ಸಕ್ರಿಯವಾಗಿ ಪಂಚಾಯಿತಿಗೆ ಬಂದು ಪಂಚಾಯತಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಅವರ ಅಭಿಪ್ರಾಯಗಳನ್ನು ತಿಳಿಸಬೇಕು ಇದರಿಂದ ಮಾತ್ರ ಪಂಚಾಯಿತಿ ಅಭಿವೃದ್ಧಿ ಸಾಧ್ಯ ಹಾಗೂ ಅವರು ನಮ್ಮೊಂದಿಗೆ ಪಾಲ್ಗೊಳ್ಳುವುದರಿಂದ ನಮಗೆ ಪ್ರೇರಣೆಯು ಕೂಡ ದೊರೆಯುತ್ತದೆ. ಹಾಗಾಗಿ ಇಲ್ಲಿ ಪ್ರತಿಯೊಂದು ಕಾಮಗಾರಿಗಳನ್ನು ಗ್ರಾಮಸ್ಥರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಅವಧಿಯಲ್ಲಿ ಒಂದು ಸಣ್ಣ ಭ್ರಷ್ಟಚಾರ ಕೂಡ ಬರಬಾರದು ಅಧಿಕಾರವಧಿಯ ನಂತರವೂ ಕೂಡ ಜನರು ಈ ಆಡಳಿತದಲ್ಲಿ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಭ್ರಷ್ಟಾಚಾರ ಮಾಡಿಲ್ಲ ಹಾಗೂ ಪಾರದರ್ಶಕ ಆಡಳಿತವನ್ನು ಕೊಡಲು ಸಾಧ್ಯವಾಗಿದೆ ಎಂದು ಹೇಳುವಂತಾಗಬೇಕು. ಎಂದು ಹರೀಶ್‌ರವರು ತಿಳಿಸಿದರು.
ಗ್ರಾಮ ಪಂಚಾಯಿತಿಗಳ ವ್ಯವಹಾರಗಳ ಬಗ್ಗೆ ಮಾತನಾಡಿದ ಇವರು ಪಂಚಾಯಿತಿಯ ಮೇಲೆ ಜನರಿಗೆ ತುಂಬಾ ವಿಶ್ವಾಸ ಇರಬೇಕು. ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕೂಡ ಗ್ರಾಮಸ್ಥರನ್ನು ಒಳ್ಳೆಯ ರೀತಿಯಲ್ಲಿ ಮಾತನಾಡಿಸಬೇಕು. ಪಂಚಾಯಿತಿಯ ಕಚೇರಿಗೆ ಬರುವಾಗ ಜನರಿಗೆ ತಮ್ಮ ಮನೆಯಲ್ಲಿ ಇರುವಂತಹ ಅನುಭವ ಆಗಬೇಕು. ಸಿಬ್ಬಂದಿಗಳು ಬೇರೆ ಗ್ರಾಮಸ್ಥರು ಸಾರ್ವಜನಿಕರು ಬೇರೆ ಎಂಬ ಭಾವನೆ ನಮ್ಮ ಪಂಚಾಯಿತಿಯಲ್ಲಿ ಇಲ್ಲ ನಮ್ಮ ಪಂಚಾಯಿತಿಯ ಕಾರ್ಯವೈಖರಿಯು ಬೇರೆ ಪಂಚಾಯಿತಿಗಳಿಗೆ ಮಾದರಿಯಾಗಬೇಕೆಂಬುವುದು ನನ್ನ ಕನಸು ಎಂದು ಈ ಸಂದರ್ಭದಲ್ಲಿ ಹರೀಶ್‌ರವರು ನುಡಿದರು.
ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ವ್ಯಸ್ಥಿತವಾದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಬಾಳಿಯಡ ದೀನಾ ಮಾಯಮ್ಮ, ಸದಸ್ಯರಾದ ಶ್ರೀ ಚೋಕಿರ ಭೀಮಯ್ಯ, ಶ್ರೀ ಮುಕ್ಕಾಟ್ಟಿರ ಕೆ.ಸುಬ್ಬಯ್ಯ, ಶ್ರೀಮತಿ ಮೇದರ ಶಾಂತಿ, ಶ್ರೀಮತಿ ರಾಜೇವಿ ಕೆ.ಎಸ್, ಶ್ರೀ ಮಚ್ಚುರ ರವೀಂದ್ರ, ಶ್ರೀಮತಿ ಅನಿತ ಹಾಗೂ ಪ್ರಾಮಾಣಿಕ ಸಕ್ರೀಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ ಚೌರೀರ ಶರತ್ ಪೂಣಚ್ಚರವರೊಂದಿಗೆ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರ ಸಹಕಾರದಿಂದ ಪಂಚಾಯಿತಿಯು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮಣವಟ್ಟಿರ ಎನ್. ಕುಶಾಲಪ್ಪ(ಹರೀಶ್)ನವರು ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿರುವ ಇವರು ಸಹಕಾರ ಕ್ಷೇತ್ರದಲ್ಲಿ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಪ್ರಸ್ತುತ ನೆಲಜಿಯ ಅಯಪ್ಪ ಮಹಾದೇವ ದೇವಾಲಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಮೂಲತಃ ಕೃಷಿಕರಾಗಿರುವ ಮಣವಟ್ಟಿರ ಎನ್. ಕುಶಾಲಪ್ಪ(ಹರೀಶ್)ನವರು ತಂದೆ ದಿವಂಗತ ಮಣವಟ್ಟಿರ ಕೆ. ನಾಣಯ್ಯ ಹಾಗೂ ತಾಯಿ ಪೂವವ್ವ ದಂಪತಿಗಳ ಪುತ್ರರಾಗಿದ್ದಾರೆ. ಪತ್ನಿ ಕವಿತ ಗೃಹಿಣಿಯಾಗಿದ್ದಾರೆ. ಹಿರಿಯ ಮಗಳು ಲೀಲಾವತಿ MBA ಪಧವೀದರರಾಗಿದ್ದಾರೆ. ಮತ್ತೋರ್ವ ಮಗಳುನೀಲಮ್ಮ , MBA ವ್ಯಾಸಂಗ ನಿರತರಾಗಿದ್ದಾರೆ. ಕಿರಿಯ ಮಗ ಸುಬ್ಬಯ್ಯ - LLB ವ್ಯಾಸಂಗ ನಿರತರಾಗಿದ್ದಾರೆ.
ಮಣವಟ್ಟಿರ ಎನ್. ಕುಶಾಲಪ್ಪ(ಹರೀಶ್)ನವರು ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಶ್ರೀಯುತರ ಕೌಟುಂಬಿಕ ಜೀವನವು, ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
Ballamavati: ಬಲ್ಲಮಾವಟಿ ಗ್ರಾಮ ಪಂಚಾಯಿತಿ ಬಗ್ಗೆ ಒಂದಿಷ್ಟು ಮಾಹಿತಿ:
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network