Header Ads Widget

Responsive Advertisement

ಅಂತರ್ಮುಖಿ ಅಪ್ಪ


ಅಂತರ್ಮುಖಿ  ಅಪ್ಪ

ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಮುದ್ದು ಮುದ್ದಾದ ಮಕ್ಕಳ ಕನಸು ಕಾಣುವವನು ಅಪ್ಪ. ಅಪ್ಪಿತಪ್ಪಿ ಕುರೂಪಿಗಳಾದ ಮಕ್ಕಳು ಹುಟ್ಟಿದರೂ ಸಹ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆಯಂತೆ ದ್ವೇಷಿಸದೇ ಸಾಧಾರಣವಾದ ಮಕ್ಕಳಿಗೆ ತೋರಿಸುವುದಕ್ಕಿಂತ ಹೆಚ್ಚಿನ ಪ್ರೀತಿಯಂದಲೇ ಅವರನ್ನೊಂದು ದಡ ಸೇರಿಸಲೆಂದು ತನ್ನ ಸ್ವಾರ್ಥವನ್ನು ತ್ಯಾಗ ಮಾಡಿ ಹಗಲಿರುಳು ತನ್ನ ಶಕ್ತಿ ಮೀರಿ ಹೋರಾಡಿ ಕೊನೆಗೆ ಯಾರಿಗೂ ಬೇಡವಾಗುವವನು ಅಪ್ಪ ಎಂದರೆ ತಪ್ಪಾಗಲಾರದು. ಬಹುತೇಕ ಮಕ್ಕಳಿಗೆ ಅಪ್ಪನ ಕುರಿತು ಅರಿವಾಗುವ ಸಮಯದಲ್ಲಿ ಅಪ್ಪನ ಅನುಪಸ್ಥಿತಿ ಕಣ್ಣೆದುರು ಕುಣಿದಾಡುತ್ತಿರುತ್ತದೆ. ಜೊತೆಗೆ ತಾನು ಅಪ್ಪನಾಗಿರುತ್ತಾನೆ ಅಥವಾ ಅಮ್ಮ ಆಗಿರುತ್ತಾಳೆ. ಇದರಲ್ಲಿ ಬಡತನ ಸಿರಿತನದ ಬೇಧ ಭಾವವೇನೂ ಇಲ್ಲ. ಅಪ್ಪನ ಪ್ರೀತಿಯ ಅಥವಾ ಕೋಪದ ಅರಿವನ್ನು ಸಮಂಜಸವಾಗಿ ಅರಿಯುವ ಮೊದಲೇ ಅಪ್ಪನನ್ನು ಕಳೆದುಕೊಂಡ ಪಾಪಿ ನಾನು ಹಾಗಾಗಿ ಅಪ್ಪನನ್ನು ದ್ವೇಷಿಸುವುದಕ್ಕಿಂತ ಹೆಚ್ಚು ಪ್ರೀತಿಸಿದವನು. ಇತ್ತೀಚೆಗೆ ಮೂಡಿ ಬರುತ್ತಿರುವ ರಿಲ್ಸ್‌ಗಳಲ್ಲಿ ಹೇಳುವಂತೆ ಯಾರಿಗೆ ಯಾವುದರ ಕೊರತೆ ಇರುತ್ತದೆಯೋ ಅದರ ಕುರಿತು ಅವರ ಲಕ್ಷ್ಯ ಹೆಚ್ಚಾಗಿರುತ್ತದೆ ಎಂಬ ಮಾತುಗಳು ಅಪ್ಪಟ ಸತ್ಯ. ಆದರೆ ಲೋಕದೆದುರಿಗೆ ಕಂಡುಬರುವ ಪ್ರಾಥಮಿಕ ಸತ್ಯ ತನ್ನ ಮಗುವನ್ನು ಒಂಬತ್ತು ತಿಂಗಳ ಕಾಲ ಹೊತ್ತು ಹೆತ್ತು ಹಾಲೂಡಿ ಸಾಕಿ ಸಲಹಿದ ಅಮ್ಮ ಮಾತ್ರ. ಕೆಲದಿನಗಳ ಹಿಂದೆ ನನ್ನ ಗೆಳೆಯರ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಹೇಳಿದ ಮಾತು "ಅಲ್ಲಾ ಅಮ್ಮನ ಶ್ರಮದ ಕುರಿತು ನೂರಾರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುವ ಪ್ರಪಂಚದ ಜನರಿಗೆ ಅಪ್ಪ ಎಂಬ ಪ್ರಾಣಿಯ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ. ಅಮ್ಮನು ಕಂದನನ್ಮು ಹೊತ್ತು ಹೆತ್ತರೆ ಅಪ್ಪ ತನ್ನ ಕಂದನನ್ನು ಹೊತ್ತಿರುವ ಅಮ್ಮನನ್ನು ತನ್ನ ಕಂದನ ಸಮೇತವಾಗಿ ಹೊತ್ತಿರುವ ದೃಶ್ಯ ಅಮ್ಮನ ಹೊಟ್ಟೆಯ ಒಳಗೆ ಅಡಗಿ ಕುಳಿತ ಮಕ್ಕಳಿಗೆ ಅರಿವಾಗದಿರುವುದು ಸತ್ಯವಾದರೂ ಲೋಕದ ಕಣ್ಣಿಗೆ ಬಿದ್ದರೂ ಸಹ ಹೆರಿಗೆಯ ನೋವನ್ನು ಅನುಭವಿಸಿದ ಅಮ್ಮಂದೀರಿಗೆ ಅಪ್ಪನ ಸಂಕಟ ಅಮ್ಮನ ನೋವಿನ ಮುಂದೆ ತೃಣವೆನಿಸಿಬಿಡುತ್ತದೆ. 

ಹುಟ್ಟುವ ಕಂದನ ಆರೋಗ್ಯ ಸ್ವಾಸ್ಥ್ಯದ ಕುರಿತಾಗಿ ಚಿಂತಿಸುತ್ತಾ ಮಗುವಿಗೆ ತತ್‌ಕ್ಷಣದಿಂದಲೇ ಅತ್ಯಗತ್ಯವಿರುವ ವಿಶೇಷ ಆಹಾರ ವಸ್ತ್ರ ಒಡವೆಗಳನ್ನು ಜೋಡಿಸಲು ಅಗತ್ಯವಿರುವ ಮೂಲಧನವನ್ನು ಹೊಂದಿಸುವ ಕುರಿತು ಚಿಂತಿಸುತ್ತಾ ಅರೆತೆರೆದ ಆಪರೇಷನ್ ಥಿಯೇಟರ್‌ನ ಮುಂದಿರುವ ಕಾರಿಡಾರ್‌ನಲ್ಲಿ ಶತಪಥ ಹಾಕುವ ಬಡ ಅಪ್ಪನ ಕುರಿತು ಒಮ್ಮೆ ಒಮ್ಮೆ ನಾವೆಲ್ಲರೂ ಆಲೋಚಿಸಬೇಕಾಗಿದೆ. ಆತನ ನೋವಿನಾಳ ಕೇವಲ ಕಂದನ ಕುರಿತಾಗಿ ಮಾತ್ರ ಇರದೆ "ಅಯ್ಯೋ ಚೊಚ್ಚಲ ಹೆರಿಗೆ ನನ್ನ ಮುದ್ದಿನ ಮಡದಿ ಆಪರೇಷನ್ ಥಿಯೇಟರ್‌ನಲ್ಲಿ ಇದ್ದಾಳೆ ನನ್ನನ್ನು ಒಳಗೆ ಬಿಡಲಾರರು. ಅಕೆಯ ಕೈಯನ್ನು ಪ್ರೀತಿಯಿಂದ ಸವರಿ ಧೈರ್ಯ ತುಂಬುವ ಅವಕಾಶವನ್ನು ಸಹ ನಿರಾಕರಿಸಿದ್ದಾರೆ." ಎಂದು ಮಂಡಿಗೆ ಮೆಲ್ಲುತ್ತಾ ಆಸ್ಪತ್ರೆಯ ಸಿಬ್ಬಂದಿ ಮಾತ್ರವಲ್ಲದೆ ಇಡೀ ವ್ಯವಸ್ಥೆಯ ವಿರುದ್ಧ ಕೋಪವಿದ್ದರೂ ತೀರಿಸಿಕೊಳ್ಳಲಾಗದ ಅಸಹಾಯಕತೆ ಮೊದಲ ಬಾರಿಗೆ ಮೂಡತೊಡಗುತ್ತದೆ. ಆ ಅಸಹಾಯಕತೆ ಮುಂದೆ ಬೃಹದಾಕಾರವಾಗಿ ಬೆಳೆಯುತ್ತಾ ಹೋಗುತ್ತದೆ ಎಂಬ ಅರಿವು ಆತನಿಗೆ ಆ ಕ್ಷಣಕ್ಕೆ ಅರಿವಾಗುವುದೇ ಇಲ್ಲ. ಬಾಲ್ಯದಲ್ಲಿ ತಪ್ಪು ತಪ್ಪು ಹೆಜ್ಜೆಗಳನ್ನು ಹಾಕುತ್ತಿದ್ದ ಮಕ್ಕಳಿಗೆ ಸರಿಯಾದ ಹೆಜ್ಜೆ ಇಡಲು ಕಲಿಸಿದಾತನಿಗೆ ಅಪ್ಪ ನಿನ್ನ ವರ್ತನೆ ಸರಿಯಾಗಿಲ್ಲ ಎಂದು ಮಕ್ಕಳು ಹೇಳತೊಡಗಿದಾಗ ಆತನ ಮನಸ್ಥಿತಿಯ ಕುರಿತು ಆಲೋಚಿಸಲೂ ಸಹ ಅಮ್ಮನಿಗೆ ಪುರುಷೊತ್ತು ಇರುವುದಿಲ್ಲ. ಏಕೆಂದರೆ ಆ ವೇಳೆಗಾಗಲೇ ತನ್ನ ಪತಿಗಿಂತ ತನ್ನ ಮಕ್ಕಳ ಏಳಿಗೆಗಾಗಿ ತಾನು ಶ್ರಮಿಸಬೇಕೆಂದು ಆಕೆಯ ಮನ ಪರಿವರ್ತನೆ ಆಗಿರುತ್ತದೆ. ಮಕ್ಕಳಿಗೂ ಅಷ್ಟೇ ಈಗಲೂ ಸಹ ತಾನು ಅಮ್ಮನ ಹೊಟ್ಟೆಯೊಳಗೆ ಇದ್ದೇನೆ ಅಮ್ಮ ನನಗಾಗಿ ಬಹಳಷ್ಟು ಶ್ರಮ, ದುಃಖ ಮತ್ತು ಅಪಾರವಾದ ನೋವು ಅನುಭವಿಸಿದ್ದಾಳೆ ಎಂಬ ಭಾವನೆ ಬಲವಾಗಿ ಬೇರೂರಿರುತ್ತದೆ. ಜೊತೆಗೆ ದಿನದ ಮೂರು ಹೊತ್ತು ಅಮ್ಮನ ಜೊತೆಯಲ್ಲಿಯೇ ಇದ್ದು ಅಮ್ಮನ ಜೊತೆಗೆ ಒಂದು ವಿಶೇಷವಾದ ಆತ್ಮೀಯತೆ ಬೆಳೆದಿರುತ್ತದೆ. ರಾತ್ರಿ ಯಾವುದೋ ಹೊತ್ತಿನಲ್ಲಿ ಬಂದು ಮಲಗಿ ಬೆಳಗ್ಗೆ ಮಗು ಏಳುವ ಮುನ್ನವೇ ಕರ್ತವ್ಯದ ಕರೆಗೆ ಓಗೊಟ್ಟು ಓಡುವ ಅಪ್ಪನಿಗೆ ನನ್ನ ಮೇಲೆ ಕಿಂಚಿತ್ತೂ ಪ್ರೀತಿ ಇಲ್ಲವೆಂಬ ಭಾವನೆ ನಿಧಾನವಾಗಿ ಮೂಡತೊಡಗುತ್ತದೆ. 

ತನ್ನದೇ ಆದ ದುಗುಡ ದುಮ್ಮಾನಗಳಲ್ಲಿ ಮುಳುಗಿರುವ ಅಪ್ಪನ ಬಳಿ ತನ್ನ ಬೇಡಿಕೆಗಳನ್ನು ಪೂರೈಸಲು ಕೋರಿಕೆಯನ್ನು ಹೇಳಿಕೊಂಡರೂ ಸಹ ಅದು ಅಮ್ಮನ ಮುಖಾಂತರವೇ ಈಡೇರುವುದಾದುದರಿಂದ ಅಮ್ಮನೇ ಅಪ್ಪನಿಗೂ ಮಿಗಿಲು ಎಂದು ಮಕ್ಕಳು ಯೋಚಿಸುತ್ತಾರೆಯೇ ವಿನಾ ಮಕ್ಕಳ ಬೇಡಿಕೆಯನ್ನು ಪೂರೈಸಲು ಅದೆಷ್ಟು ಪ್ರಮಾಣದ ಕಷ್ಟಗಳನ್ನು ಎದುರಿಸಿದ ಅಪ್ಪನ ಚಿತ್ರಣ ಮಕ್ಕಳ ಮನದಲ್ಲಿ ಮೂಡುವುದೇ ಇಲ್ಲ. ಹಾಗಾಗಿ ಹೆಣ್ಣಾಗಲಿ ಗಂಡಾಗಲಿ ಮಕ್ಕಳು ಬೆಳೆದಂತೆಲ್ಲ ಅಪ್ಪನಿಗಿಂತ ಅಮ್ಮನಿಗೆ ಆತ್ಮೀಯರಾಗಿಬಿಡುತ್ತಾರೆ. ತನ್ನ ಸಾಮರ್ಥ್ಯವನ್ನು ಮೀರಿದ ಕುಟುಂಬದ ಬೇಡಿಕೆಗಳನ್ನು ಪೂರೈಸಲು ಸಾಕಷ್ಟು ಸಾಲ ಸೋಲ ಮಾಡಿಕೊಂಡ ಅಪ್ಪ ಸಹಜವಾಗಿ ಮಕ್ಕಳ ಕೋರಿಕೆಗಳನ್ನು ಮುಂದೂಡುತ್ತಾ ಬರುತ್ತಾನಾದರೂ ಮುಂದೊಂದು ದಿನ ತನ್ನ ಮಡದಿಯ ಪ್ರೀತಿ, ಸತ್ಯಾಗ್ರಹ ಅಥವಾ ಆಜ್ಞೆಗೆ ಶಿರಬಾಗಿ ಹೊಂದಿಸಿಕೊಟ್ಟರೆ ಅದರ ಸಂಪೂರ್ಣ ಕ್ರೆಡಿಟ್ ಅಮ್ಮನಿಗೆ ದೊರೆಯುವುದರಲ್ಲಿ ಯಾವುದೇ ಸಂಶಯ ಬೇಡವೇ ಬೇಡ. " ಅಯ್ಯೋ ನಮ್ಮಪ್ಪ ನಿಜವಾಗಿಯೂ ಕೊಡಿಸುತ್ತಿದ್ದನಾ ಏನೋ ದೇವರಂತ ಅಮ್ಮ ಇರೋದರಿಂದ ಇದು ಸಾಧ್ಯವಾಯಿತು." ಎಂದು ಮಕ್ಕಳು ಆಲೋಚನೆ ಮಾಡುತ್ತಾರೆಯೇ ಹೊರತು ಇದರ ಸಲುವಾಗಿ ಅಪ್ಪನ ಶ್ರಮವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಮಕ್ಕಳು ದೊಡ್ಡವರಾದ ನಂತರವೂ ಸಹ ಅಪ್ಪನ ಶ್ರಮವನ್ನು ಅರಿಯದೆ ಅಪ್ಪನನ್ನು ನಿರ್ಲಕ್ಷ್ಯ ಮಾಡಿದಾಗ ಆಗುವ ನೋವು ಮಾತ್ರ ವರ್ಣಿಸಲಸದಳ. ಹಾಗಾಗಿಯೇ ಅಪ್ಪ ಯಾವಾಗಲೂ ಅಂತರ್ಮುಖಿಯಾಗಿಬಿಡುತ್ತಾನೆ. 

✍️....ಲೇಖಕರು: ವೈಲೇಶ್ ಪಿ. ಎಸ್. ಕೊಡಗು.

ಶಿವೈ ( ವೈಲೇಶ್ ಪಿ. ಎಸ್. )