Header Ads Widget

Responsive Advertisement

ಕೊಡಗೂ ಸೇರಿದಂತೆ ಕಾಫಿ ಜಿಲ್ಲೆಗಳನ್ನು ಅತಿ ವೃಷ್ಟಿ ಪ್ರದೇಶವೆಂದು ಘೋಷಿಸಿ. ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹ.


ಕೊಡಗೂ ಸೇರಿದಂತೆ ಕಾಫಿ ಜಿಲ್ಲೆಗಳನ್ನು ಅತಿ ವೃಷ್ಟಿ ಪ್ರದೇಶವೆಂದು ಘೋಷಿಸಿ. ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹ. 

1. 2022 ನೇ ಸಾಲಿನ ಅತೀವೃಷ್ಟಿಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಯಲ್ಲಿ ಹಾನಿ:-

ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 2022 ಸಾಲಿನ ಜುಲೈ ತಿಂಗಳಿನಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಕಾಫಿ ಹಾಗೂ ಕಾಳುಮೆಣಸು ಬೆಳೆಯಲ್ಲಿ ಸಾಕಷ್ಟು ನಷ್ಟವಾಗಿದೆ.ಹಾನಿಯ ಬಗ್ಗೆ  ಕಾಫಿ ಮಂಡಳಿಗೆ ತಿಳಿಸಿದಾಗ ಕಾಫಿ ಮಂಡಳಿ ಅಧಿಕಾರಿಗಳು ತೋಟಗಳಿಗೆ ಭೇಟಿನೀಡಿ, ಶೇ.30-40 ನಷ್ಟದ ಅಂದಾಜನ್ನು ಸಮೀಕ್ಷೆ ಮಾಡಿರುತ್ತಾರೆ. ಇದೀಗ ಪುನ: ಮಳೆ ಬರುತ್ತಿದ್ದು ಹೆಚ್ಚಿನ ಬೆಳೆನಷ್ಟ ಸಂಭವಿಸಿದೆ. ಕಾಫಿಯು ಬಹುವಾರ್ಷಿಕ ಹಾಗೂ ವಾಣಿಜ್ಯ ಬೆಳೆಯಾಗಿದ್ದು, ನಿರ್ವಹಣಾ ವೆಚ್ಚವೂ ಸಹಾ ದಿನೇ ದಿನೇ ಹೆಚ್ಚಾಗುತ್ತಿದೆ. ರಾಷ್ಟ್ರೀಯ ವಿಪತ್ತು ಯೋಜನೆ (ಎನ್.ಡಿ.ಆರ್.ಎಫ್) ಯಡಿಯಲ್ಲಿ ಸರ್ಕಾರವು 2 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರವನ್ನು ಸೀಮಿತಗೊಳಿಸಿದ್ದು, ಕೇಂದ್ರ ಸರ್ಕಾರದಿಂದ 36 ಸಾವಿರ, ಹಾಗೂ ರಾಜ್ಯ ಸರ್ಕಾರದಿಂದ 20 ಸಾವಿರ ನೀಡುತ್ತಿರುವುದು ಬೆಳೆಗಾರರಿಗೆ ತೋಟರ್ನಿಹಣೆಗೆ ಒಂದಿಷ್ಟು ಸಾಕಾಗುವುದಿಲ್ಲ. ಆದ್ದರಿಂದ ಅಂಕಿಅಂಶಗಳನ್ನಾದರಿಸಿ, 1 ಹೆಕ್ಟೇರ್‍ಗೆ ಕನಿಷ್ಟ 50 ಸಾವಿರ ರೂಗಳನ್ನು ಪರಿಹಾರವನ್ನು ನೀಡಬೇಕು.  ಕಾಫಿ ಬೆಳೆಹಾನಿ ಪರಿಹಾರ ನೀಡುವಾಗ 10 ಹೆಕ್ಟೇರ್ ವರೆಗೆ ಗಣನೆಗೆ ತೆಗೆದುಕೊಂಡು ಪರಿಹಾರವನ್ನು ನೀಡಿದ್ದಲ್ಲಿ ಕಾಫಿ ಉಧ್ಯಮ ಉಳಿಯಲು ಸಾಧ್ಯ. ಇಲ್ಲದಿದ್ದಲ್ಲಿ ಪ್ರತೀವರ್ಷ ಪ್ರಕೃತಿ ವಿಕೋಪದಿಂದ ಬೆಳೆಗಾರರು ಕಾಫಿಬೆಳೆಯಲ್ಲಿ ನಷ್ಟ ಅನುಭವಿಸಿ, ಕಾಫಿ ಉಧ್ಯಮ ನಡೆಸಲು ಕಷ್ಟಸಾಧ್ಯವಾಗಲಿದೆ. ಜೊತಗೆ 2014 ನೇ ಸಾಲಿನಿಂದಲೂ ಬೆಳೆಗಾರರು ಸತತವಾಗಿ ಅನಾವೃಷ್ಟಿ ಮತ್ತು ಅತೀವೃಷ್ಟಿಯಿಂದ ಬ್ಯಾಂಕ್‍ಸಾಲ ಮರುಪಾವತಿಸಲು ಕಷ್ಟಸಾಧ್ಯವಾಗುತ್ತಿದ್ದು, ಇಂತಹ ಸಂದಿಘ್ದ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಸರ್ಪಾಸಿ ನೋಟೀಸ್ ಜಾರಿ ಮಾಡುತ್ತಿದ್ದು ಕಾಫಿ ಬೆಳೆಗಾರರು ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದ್ದರಿಂದ ಸರ್ಫೆಸಿ ಕಾಯ್ದೆಯಿಂದ ರೈತಬೆಳೆಗಾರರನ್ನು ಹೊರಗಿಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಹಾಗೂ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ  ಕಾಫಿ ಉಧ್ಯಮಕ್ಕೆ ವಿಶೇಷ ಪ್ಯಾಕೇಜ್ ನೀಡುವ ಭೇಡಿಕೆಯನ್ನು ಇಡಲಾಗಿದೆ. ಹಾಗೂ ಸತತವಾಗಿ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಬರುತ್ತಿದ್ದು, ಈ ಪ್ರದೇಶಗಳನ್ನು ಅತೀವೃಷ್ಟಿ ಪ್ರದೇಶವೆಂದು ಘೋಷಿಸಬೇಕಾಗಿ, ಮತ್ತು ಕಾಫಿಗೆ ಬೆಳೆವಿಮೆ ಇಲ್ಲದಿರುವುದರಿಂದ ಕಾಳುಮೆಣಸಿಗೆ ವಿಮೆ ಮಾಡಿರುವಂತೆ ಕಾಫಿಗೂ ಹವಾಮಾನಾಧಾರಿತ ಬೆಳೆವಿಮೆಯನ್ನು ಅಳವಡಿಸಬೇಕಾಗಿ  ಕರ್ನಾಟಕ ಬೆಳೆಗಾರರ ಒಕ್ಕೂಟ ಈ ಮೂಲಕ ಕೇಳಿಕೊಳ್ಳುತ್ತದೆ.

2. ನ್ಯಾನೋ ಯೂರಿಯಾ ಬಗ್ಗೆ:-

ನ್ಯಾನೋ ಯೂರಿಯಾವನ್ನು ಕೃಷಿ ಇಲಾಖೆಯವರು ಕಾಫಿಬೆಳೆಗಾರರಿಗೆ ಒತ್ತಾಯಪೂರ್ವಕವಾಗಿ ಉಪಯೋಗಿಸಲು ತಿಳಿಸುತ್ತಿದ್ದಾರೆ. ಇದರ ಬಗ್ಗೆ ರೈತಬೆಳೆಗಾರರಿಗೆ ಸರಿಯಾದ ಮಾಹಿತಿ ಇಲ್ಲ ಮತ್ತು ಕಾಫಿ ಬೆಳೆಗಾರರು ಕಾಫಿ ಮಂಡಳಿಯ ಶಿಫಾರಸ್ಸಿನಂತೆ ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರವನ್ನು ಕಾಫಿ ಉದುರುವುದನ್ನು ತಡೆಯಲು ಮಳೆ ನಿಂತ ನಂತರ  ಪೂರೈಸಬೇಕಾಗಿರುತ್ತದೆ. ಹಾಗಾಗಿ ಕೃಷಿ ಇಲಾಖೆಗೆ ಈ ಸಮಯದಲ್ಲಿ ಯೂರಿಯಾ ಗೊಬ್ಬರವನ್ನು ಮಾತ್ರ ಪೂರೈಸುವಂತೆ ಈ ಮೂಲಕ ತಿಳಿಯಬಯಸುತ್ತೇವೆ. ನ್ಯಾನೋ ಯೂರಿಯಾ ಬಗ್ಗೆ ಕಾಫಿ ಮಂಡಳಿಯಲ್ಲಿ ಸಂಶೋಧನೆ ನಡೆಯುತ್ತಿದ್ದು ಇನ್ನೂ ಸೂಚನೆ ಸಿಕ್ಕಿರುವುದಿಲ್ಲ. ಜೊತೆಗೆ ನ್ಯಾನೋ ಯೂರಿಯಾ ಸಿಂಪಡಣೆ ಮಾಡುವುದು ಬೆಳೆಗಾರರಿಗೆ ಇವತ್ತಿನ ಕಾರ್ಮಿಕರ ಅಭಾವದಿಂದ ಕಷ್ಟಸಾಧ್ಯವೂ ಆಗಲಿದೆ. ಹಾಗೂ ಒಂದು ಲೀಟರ್ ನ್ಯಾನೋ ಯೂರಿಯಾದ ಬೆಲೆ 1ಮೂಟೆ ಯೂರಿಯಾ ಗೊಬ್ಬರಕ್ಕಿಂತ ದುಪ್ಪಟ್ಟಾಗಿದೆ. ಹಾಗಾಗಿ ಇದರ ಬಗ್ಗೆ ಸರಿಯಾದ ಮಾಹಿತಿ ಕಾಫಿಬೆಳೆಗಾರರಿಗಿಲ್ಲದೆಯಿರುವುದರಿಂದ  ಕೃಷಿ ಇಲಾಖೆಯವರು ನ್ಯಾನೋ ಯೂರಿಯಾ ಉಪಯೋಗಿಸಿ ಎನ್ನುವುದು ಸರಿಯಾದ ಕ್ರಮವಲ್ಲವೆಂದು ಈ ಮೂಲಕ ತಿಳಿಯಬಯಸುತ್ತೇವೆ.

3. ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆ ಬಗ್ಗೆ:-

ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕೆಲ ಕಾಫಿ ಬೆಳೆಗಾರರು 30-40 ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಪರಿಸರಕ್ಕೂ ಕೊಡುಗೆ ನೀಡುತ್ತಿದ್ದಾರೆ..

ಆದರೆ ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳೆಗಾರರಿಗೂ ನೋಟೀಸ್ ನೀಡದೆ ಪೋಲೀಸ್‍ರನ್ನು ಬಳಸಿಕೊಂಡು ಕಾಫಿ ಗಿಡಗಳನ್ನು ನಾಶಪಡಿಸಿ ಖುಲ್ಲ್ಲಾ ಮಾಡಲೊರಟಿರುವುದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಖಂಡಿಸುತ್ತದೆ. ಬಹಳಷ್ಟು ರೈತರ ಬಳಿ ಕಂದಾಯ ಇಲಾಖೆ ನೀಡಿರುವ ಅಧಿಕೃತ ದಾಖಲೆಗಳಿವೆ. ಬಹಳಷ್ಟು ಮಂದಿ ಹಲವು ದಶಕಗಳಿಂದ ಸದರಿ ದಾಖಲೆಗಳ ವ್ಯಾಪ್ತಿಯ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿ ಕೊಂಡಿರುತ್ತಾರೆ. ಈಗ ಏಕಾಏಕಿ ಅರಣ್ಯ ಇಲಾಖೆ ಯಾವುದೇ ಮುನ್ಸೂಚನೆ ನೀಡದೆ, ಹಾಲಿ ಅಲ್ಲಿ ನೆಲೆಗೊಂಡಿರುವ ರೈತರ ತೋಟಗಳನ್ನು ಅತಿಕ್ರಮ ಪ್ರವೇಶಿಸಿ ಹಲವು ವರ್ಷಗಳಿಂದ ಶ್ರಮವಹಿಸಿ ಬೆಳೆದ ಕಾಫಿ ಗಿಡ ಮತ್ತು ಕಾಳುಮೆಣಸು ಬಳ್ಳಿಗಳನ್ನು ಕಡಿದು ಹಾಕುತ್ತಿದ್ದಾರೆ. ಈ ಕ್ರಮ ಖಂಡನೀಯವಾದುದ್ದು. ರೈತಬೆಳೆಗಾರರಿಗೆ ಮಂಜೂರಾಗಿರುವ ದಾಖಲೆಗಳ ಆಧಾರದಲ್ಲಿ ನಿಖರವಾಗಿ ಭೂಮಿ ಗುರುತಿಸಿಕೊಟ್ಟ ನಂತರ ಮುಂದುವರೆದರೆ ಅದು ಸರಿಯಾದ ಕ್ರಮ. ಮಾನ್ಯ ಅರಣ್ಯ ಸಚಿವರೊಂದಿಗೆ ಈ ವಿಚಾರವಾಗಿ ಸಭೆಯಲ್ಲಿ ಪ್ರಸ್ತಾಪಿಸಿದಾಗ  ಸನ್ಮಾನ್ಯರು ಸಭೆಯಲ್ಲಿ ಇದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ ಹಾಗೂ  ಕಂದಾಯ ಇಲಾಖೆ ಸಹಯೋಗದೊಂದಿಗೆ ಜಂಟಿ ಸರ್ವೆ ಕಾರ್ಯ ನೆಡೆಯುವವರೆಗು, ಯಾವುದೇ ರೀತಿಯ ತೆರವು ಕಾರ್ಯಗಳಿಗೆ ಮುಂದಾಗಬಾರದೆಂದು ತಿಳಿಸಿದ್ದರೂ, ತೆರವು ಕಾರ್ಯಕ್ಕೆ ಮುಂದಾಗಿರುವುದು ವಿಷಾಧನೀಯ. ಆದ್ದರಿಂದ ಅರಣ್ಯ ಹಾಗೂ  ಕಂದಾಯ ಇಲಾಖೆ ಸಹಯೋಗದೊಂದಿಗೆ ಜಂಟಿ ಸರ್ವೆ ಕಾರ್ಯ ನೆಡೆಯುವವರೆಗು, ಯಾವುದೇ ರೀತಿಯ ತೆರವು ಕಾರ್ಯಗಳಿಗೆ ಮುಂದಾಗಬಾರದೆಂದು ಈ ಮೂಲಕ ತಿಳಿಸಬಯಸುತ್ತೇವೆ.

4. ಕಾಡಾನೆ ಸಮಸ್ಯೆ ಬಗ್ಗೆ:- 

2022 ನೇ ಸಾಲಿನಲ್ಲಿ ಅತೀವೃಷ್ಟಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತಬೆಳೆಗಾರರಿಗೆ ಜೊತೆಗೆ  ಮಲೆನಾಡು ಭಾಗದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು,  ಆನೆಗಳ ಸಂಖ್ಯೆ ಸಹಾ ಹೆಚ್ಚಾಗಿದೆ. ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದೇ  ತೋಟಗಳಲ್ಲಿ ಸಮಯಕ್ಕೆ ಸರಿಯಾಗಿ ಕೆಲಸಕಾರ್ಯಗಳು ನೆರವೇರುತ್ತಿಲ್ಲ. 

ಆನೆ ಸಮಸ್ಯೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ  ಅರಣ್ಯ ಸಚಿವರನ್ನು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿಮಾಡಿ ಪರಿಹಾರಕ್ಕೆ ಸೂಚಿಸಿದ್ದರೂ ಸಹಾ  ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲ.

ಆನೆ ಹಾವಳಿಯಿಂದ ಹಾನಿಯಾದ ಕಾಫಿ ಗಿಡಕ್ಕೆ ಅರಣ್ಯ ಇಲಾಖೆ ಗಿಡವೊಂದಕ್ಕೆ 200 ರೂಪಾಯಿಗಳನ್ನು ನೀಡುತ್ತಿರುವುದು ವೈಜ್ಞಾನಿಕ ಪರಿಹಾರವಲ್ಲ. ಕಾಫಿ ಮಂಡಳಿಯ ಮಾಹಿತಿ ಪಡೆದು ಸೂಕ್ತ ಪರಿಹಾರ ನೀಡಬೇಕಾಗುತ್ತದೆ. ಜೊತೆಗೆ ಇಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಿ, ಬೆಳೆಗಾರರ ಬದುಕನ್ನು ಸುಗಮಗೊಳಿಸಿಕೊಡಬೇಕಾಗಿ  ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಮನವಿ ಮಾಡಿದ್ದಾರೆ.

News Source: TV 1 NEWS