ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ, ದಶವರ್ಷ ಸಂಭ್ರಮದ ಸಮಾರೋಪ ಸಮಾರಂಭ;
ಸ್ಥಳೀಯ ಅರೆಭಾಷೆ ಬೆಳವಣಿಗೆಗೆ ಕೈಜೋಡಿಸಿ: ಕೆ.ಜಿ.ಬೋಪಯ್ಯ
ಮಡಿಕೇರಿ ಆ.29: ಕನ್ನಡನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ, ಜೊತೆಗೆ ಕನ್ನಡ ಉಪ ಭಾಷೆಯಾದ ಸ್ಥಳೀಯ ಅರೆಭಾಷೆಯನ್ನು ಉಳಿಸಿ ಬೆಳೆಸುವುದು ಅತ್ಯಗತ್ಯ ಎಂದು ಶಾಸಕರು ಹಾಗೂ ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಪ್ರತಿಪಾದಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ಸೋಮವಾರ ನಡೆದ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಮತ್ತು ದಶವರ್ಷ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಅರೆಭಾಷೆ, ಕೊಡವ, ತುಳು, ಕೊಂಕಣಿ, ಬ್ಯಾರಿ ಸೇರಿದಂತೆ ಹಲವು ಅಕಾಡೆಮಿಗಳನ್ನು ಸ್ಥಾಪಿಸಿದೆ. ಆ ನಿಟ್ಟಿನಲ್ಲಿ ಅಕಾಡೆಮಿಗಳ ಜೊತೆ ಎಲ್ಲರೂ ಕೈಜೋಡಿಸುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಕರೆ ನೀಡಿದರು.
ಅರೆಭಾಷೆ ಅಕಾಡೆಮಿ ವತಿಯಿಂದ ಕಳೆದ 10 ವರ್ಷದಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಸಂಬಂಧಿಸಿದಂತೆ ಪುಸ್ತಕ ಪ್ರಕಟಣೆ, ಸಂಶೋಧನೆ, ಸಾಹಿತ್ಯ ಚಟುವಟಿಕೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರೆಭಾಷೆ ಸಾಹಿತ್ಯ ಬೆಳವಣಿಗೆಗೆ ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯವನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯುವಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿದೆ ಎಂದು ಶಾಸಕರು ಹೇಳಿದರು.
‘ಕೊಡಗು ಜಿಲ್ಲೆಯಲ್ಲಿ ಎಲ್ಲಾ ಭಾಷಿಕರೂ ಒಟ್ಟುಗೂಡಿದಾಗ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು.’
ಯಾವುದೇ ಕ್ಷೇತ್ರದಲ್ಲೂ ಸಹ ಭಾಷೆ, ಸಂಸ್ಕøತಿಗೆ ಸಂಬಂಧಿಸಿದಂತೆ ಅಭಿಮಾನ ಇರಬೇಕು. ಆದರೆ ದುರಭಿಮಾನ ಇರಬಾರದು. ಆ ನಿಟ್ಟಿನಲ್ಲಿ ಭಾಷೆ ಉಳಿಸಿ ಬೆಳೆಸುವಲ್ಲಿ ಪ್ರಯತ್ನಗಳು ಮುಂದುವರೆಯಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
‘ರಾಷ್ಟ್ರವು ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿದೆ. ಒಂದು ಊರಿನಿಂದ ಮತ್ತೊಂದು ಊರಿಗೆ ಆಚಾರ-ವಿಚಾರದಲ್ಲಿ ವಿಭಿನ್ನತೆ ಇರುವುದನ್ನು ಕಾಣುತ್ತೇವೆ. ರಾಷ್ಟ್ರದಲ್ಲಿ ಹಲವು ಭಾಷೆಗಳಿದ್ದು, ಕೆಲವು ಭಾಷೆಗಳು ನಶಿಸುವತ್ತ ಸಾಗುತ್ತಿವೆ. ಆದ್ದರಿಂದ ಸರ್ಕಾರವು ಅಕಾಡೆಮಿ ಸ್ಥಾಪನೆ ಮಾಡುವ ಮೂಲಕ ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸಲು ಮುಂದಾಗಿದೆ ಎಂದರು.’
ಸರ್ಕಾರದ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಸಹ ಭಾಷೆ ಆಚಾರ-ವಿಚಾರ ಉಳಿವಿಗೆ ಶ್ರಮಿಸಬೇಕಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹೇಳಿದರು.
ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಅಗತ್ಯ ಸಹಕಾರ ನೀಡಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.
ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡು 10 ವರ್ಷದಲ್ಲಿ ನಾಲ್ವರು ಅಧ್ಯಕ್ಷರು ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ದೇವಿ ಪ್ರಸಾದ್ ಅವರ ಕೊಡುಗೆ ಅಪಾರ. ಇವರನ್ನು ಸದಾ ಸ್ಮರಿಸಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಆಯಾಯ ಸ್ಥಳೀಯ ಮಾತೃ ಭಾಷೆಗಳು ಉಳಿದಾಗ ಮಾತ್ರ ಆಚಾರ-ವಿಚಾರ, ಸಂಸ್ಕøತಿಯನ್ನು ಉಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.
‘ಕೊಡಗು ಜಿಲ್ಲೆಯಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಕುಟುಂಬ ಯೋಜನೆ ಅನುಸರಿಸಲಾಗುತ್ತದೆ. ಈ ಬಗ್ಗೆ ಯೋಚಿಸಬೇಕಿದೆ ಎಂದು ಸುಜಾ ಕುಶಾಲಪ್ಪ ಅವರು ಹೇಳಿದರು.
ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಇದರಿಂದ ನಾಗರಿಕತೆಯನ್ನು ಉಳಿಸಿಕೊಂಡು ಹೋಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಹಬ್ಬ ಹರಿದಿನಗಳು, ಉಡುಗೆ, ತೊಡುಗೆ ವಿಭಿನ್ನವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಮಾತನಾಡಬೇಕು. ಅರೆಭಾಷೆ ಮಾತನಾಡುವ ಮೂಲಕ ಸಂಸ್ಕøತಿಯನ್ನು ಉಳಿಸಬೇಕು. ಸಾಮರಸ್ಯದಿಂದ ಬದುಕಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಅಕಾಡೆಮಿ ಮೂಲಕ ವಿಶ್ವಕೋಶ, ಪದಕೋಶ, ನಾಟಕ, ಡಿಜಿಟಲೀಕರಣ, ಚಿತ್ರಕಲೆ, ಪುಸ್ತಕ ಪ್ರಕಟಣೆ, ಸಂಶೋಧನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಅರೆಭಾಷೆಯನ್ನು ಎಲ್ಲೆಡೆ ಫಸರಿಸಲು ಪ್ರಯತ್ನಿಸಲಾಗಿದೆ ಎಂದರು.
ಕೊಡಗು, ದಕ್ಷಿಣ, ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲೆಡೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿದೆ. ಅರೆಭಾಷೆ ಸಂಸ್ಕøತಿ ಆಚಾರ-ವಿಚಾರಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಕಥೆ, ಕವನ, ಲಲಿತ ಪ್ರಬಂಧ, ಕವಿತೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿದೆ ಎಂದು ಕಜೆಗದ್ದೆ ಅವರು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ಸಾಹಿತ್ಯ, ಕಲೆ, ಸಂಸ್ಕøತಿ, ನಾಟಕ ಕಾರ್ಯಕ್ರಮದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಹಲವು ಪುಸ್ತಕಗಳನ್ನು ಹೊರತರುವ ಮೂಲಕ ಕಜೆಗದ್ದೆ ಅವರ ಅವಧಿಯಲ್ಲಿ ದಾಖಲಿಸುವ ಕೆಲಸ ಮಾಡಲಾಗಿದೆ ಎಂದು ಅವರು ಹೇಳಿದರು.
ಮತ್ತೊಬ್ಬ ನಿಕಟ ಪೂರ್ವ ಅಧ್ಯಕ್ಷರಾದ ಪಿ.ಸಿ.ಜಯರಾಮ ಅವರು ಮಾತನಾಡಿ ಅರೆಭಾಷೆ ಅಕಾಡೆಮಿಯಲ್ಲಿ ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಪ್ರಶಸ್ತಿ ಪುರಸ್ಕøತರ ಕುರಿತು ಸೀತಾರಾಮ ಕೇವಳ ಅವರು ಮಾತನಾಡಿ ಅರೆಭಾಷೆ ಅಕಾಡೆಮಿಯು ಭಾಷೆಯನ್ನು ಬೆಳೆಸುವಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ, ಪುಸ್ತಕ ಪ್ರಕಟಣೆ, ಲೇಖನ ಆಹ್ವಾನ, ನಾಟಕ, ಪದಕೋಶ, ಹೀಗೆ ಹಲವು ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಿ.ಜಿ.ಅಂಬೆಕಲ್, ರಂಗಭೂಮಿ/ನಾಟಕದಲ್ಲಿ ಸಾಧನೆ ಮಾಡಿರುವ ತುಕಾರಾಮ ಏನೆಕಲ್, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಚಂಡೀರ ಕೆ.ಬಸಪ್ಪ ಅವರಿಗೆ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಶಾಲೂ, ಸ್ಮರಣಿಕೆ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಸುಬ್ರಾಯ ಸಂಪಾಜೆ ಅವರು ಸಂಪಾದಿಸಿರುವ ಅರೆಭಾಷೆ ಸೋಬಾನೆ ಮತ್ತು ಚಂಡೀರ ಕೆ.ಬಸಪ್ಪ ಅವರು ಬರೆದಿರುವ ಅರೆಭಾಷೆ ಸುಪ್ರಭಾತ ಸಿಡಿಯನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಸುಬ್ರಾಯ ಸಂಪಾಜೆ, ಚಂಡೀರ ಕೆ.ಬಸಪ್ಪ ಮತ್ತು ಚಿತ್ರ ಕಲಾವಿದರಾದ ಬಿ.ಎಸ್.ಸತೀಶ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕತೆ, ಕವನ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಆರ್.ಸೋಮಣ್ಣ ಅವರು ಮಾತನಾಡಿದರು. ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ದಯಾನಂದ, ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಪುರುಷೋತ್ತಮ ಕಿರ್ಲಾಯ, ಡಾ.ಪುರುಸೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ ಇತರರು ಇದ್ದರು.
ಸದಸ್ಯರಾದ ಸ್ಮಿತಾ ಅಮೃತರಾಜ್ ಸ್ವಾಗತಿಸಿದರು. ಧನಂಜಯ ಅಗೋಳಿಕಜೆ ನಿರೂಪಿಸಿದರು. ಬಿಂದು ಹುಲಿಮನೆ ಆಶಯ ಗೀತೆ ಹಾಡಿದರು. ಎ.ಟಿ.ಕುಸುಮಾಧರ ವಂದಿಸಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network