Header Ads Widget

Responsive Advertisement

ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ವಿತರಣೆ


ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ವಿತರಿಸಿ

ಸರ್ಕಾರದ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಿ: ನಾಗೇಶ್ ಕುಂದಲ್ಪಾಡಿ

ಮಡಿಕೇರಿ ಆ.23: ಮಡಿಕೇರಿ ತಾಲ್ಲೂಕಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಸದಸ್ಯರಾದ ಸುಬ್ರಹ್ಮಣ್ಯ ಉಪಾಧ್ಯಾಯ, ತಹಶೀಲ್ದಾರ್ ಮಹೇಶ್ ಅವರು ಮಂಗಳವಾರ 22 ಮಂದಿಗೆ ಸಾಗುವಳಿ ಚೀಟಿ ಹಾಗೂ 18 ಮಂದಿಗೆ ನಿವೇಶನ ಹಕ್ಕು ಪತ್ರವನ್ನು ಮಂಗಳವಾರ ವಿತರಿಸಿದರು. 

ನಗರದ ತಹಶೀಲ್ದಾರ್ ಅವರ ಕಚೇರಿ ಸಭಾಂಗಣದಲ್ಲಿ ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ವಿತರಿಸಿ ಮಾತನಾಡಿದ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಸರ್ಕಾರವು ಭೂಮಿ ಇಲ್ಲದ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ನೀಡುತ್ತಿದ್ದು ಈ ಸೌಲಭ್ಯ ಪಡೆದು ಬಡವರು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾಗುವಳಿ ಚೀಟಿ ಅಥವಾ ನಿವೇಶನ ಹಕ್ಕುಪತ್ರವನ್ನು ಪರಬಾರೆ ಮಾಡಬಾರದು ಎಂದು ನಾಗೇಶ್ ಕುಂದಲ್ಪಾಡಿ ಅವರು ಸಲಹೆ ಮಾಡಿದರು. 

ಶಾಸಕರ ಮಾರ್ಗದರ್ಶನದಂತೆ ಹಕ್ಕುಪತ್ರ ವಿತರಿಸಲಾಗಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಆಗಬೇಕಿರುವ ಕಾರ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. 

ಸಾಗುವಳಿ ಚೀಟಿ ಪಡೆದಿರುವುದರಿಂದ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ನಾಗೇಶ್ ಕುಂದಲ್ಪಾಡಿ ಅವರು ಹೇಳಿದರು. 

ಸದಸ್ಯರಾದ ಸುಬ್ರಹ್ಮಣ್ಯ ಉಪಾಧ್ಯಾಯ ಅವರು ಮಾತನಾಡಿ ಅಕ್ರಮ ಸಕ್ರಮ ಯೋಜನೆಯಡಿ ಬಡ ಜನರಿಗೆ ಭೂಮಿಯ ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ನೀಡಲಾಗುತ್ತಿದ್ದು, ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು. ತಹಶೀಲ್ದಾರ್ ಪಿ.ಎಸ್.ಮಹೇಶ್, ಶಿರಸ್ತೆದಾರ್ ವೆಂಕಟೇಶ್, ರವಿಕುಮಾರ್, ಶಿವಣ್ಣವರ್, ಕೆ.ಕೆ.ರಮೇಶ್, ನಿತಿನ್ ಪ್ರಸಾದ್ ಇತರರು ಇದ್ದರು.