Header Ads Widget

ಸರ್ಚ್ ಕೂರ್ಗ್ ಮೀಡಿಯ

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ಪದವಿ ಫೆಸ್ಟ್ 'ಸಮನ್ವಯ'


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ಪದವಿ ಫೆಸ್ಟ್
'ಸಮನ್ವಯ'

ಕ್ರೀಡೆ ಜೊತೆಗೆ ಅಧ್ಯಯನಕ್ಕೂ ಗಮನಹರಿಸಿ: ಅಂಕಿತಾ ಸುರೇಶ್

ಮಡಿಕೇರಿ ಆ.23: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ಪದವಿ ಫೆಸ್ಟ್ 'ಸಮನ್ವಯ' ದಲ್ಲಿ ನಡೆದ ವಿವಿಧ ಶೈಕ್ಷಣಿಕ ಭೌದ್ದಿಕ ಸಾಮರ್ಥ್ಯದ ಸ್ಪರ್ಧೆಗಳಲ್ಲಿ ಮೈಸೂರಿನ ಸೇಪಿಯೆಂಟ್ ಕಾಲೇಜು ಸರ್ವಾಂಗೀಣ ವಿನ್ನರ್ ಆಗಿ ಹೊರಹೊಮ್ಮಿತು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಿಸಿಎ ವಿಭಾಗ ರನ್ನರ್ಸ್ ಸ್ಥಾನ ಪಡೆಯಿತು. 

ಮೈಸೂರು, ಹಾಸನ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ 15 ಕಾಲೇಜುಗಳಿಂದ 400 ವಿದ್ಯಾರ್ಥಿಗಳು  ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರು ಹಾಗೂ ವ್ಯವಸ್ಥಾಪಕರಾದ ಅಂಕಿತಾ ಸುರೇಶ್, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪಾಠ ಪ್ರವಚನಗಳ ಬಗ್ಗೆಯೂ ಹೆಚ್ಚು ಗಮನಹರಿಸಿದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಸಿ.ಜಗತ್ ತಿಮ್ಮಯ್ಯ, ಈಗಾಗಲೇ ಕಾರ್ಯಪ್ಪ ಕಾಲೇಜಿನಲ್ಲಿ ಇಂಗ್ಲೀಷ್ ಅರ್ಥಶಾಸ್ತ್ರ, ವಾಣಿಜ್ಯ, ಎಂಬಿಎ ಟ್ರಾವಲ್ ಎಂಡ್ ಟೂರಿಸಂ, ಯೋಗ ವಿಜ್ಞಾನ, ಭೌತಶಾಸ್ತ್ರ, ಕೊಡವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪ್ರಚಲಿತದಲ್ಲಿದ್ದು, ಕೊಡಗಿನ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. 

ಮುಂಬರುವ ದಿನಗಳಲ್ಲಿ ಕೊಡಗು ವಿಶ್ವವಿದ್ಯಾಲಯ ಆಗುವ ಸಾಧ್ಯತೆ ಇದೆ. ಆದ್ದರಿಂದ ಮತ್ತಷ್ಟು ಹೊಸ ವಿಷಯಗಳನ್ನು ಪರಿಚಯಿಸಲಾಗುತ್ತದೆ. ದೂರದ ಕಾರಣದಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೂ ಈ ಕಾಲೇಜು ಅನುಕೂಲವಾಗಲಿದೆ ಎಂದರು. 

ಸೋಲು ಗೆಲುವಿಗಿಂತ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲಾಗಿ ಪರಿಣಮಿಸಿರುವುದನ್ನು ಐಎಎಸ್, ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿಗಳಾದವರನ್ನು ಗಮನಿಸಿದರೆ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು. 

ಪ್ರಾಸ್ತಾವಿಕ ನುಡಿಗಳನ್ನಾಡಿದ ಎಂಬಿಎ ವಿಭಾಗದ ಸಂಯೋಜಕರಾದ ಡಾ.ಗಾಯತ್ರಿ ದೇವಿ, ಕಾಲೇಜಿನಲ್ಲಿರುವ ವಿವಿಧ ಸ್ನಾತಕೋತ್ತರ ವಿಷಯಗಳ ಕುರಿತು ಪರಿಚಯಿಸಿದರು. 

ಇಂಗ್ಲೀಷ್ ಪ್ರಾಧ್ಯಾಪಕರು ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಡಾ.ನಯನ ಕಶ್ಯಪ್, ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರಾದ ಯಕ್ಷಿತ್.ಪಿ.ಎಲ್, ದೇಚಮ್ಮ.ಕೆ.ಪಿ,  ಪೊನ್ನಣ್ಣ.ಕೆ.ಪಿ, ರಾಹುಲ್.ಎಂ.ಆರ್, ಶಶಾಂಕ್.ಜಿ ಉಪಸ್ಥಿತರಿದ್ದರು.