Header Ads Widget

Responsive Advertisement

ಅಂಧ ವಿಶೇಷ ಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ಕಲಿಕಾ ಶಿಬಿರಕ್ಕೆ ಚಾಲನೆ


ಅಂಧ ವಿಶೇಷ ಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ಕಲಿಕಾ ಶಿಬಿರಕ್ಕೆ ಚಾಲನೆ
 

ಮಡಿಕೇರಿ: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ವತಿಯಿಂದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್ ಇವರ ಸಹಭಾಗಿತ್ವದಲ್ಲಿ ಅಂಧ ವಿಶೇಷ ಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ಕಲಿಕಾ ಶಿಬಿರಕ್ಕೆ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಜಿಲ್ಲಾ ಸಂಚಾಲಕರಾದ ಡಾ.ಸಿ.ಪ್ರಶಾಂತ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷರಾದ ಪ್ರಸಾದ್ ಗೌಡ, ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ಇತರರು ನಗರದ ಭಾರತೀಯ ರೆಡ್‍ಕ್ರಾಸ್ ಭವನದಲ್ಲಿ ಗುರುವಾರ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಜಿಲ್ಲಾ ಸಂಚಾಲಕರಾದ ಡಾ.ಸಿ.ಪ್ರಶಾಂತ್ ಅವರು ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆ ಅಂಧ ವಿಶೇಷಚೇತನರಿಗೆ ಸಮುದಾಯದ ಸಹಭಾಗಿತ್ವದಲ್ಲಿ ಸ್ಥಳ ಪರಿಜ್ಞಾನ ಮತ್ತು ಚಲನವಲನ ಬಗ್ಗೆ ಮಾಹಿತಿ ನೀಡುವ ಶಿಬಿರವನ್ನು ನಾಲ್ಕು ದಿನಗಳ ಕಾಲ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಅಂಧ ವಿಶೇಷ ಚೇತನರು ಸಹ ಇತರರಂತೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವಂತಾಗಲು ಶಿಬಿರ ಏರ್ಪಡಿಸಲಾಗಿದೆ. ಅಂಧ ವಿಶೇಷಚೇತನರು ಶಿಬಿರದಲ್ಲಿ ನೀಡಲಾಗುವ ಮಾಹಿತಿಯನ್ನು ತಿಳಿದುಕೊಂಡು ದೈನಂದಿನ ಕೆಲಸಗಳನ್ನು ನಿರ್ವಹಿಸುವಂತಾಗಬೇಕು ಎಂದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಅವರು ಮಾತನಾಡಿ ವಿಶ್ವ ದೃಷ್ಠಿ ದಿನ ಪ್ರಯುಕ್ತ  ಶಿಬಿರವನ್ನು ಏರ್ಪಡಿಸಲಾಗಿದ್ದು, ಅಂಧ ವಿಶೇಷ ಚೇತನರಿಗೆ ಬೆಳಕು ದೊರೆಯುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ ಆಶಿಸಿದರು. 

ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ಅವರು ಮಾತನಾಡಿ ಅಂಧ ವಿಶೇಷಚೇತನರಿಗೆ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್, ಲ್ಯಾಪ್‍ಟಾಪ್, ವಿದ್ಯಾರ್ಥಿ ವೇತನ ದೊರೆಯಲಿದೆ. ಹಾಗೆಯೇ ಅಂಧ ಮಹಿಳೆಯರಿಗೆ ಶಿಶುಪಾಲನಾ ಭತ್ಯೆ ನೀಡಲಾಗುತ್ತದೆ ಎಂದು ಹೇಳಿದರು. 

ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಬೋರಯ್ಯ ಅವರು ಉದ್ದನೆಯ ಬಿಳಿ ಬೆತ್ತ ಬಳಕೆಯ ತರಬೇತಿ, ರಸ್ತೆ ಬದಿ ಮತ್ತು ರಸ್ತೆ ದಾಟುವುದು, ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದು, ಹಣ್ಣು ಮತ್ತು ತರಕಾರಿ, ನೋಟುಗಳ ಪರಿಚಯ, ವಸ್ತುಗಳನ್ನು ಹುಡುಕುವುದು, ಗಿಡಗಳಿಗೆ ನೀರು ಹಾಕುವುದು, ಬಸ್ ನಿಲ್ದಾಣದಲ್ಲಿ ಓಡಾಡುವುದು, ಇದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್‍ನ ಪ್ರಸಾದ್ ಗೌಡ ಅವರು ಮಾತನಾಡಿ ಶಿಬಿರದ ಪ್ರಯೋಜನವನ್ನು ಅಂಧ ವಿಶೇಷಚೇತನರು ಪಡೆದುಕೊಳ್ಳುವಂತಾಗಬೇಕು ಎಂದರು. 

ಕಾರ್ಯಕ್ರಮ ವ್ಯವಸ್ಥಾಪಕರಾದ ಅಂಕಚಾರಿ ಅವರು ಮಾತನಾಡಿ ಶಿಬಿರದಲ್ಲಿ 16 ಕ್ಕೂ ಹೆಚ್ಚು ಅಂಧ ವಿಶೇಷ ಚೇತನರು ಪಾಲ್ಗೊಂಡಿದ್ದಾರೆ ಎಂದರು.