Header Ads Widget

Responsive Advertisement

ಕಾವೇರಿ ತೀರ್ಥೋದ್ಬವಕ್ಕೆ ಕನಿಷ್ಟ ಎರಡು ದಿವಸ ಸರಕಾರಿ ರಜೆ ನೀಡಲು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ


ಕಾವೇರಿ ತೀರ್ಥೋದ್ಬವಕ್ಕೆ ಕನಿಷ್ಟ ಎರಡು ದಿವಸ ಸರಕಾರಿ ರಜೆ ನೀಡಲು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ

ದಸರಾಕ್ಕೆ ವಾರದ ರಜೆ... ಕಾವೇರಿ ತುಲಾಸಂಕ್ರಮಣಕ್ಕೆ ಒಂದು ದಿನದ ರಜೆ ಯಾವ ನ್ಯಾಯ.?!!

ನಮ್ಮದಲ್ಲದ ಹಬ್ಬಗಳಿಗೆ ನಾವು ವಾರಗಟ್ಟಲೆ ತಿಂಗಳಾನುಗಟಲೆ ಸರಕಾರಿ ರಜೆಯನ್ನು ಅನುಭವಿಸುವಾಗ ನಮ್ಮದೆಯಾದ ಹಬ್ಬಗಳಿಗೆ ವಿಧ್ಯಾರ್ಥಿಗಳು ಚಕ್ಕರ್ ಹೊಡೆದು ಹಬ್ಬಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ. ಕೂಡಲೆ ಕಾವೇರಿ ತೀರ್ಥೋದ್ಬವಕ್ಕೆ ಕೊಡಗಿನ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲಾಕಾಲೇಜುಗಳು ಸೇರಿದಂತೆ ಕೊಡಗು ಜಿಲ್ಲೆಯ ಸರಕಾರಿ ಕಛೇರಿಗಳಿಗೆ ಎರಡು ದಿವಸ ರಜೆ ಘೋಷಿಸಲು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ.

ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆದು ಒತ್ತಾಯಿಸುವುದರ ಜೊತೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಈ ಬಾರಿ ತೀರ್ಥೋದ್ಬವ ಸಂಜೆ 7ಗಂಟೆ 21ನಿಮಿಷಕ್ಕೆ ಆಗುತ್ತಿದ್ದು, ಕೊಡವರ ಕುಲದೇವಿ ಹಾಗೂ ಸಮಸ್ತ ಕೊಡಗಿನ ಆರಾಧ್ಯ ದೇವತೆ, ಧಕ್ಷಿಣ ಭಾರತದ ಕೋಟ್ಯಾಂತರ ರೈತರ ಬದುಕಿಗೆ ಜೀವನಾಡಿಯಾಗಿರುವ ಕರ್ನಾಟಕದ ಜೀವನದಿ, ದೇಶ ವಿದೇಶದಲ್ಲಿ ಕೂಡ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಮಾತೆ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಬವ ಕ್ಷಣವನ್ನು ಕಣ್ತುಂಬಿಕೊಳ್ಳಲು ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲು ಕೊಡವರು ಸೇರಿದಂತೆ ವಿವಿಧ ಜನಾಂಗ 17ರಂದು ಬೆಳಿಗ್ಗೆಯಿಂದಲೇ ಭಾಗಮಂಡಲಕ್ಕೆ ಆಗಮಿಸುತ್ತಿದ್ದು, ಅಂದು ಮಧ್ಯಾಹ್ನದ ಒಳಗೆ ನಡೆಯುವ ಪಿಂಡ ಪ್ರಧಾನ ಕಾರ್ಯದಲ್ಲಿ ಪಾಲ್ಗೊಂಡು ಮೃತರಾದ ಹಿರಿಯರ ಆತ್ಮಗಳಿಗೆ ಶಾಂತಿಯನ್ನು ಕೋರುವ ಮೂಲಕ ತ್ರಿವೇಣಿ ಸಂಗಮದಲ್ಲಿ ಮುಳುಗಿ ಭಂಗಂಡೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಭಾಗಮಂಡಲದಿಂದ ತಲಕಾವೇರಿಗೆ ತೆರಳಿ ತೀರ್ಥ ಸ್ನಾನ ಮಾಡುವ ಮೂಲಕ ಅಗಲಿದ ಹಿರಿಯರಿಗೆ ಮೋಕ್ಷವನ್ನು ಕೋರುತ್ತಾರೆ.

ಹಾಗೆ ಅಪಾರ ಯುವ ಸಮೂಹ ಸೇರಿದಂತೆ ವಯಸ್ಸಾದವರು ಕೂಡ ಭಾಗಮಂಡಲದಿಂದ ತಲಕಾವೇರಿಯವರೆಗೆ ಕಾಲು ನಡಿಗೆಯಲ್ಲಿ ತೆರಳಿ ತೀರ್ಥ ಸ್ನಾನ ಮಾಡುವ ಮೂಲಕ ಪುನೀತರಾಗುತ್ತಾರೆ, ಮಾತ್ರವಲ್ಲ ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಆ ತಾಯಿಯ ತೀರ್ಥ ಸ್ನಾನ ಮಾಡಲು ಅವಕಾಶವಿಲ್ಲದೆ, ಈ ಬಾರಿ ಮೇಯಲು ಹೋದ ಹಸುವನ್ನು ಕಾದು ಕುಳಿತ ಕರುವಿನಂತೆ ಕಾವೇರಿ ಮಾತೆಯ ಪವಿತ್ರ ತೀರ್ಥ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ತಮ್ಮ ಮಕ್ಕಳನ್ನು ಕರೆದುಕೊಂಡು ಬೆಳಿಗ್ಗೆಯಿಂದಲೇ ಸಂಜೆಯವರೆಗೆ ಕಾಯುತ್ತಿರುತ್ತಾರೆ. ಇನ್ನೂ ತೀರ್ಥೋದ್ಬವದ ಮರು ದಿವಸ ಜಿಲ್ಲೆಯ ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ. ಅದರಲ್ಲೂ ಕೊಡವರ ಮನೆಗಳಲ್ಲಿ ಕಣಿ ಪೂಜೆಯ ಸಂಭ್ರಮ, ತೀರ್ಥೋದ್ಬವವಾದ ಹತ್ತು ದಿನಗಳವರೆಗೆ ಅಂದರೆ ಪತ್ತಾಲೋದಿಯವರೆಗೆ ವಿವಿಧ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಹಬ್ಬದ ಸಂಭ್ರಮ ಮಾತ್ರವಲ್ಲ, ಮದುವೆಯಾದ ಹೆಣ್ಣುಮಕ್ಕಳು ತವರುಮನೆಗೆ ಬಂದು ಕಣಿ ಪೂಜಿಸಿದ ಕಾವೇರಿ ಮಾತೆಯ ರೂಪಕ್ಕೆ ಅಕ್ಷತೆಯನ್ನು ಹಾಕಿ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವ ಸಂಪ್ರದಾಯ ಕೊಡವರು ಹಾಗೂ ಇನ್ನಿತರ ಮೂಲ ನಿವಾಸಿಗಳದ್ದು. ಹೀಗಿರುವಾಗ ಜಿಲ್ಲೆಯಲ್ಲಿ ಹತ್ತು ದಿವಸ ರಜೆ ಕೊಟ್ಟರು ಸಾಲದು. ಆದರೆ ಕೇವಲ ಒಂದು ದಿವಸದ ಸೀಮಿತ ರಜೆ ಏತಕ್ಕಾಗಿ ಎನ್ನುವುದೆ ನಮ್ಮ ಪ್ರಶ್ನೆಯಾಗಿದೆ. 

ದಸರಾ ಎನ್ನುವುದು ಕೊಡಗಿನಲ್ಲಿ ಪೂರ್ವ ಕಾಲದಿಂದ ನಡೆದು ಬಂದಿರುವ ಆಚರಣೆಯಲ್ಲ, ಹಾಗೇ ದಸರಾ ಕೊಡಗಿನ ಪ್ರಮುಖ ಹಬ್ಬ ಅಲ್ಲದಿದ್ದರೂ ಕೂಡ ಕಳೆದ ಹಲವು ವರ್ಷಗಳಿಂದ ಮೈಸೂರಿನ ದಸರೆಯನ್ನು ಕೊಡಗಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಹಾಗೇ ಹತ್ತು ದಿನಗಳ ಕಾಲ ಶಾಲಾಕಾಲೇಜು ವಿಧ್ಯಾರ್ಥಿಗಳಿಗೆ ರಜೆ ನೀಡಲಾಯಿತು. ಹಾಗೇ ಗೌರಿ ಗಣೇಶನನ್ನು ನಾವು ವಿಜೃಂಭಣೆಯಿಂದ ಆಚರಿಸುತ್ತೇವೆ. ಅಷ್ಟೇಕೆ ಈ ಹಿಂದೆ ಕ್ರೀಶ್ಮಸ್ ರಜೆ ಸೇರಿದಂತೆ ಆ ರಜೆ ಈ ರಜೆ ಎಂದು ತಿಂಗಳಾನುಗಟ್ಟಲೆ ರಜೆಯನ್ನು ನಮ್ಮ ಮಕ್ಕಳು ಅನುಭವಿಸಿದ್ದಾರೆ. ಈಗಲೂ ಕೂಡ ನಮ್ಮದಲ್ಲದ ಹಬ್ಬಗಳಿಗೆ ನಾವು ರಜೆಯನ್ನು ಅನುಭವಿವಾಗ ನಮ್ಮದೆಯಾದ ಹಬ್ಬಕ್ಕೆ ಸೀಮಿತವಾದ ರಜೆಯೊಂದಿಗೆ ಕೇವಲ ಒಂದು ದಿವಸ ಮಾತ್ರ ಏತಕ್ಕಾಗಿ ಎಂದು ಅರ್ಥವಾಗುತ್ತಿಲ್ಲ. ಈ ಕೂಡಲೇ ತೀರ್ಥೋದ್ಬವದಂದು ಹಾಗೂ ತೀರ್ಥೋದ್ಬವದ ಮರುದಿನ ಸೇರಿ ಎರಡು ದಿವಸ ರಜೆ ನೀಡಬೇಕಿದೆ ಎಂದು ಜಿಲ್ಲೆಯ ಜನತೆಯ ಪರವಾಗಿ ನಾವು ಒತ್ತಾಯಿಸುತ್ತೇವೆ. ಹಾಗೆ ಮುಂದಿನ ವರ್ಷದಿಂದ ಸರಕಾರ ಕೇವಲ ಜಿಲ್ಲೆಗೆ ಸೀಮಿತವಾದ ರಜೆಯನ್ನು ನೀಡದೆ ರಾಜ್ಯಾದ್ಯಂತ ರಜೆಯನ್ನು ನೀಡುವ ಮೂಲಕ ಕಾವೇರಿ ಮಾತೆಯ ಋಣವನ್ನು ತೀರಿಸುವುದರೊಂದಿಗೆ ಹೊರಜಿಲ್ಲೆಯಲ್ಲಿರುವ ಜಿಲ್ಲೆಯ ಮಂದಿ ಹಬ್ಬಕ್ಕೆ ಬರಲು ಅನುಕೂಲವಾಗುತ್ತದೆ.

ವೇಧ ಶ್ಲೋಕದಲ್ಲಿ ಸ್ಥಾನವನ್ನು ಪಡೆದಿರುವ ಮಾತೆ ಕಾವೇರಿಯ ತೀರ್ಥೋದ್ಬವಕ್ಕೆ ರಾಜ್ಯಾದ್ಯಂತ ಮಾತ್ರವಲ್ಲ ದೇಶದಾದ್ಯಂತವೇ ರಜೆ ನೀಡಬೇಕು ಕಾರಣ ಕಾವೇರಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಕರ್ನಾಟಕ ಸೇರಿದಂತೆ ತಮಿಳುನಾಡು ಹಾಗೂ ಕೇರಳ ಈ ಮೂರು ರಾಜ್ಯಗಳಿಗೂ ಸಂಬಂಧಿಸಿದ ನದಿ, ಹೀಗಿರುವಾಗ ಕೇವಲ ಜಿಲ್ಲಾ ವ್ಯಾಪ್ತಿಯ ರಜೆ ಎಷ್ಟು ಸಮಂಜಸ ಎನ್ನುವುದು ಅಖಿಲ ಕೊಡವ ಸಮಾಜ ಯೂತ್ ಪ್ರಶ್ನೆಯಾಗಿದೆ. ಕೂಡಲೆ ಈ ಬಾರಿ ಕನಿಷ್ಟ ಜಿಲ್ಲೆಗೆ ಸೀಮಿತವಾಗಿಯಾದರು ಸರಿ ಎರಡು ದಿವಸಗಳ ರಜೆಯನ್ನು ನೀಡುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ಬೆಲೆ ಕೊಡಬೇಕಿದೆ, ಕಾವೇರಿ ಮಾತೆಯ ಋಣ ತೀರಿಸಬೇಕಿದೆ. ಇದರ ಜೊತೆಗೆ ತುಲಾಸಂಕ್ರಮಣದ ತಯಾರಿಗಾಗಿ ಸರಕಾರ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಇನ್ನೂ ನಿಗೂಢವಾಗಿಯೇ ಇದೆ, ಇಲ್ಲಿಯವರೆಗೂ ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಮೈಸೂರು ದಸರಾಕ್ಕೆ ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಸರಕಾರ ಕಾವೇರಿ ಮಾತೆಯ ಮೇಲೆ ಏಕೆ ಇಷ್ಟು ನಿರ್ಲಕ್ಷ್ಯ ಎಂದು ತಿಳಿಯುತ್ತಿಲ್ಲ. ದಸರಾದಂತೆ ಕಾವೇರಿ ತುಲಾಸಂಕ್ರಮಣಕ್ಕೂ ಅದ್ದೂರಿಯ ಲೈಟಿಂಗ್ ವ್ಯವಸ್ಥೆ ಮಾಡಬಹುದಲ್ಲವೇ.? ಹಾಗೇ ಇಷ್ಟು ವರ್ಷ ದೇವಸ್ಥಾನದ ಅಲಂಕಾರ ಸೇರಿದಂತೆ ಹೂವು ಹಣ್ಣು ವಿವಿಧ ಕಾರ್ಯಗಳಿಗೆ ಟೆಂಡರ್ ಕರೆಯಲಾಗುತ್ತಿತ್ತು, ಆದರೆ ಈ ಬಾರಿ ಇದುವರೆಗೂ ಯಾವುದೇ ಟೆಂಡರ್ ಕರೆಯಲಾಗಿಲ್ಲ ಇದರ ಉದ್ದೇಶವೇನು ಎಂದು  ಅಖಿಲ ಕೊಡವ ಸಮಾಜ ಯೂತ್ ವಿಂಗ್ ಪ್ರಶ್ನೆ ಮಾಡಿದೆ.