Header Ads Widget

ಸರ್ಚ್ ಕೂರ್ಗ್ ಮೀಡಿಯ

“ಕಾಂತಾರ” ಸಿನಿಮಾದ ವೈಶಿಷ್ಟವೇ ಬೇರೆ. ಅದರಿಂದಲೇ ಈ ಸಿನಿಮಾ ಜಗತ್ತನ್ನು ಗೆದ್ದಿದೆ.


“ಕಾಂತಾರ” ಸಿನಿಮಾದ ವೈಶಿಷ್ಟವೇ ಬೇರೆ. ಅದರಿಂದಲೇ ಈ ಸಿನಿಮಾ ಜಗತ್ತನ್ನು ಗೆದ್ದಿದೆ.

ಭಾಷೆ-ಆಚಾರ-ವಿಚಾರ-ಧರ್ಮವನ್ನು ಮೀರಿ ಎಲ್ಲರಿಂದಲೂ ಪ್ರಶಂಸೆಗೆ ಒಳಪಟ್ಟ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ತನ್ನ ಹೊಸ ಚರಿತ್ರೆ, ಮೈಲಿಗಲ್ಲನ್ನು ನಿರ್ಮಿಸಿದ ಚಿತ್ರ  ಕಾಂತಾರ.

ಕಾಂತರ ಸಿನಿಮಾ ಕರ್ನಾಟಕ ಮಾತ್ರವಲ್ಲದೆ ಜಗತ್ತಿನಾದ್ಯಂತ ಎಲ್ಲಾ ವರ್ಗದವರು ಜಾತಿ ಮತ ಧರ್ಮವನ್ನು ಮೀರಿ ಸಿನಿಮಾವನ್ನು ವೀಕ್ಷಿಸಿ ಮುಕ್ತಕಂಠದಿಂದ ಹೊಗಳಿದ್ದು ನಮ್ಮನಾಡಿಗೆ ಸಿಕ್ಕಂತಹ ದೊಡ್ಡ ಗೌರವ.

ತುಳು ನಾಡ ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ತುಳುನಾಡಿನವರಿಗೆ ದೇವರಿಗಿಂತ ಹೆಚ್ಚಾಗಿ ದೈವವನ್ನೇ ನಂಬಿಕೊಂಡು ಬಂದಿರುವುದು ಇತಿಹಾಸ. ದೈವ ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳು ಆಳಕ್ಕೆ ಇಳಿದು ಕಾಂತಾರ ಸಿನಿಮಾ ನಿರ್ಮಾಣ ಮಾಡಿ ಜಗತ್ತೇ ಬೆರಗಾಗುವಂತೆ ಮಾಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಲೇಬೇಕು.

ಈ ಸಿನಿಮಾ ಕೇವಲ ಸಿನಿಮಾ ಆಗಿರಲಿಲ್ಲ. ಈ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ  ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿಯುವಂತಹ ಒಂದು ದಂತಕಥೆ. ಈ ಸಿನಿಮಾವನ್ನು ಕುತೂಹಲ ಅಂಶಕ್ಕಿಂತ ಹೆಚ್ಚಾಗಿ ನಮಗೆ ದೈವದ ಮೇಲಿನ ಭಕ್ತಿ ಪರಾಕಾಷ್ಠೆಯಿಂದ ಸಿನಿಮಾವನ್ನು ಎಲ್ಲರೂ ಕುಟುಂಬ ಸಮೇತರಾಗಿ ನೋಡಿರುವುದು ನೋಡುತ್ತಿರುವುದು ವಿಶೇಷ. ಈ ಸಿನಿಮಾವನ್ನು ಯಾವ ಸಿನಿಮಾಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಯಾಕೆಂದರೆ ಈ ಸಿನಿಮಾದ ವೈಶಿಷ್ಟವೇ ಬೇರೆ. ಅದರಿಂದಲೇ ಈ ಸಿನಿಮಾ ಜಗತ್ತನ್ನು ಗೆದ್ದಿದೆ.

ತುಳುನಾಡಿನಲ್ಲಿ ಮಾತ್ರವಲ್ಲದೆ ದೈವವನ್ನು ಆರಾಧಿಸುವ ಎಲ್ಲಾ ಕಡೆಯಲ್ಲೂ ಕಾರ್ಣಿಕದ ಅನುಭವ ಇದ್ದೇ ಇರುತ್ತದೆ. ಆದರೆ ತುಳುನಾಡಿನಲ್ಲಿ ಎಲ್ಲ ಕಾರ್ಯಗಳ ಆರಂಭದಲ್ಲಿ ಮೊದಲು ನೆನೆಸಿ ನಮಿಸುವುದು ದೈವಗಳನ್ನು ನಂತರ ದೇವರು. ಕಾರಣ ಈ ಮಣ್ಣಿನಲ್ಲಿ ಇರುವ ದೈವದ ಶಕ್ತಿ. ಪ್ರತಿ ಮನೆತನದಲ್ಲಿ ದೈವಗಳಿಗೆ ಆರಾಧ್ಯ ಸ್ಥಾನವನ್ನು ಪಡೆದುಕೊಂಡಿದೆ.

ದೈವಗಳ ಕೋಲ ತುಳುನಾಡು ಮಾತ್ರವಲ್ಲದೆ ಕೊಡಗು  ಜಿಲ್ಲೆಯಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವುದನ್ನು ನಾವು ನೋಡಿರುತ್ತೇವೆ. ನಮ್ಮ ನಂಬಿಕೆಗಳ ಬಗ್ಗೆ ಅಧ್ಯಯನ ಮಾಡಿದವರಿಗೆ ನಮ್ಮ ದೈವಗಳ ಹಿನ್ನೆಲೆ ಚೆನ್ನಾಗಿ ಗೊತ್ತಿರುತ್ತದೆ. ನಡೆಯಲ್ಲಿ ನಿಂತು ಕೊಟ್ಟ ಮಾತಿಗೆ ತಪ್ಪಿ ನಡೆದರೆ ತಲ ತಲಾಂತರದವರೆಗೆ ಶಿಕ್ಷೆ ನೀಡುವ ದೈವಗಳು ತುಳುನಾಡಿನ ಜೀವನದ ಒಂದು ಬಹು ದೊಡ್ಡ ಭಾಗ. ಅಂತಹ ದಿವ್ಯಶಕ್ತಿಯ ಕಾರ್ನಿಕದ ಪಂಜುರ್ಲಿ ದೈವದ ಕತೆಯನ್ನು ಯಾವುದೇ ಲೋಪ ಬರದಂತೆ ಚಿತ್ರಿಸಿದ ರೀತಿ ಇದೆಯಲ್ಲಾ ಇದು ಎಲ್ಲರಿಂದ ಸಾಧ್ಯವಿಲ್ಲ. ಆ ದೈವವನ್ನು ನಂಬಿಕೊಂಡು ಆರಾಧಿಸಿಕೊಂಡು ಬಂದಿರುವುದರಿಂದ ಇದು ಸಾಧ್ಯವಾಗಿದೆ ಎನ್ನಬಹುದು.

ಹಿಂದಿನ ಕಾಲಘಟ್ಟದಲ್ಲಿ ದೈವ ನರ್ತಕರು ಯಾವ ರೀತಿಯಲ್ಲಿ ತನ್ನ ಬದುಕನ್ನು ಕಟ್ಟಿ ಕೊಂಡಿರಬಹುದು ಮತ್ತು ಆ ಕಾಲದಲ್ಲಿ ಎಷ್ಟೊಂದು ಸಂಕಷ್ಟವನ್ನು ಅನುಭವಿಸಿರಬಹುದು ಎಂಬುದಕ್ಕೆ ಕಾಂತಾರ ಸಿನಿಮಾವೇ ಸಾಕ್ಷಿ. ದೈವ ನರ್ತಕರು ಪ್ರಕೃತಿ ಆರಾಧಕರು  ಮಾತ್ರವಲ್ಲದೆ ಈ ನಾಡಿನ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದವರಲ್ಲಿ ಅವರ ಪಾಲು ಕೂಡ ಇದೆ.

ಕಾಂತಾರ ಸಿನಿಮಾ ನೋಡುವಾಗ ಈ ಮಣ್ಣಿನ ಸಂಸ್ಕೃತಿ ಅರಿವಿದ್ದವರ ಮೈ ಜುಂ ಅನಿಸಿರಬಹುದು. ದೈವದ ಕೊಲದ ದೃಶ್ಯ, ದೈವದ ನುಡಿ, ದೈವದ ಆವೇಶ, ಕಂಬಳ ಕ್ರೀಡೆ, ಕೋಳಿ ಅಂಕ, ಇವುಗಳ ಮಧ್ಯೆ ಪೋಲಿತನದ ಬೈಗುಳ ಕೆಲವೊಂದು   ಹಾಸ್ಯ  ಸೇರಿದಂತೆ ಮುಖ್ಯವಾಗಿ ಪ್ರಕೃತಿಯನ್ನು ತೋರಿಸಿದ ದೃಶ್ಯ ಎಲ್ಲವೂ ದೀರ್ಘ ಕಾಲ ನೆನಪಲ್ಲಿ ಉಳಿಯುವಂತೆ ಮಾಡಿದೆ.

ಈ ಸಿನಿಮಾದಲ್ಲಿ ಪ್ರಮುಖ ನಾಯಕನಟನಿಂದ ಹಿಡಿದು ಸಣ್ಣ ಪಾತ್ರದಾರಿ ಕೂಡ ತನ್ನ ಅದ್ಭುತ ನಟನೆಯಿಂದ ಸಿನಿಮಾ ಗೆಲ್ಲುವಲ್ಲಿ ಪ್ರಮುಖ  ಕಾರಣಕರ್ತರಾಗಿದ್ದಾರೆ. ಸಿನಿಮಾ ನಿರ್ಮಾಣ ಮಾಡಿದರೆ ಈ ರೀತಿಯ  ಸಿನಿಮಾ ಮಾಡಬೇಕು ಮತ್ತು ಈ ರೀತಿಯ ಸಿನಿಮಾವನ್ನು ಸಿನಿಪ್ರೇಕ್ಷಕರು ಕೈಬಿಡುವುದಿಲ್ಲ ಎಂಬುದಕ್ಕೆ ಕಾಂತಾರ ಸಿನಿಮಾವೇ ಸಾಕ್ಷಿ.

ದೈವದ ಬಗ್ಗೆ ಎಷ್ಟೊಂದು ಭಯ-ಭಕ್ತಿ ಇದೆ ಅಂದರೆ ಸಿನಿಮಾ ನೋಡಲು ಕುಟುಂಬ ಸಮೆತ ಹೋದವರಲ್ಲಿ  ಅನೇಕ ಮಂದಿ   ಮನೆಯಲ್ಲಿ ಸ್ನಾನ ಮಾಡಿ ಶುದ್ಧತೆಯಿಂದ ಸಿನಿಮಾ ವೀಕ್ಷಿಸಿದವರು ಕೆಲವರಾದರೆ, ಸಿನಿಮಾದಲ್ಲಿ ದೈವ ನರ್ತನ ಪ್ರಾರಂಭವಾಗುವಾಗ ತನ್ನ ಪಾದರಕ್ಷೆಯನ್ನು ಕಳಚಿಟ್ಟು ಸಿನಿಮಾ ವೀಕ್ಷಿಸಿದ ಅದೆಷ್ಟು ಪ್ರೇಕ್ಷಕರು ಒಂದೆಡೆಯಾದರೆ, ಕೆಲ ಪ್ರೇಕ್ಷಕರಿಗೆ ದೈವ ಮೈಮೇಲೆ   ಬಂದಿರುವುದು ಈ ಸಿನಿಮಾದ ದಿವ್ಯಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಈ ಸಿನಿಮಾವನ್ನು ಸಿನಿ ಪ್ರೇಕ್ಷಕರು ಗೆಲ್ಲಿಸಿರಬಹುದು. ಆದರೆ ದೈವದ ಮೇಲಿನ ಭಯ ಭಕ್ತಿ ನಂಬಿಕೆಯಿಂದ  ಕಾಂತಾರ ಸಿನಿಮಾವನ್ನು ಪಂಜುರ್ಲಿ ದೈವವೇ ಗೆಲ್ಲಿಸಿರಬಹುದು ಎಂಬುದು ಜನ ವಲಯದಲ್ಲಿ ಮಾತು ಕೇಳಿಬರುತ್ತಿದೆ.

ಏನೇ ಆಗಲಿ ಈ ಸಿನಿಮಾಕ್ಕೆ ರಾಷ್ಟ್ರೀಯ ಉತ್ತಮ ಸಿನಿಮಾ ಪ್ರಶಸ್ತಿ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಸಿನಿಮಾ ಕ್ಷೇತ್ರಕ್ಕೆ ಕೊಡುವ ಆಸ್ಕರ್ ಪ್ರಶಸ್ತಿಯು ಪಂಜುರ್ಲಿ ದೈವದ ಕೃಪೆಯಿಂದ ಸಿಗುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಕೊನೆಯದಾಗಿ: ಹೇಳಬೇಕೆಂದು ಕೊಂಡಿರುವ ವಿಷಯವೇನೆಂದರೆ ಕಾಂತಾರ ಸಿನಿಮಾ ನೋಡಲು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಹೋದಂತೆ, ವರ್ಷಕ್ಕೊಮ್ಮೆ ಕುಟುಂಬದ ಮೂಲ ಸ್ಥಾನಕ್ಕೆ ಕುಟುಂಬ ಸಮೇತರಾಗಿ ಹೋಗಿ  ಎಂಬುವುದೇ ನನ್ನ ಕೊನೆಮಾತು.   

✍️....ಪಿ.ಎಂ. ರವಿ 

ಸದಸ್ಯರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ         

( ಪಿ.ಎಂ. ರವಿ )