Header Ads Widget

ಸರ್ಚ್ ಕೂರ್ಗ್ ಮೀಡಿಯ

ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಡಿಸೆಂಬರ್-9ರಂದು ನಡೆಯಲಿದೆ


ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಡಿಸೆಂಬರ್-9ರಂದು ನಡೆಯಲಿದೆ

ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿನಾಡ್ ಈ ಮೂರು ನಾಡುಗಳಿಗೆ ಸೇರಿದ ಇತಿಹಾಸ ಪ್ರಸಿದ್ದದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಪೈಪೋಟಿ ಒಳಗೊಂಡಂತೆ ಕೋಲ್ ಮಂದ್ ಡಿಸೆಂಬರ್ 9ರಂದು ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.

ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್'ನಲ್ಲಿ ನಡೆದ ಎರಡನೇ ಪೂರ್ವಭಾವಿ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಯಿತು. ಕಳೆದ ಎರಡು ವರ್ಷಗಳಿಂದ ಕೊರೋನ ಎಂಬ ಮಹಾ ಮಾರಿ ಜನರನ್ನು ತತ್ತರಿಸುವಂತೆ ಮಾಡಿದೆ ಮಾತ್ರವಲ್ಲ ಜನರಿಗೆ ಯಾವುದೇ ಮನೋರಂಜನೆ ಕೂಡ ಇಲ್ಲದಾಗಿದೆ. ಒಗ್ಗೂಡುವಿಕೆ ಕೂಡ ದೂರವಾಗಿತ್ತು. ಇದರಿಂದ ವರ್ಷಕೊಮ್ಮೆ ನಡೆಯುವ ಪುತ್ತರಿ ಕೋಲ್ ಮಂದ್ ಸಹ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕೈಮುಡಿಕೆ ಪುತ್ತರಿ ಕೋಲ್ ಮಂದನ್ನು ಜಿಲ್ಲಾ ಮಟ್ಟದ ಪೈಪೋಟಿಯೊಂದಿಗೆವಿಜೃಂಭಣೆಯಿಂದ ಆಚರಿಸಲು  ತಿರ್ಮಾನಿಸಲಾಯಿತು.

ಡಿಸೆಂಬರ್-9ರಂದು ಬೆಳಿಗ್ಗೆ10-30 ಗಂಟೆಗೆ ಮಂದ್ ಹಿಡಿದು ನಂತರ ಮೂರು ನಾಡಿನವರ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಬಳಿಕ ವಿವಿಧ ಪೈಪೋಟಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ಹಾಗೂ ಈ ಬಾರಿ ಜಿಲ್ಲೆಯ ವಿವಿಧ ಮಂದ್'ಗಳು  ಸೇರಿದಂತೆ ಸಂಘ ಸಂಸ್ಥೆ ಹಾಗೂ ಶಾಲಾಕಾಲೇಜುಗಳು ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಕುಶಾಲಪ್ಪ ತಿಳಿಸಿದ್ದರು. ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಪೈಪೋಟಿಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿ ಪೈಪೋಟಿಯನ್ನು ನಡೆಸಲು ಸಭೆ ತಿರ್ಮಾನಿಸಿದ್ದು. ಹತ್ತನೇ ತರಗತಿಯ ಒಳಗೆ ಒಂದು ವಿಭಾಗ, ಪಿ.ಯು.ಸಿ ಹಾಗೂ ಪದವಿ ತರಗತಿ ಸೇರಿ ಮತ್ತೊಂದು ವಿಭಾಗ, ಹಾಗೂ ಜಿಲ್ಲೆಯ ವಿವಿಧ ಮಂದ್ ಅಥವಾ ಸಂಘ ಸಂಸ್ಥೆ, ಸಮಾಜಗಳು ಸೇರಿ ಸಾರ್ವಜನಿಕರ ವಿಭಾಗವಾಗಿ ಪೈಪೋಟಿ ನಡೆಸಲು ತಿರ್ಮಾನಿಸಲಾಯಿತು. 

ಕೋಲ್ ಮಂದ್ ವರ್ಷಂಪ್ರತಿ ಪುತ್ತರಿ ಕಳೆದು ಎರಡನೇ ದಿನದಂದು ನಡೆಯಲ್ಲಿದ್ದು ಪುತ್ತರಿ ಹಬ್ಬವು ಈ ಬಾರಿ ಡಿಸೆಂಬರ್ 7ರಂದು ನಿಗಧಿಯಾಗಿರುವುದರಿಂದ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಡಿಸೆಂಬರ್ 9ರಂದು ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್'ನಲ್ಲಿ ನಡೆಯಲಿದೆ. ಪೈಪೋಟಿಗಳು ಈ ಕೆಳಗಿನಂತಿದ್ದು ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಪರೆಯ ಕಳಿ, ಕಪ್ಪೆಯಾಟ್, ದುಡಿಕೊಟ್ಟ್ ಪಾಟ್(ಬಾಳೋ ಪಾಟ್), ವಾಲಗತಾಟ್, ಪಾಟ್ ಪೈಪೋಟಿ ಸೇರಿದಂತೆ ಅಳಿವಿನಂಚಿನಲ್ಲಿರುವ ಯರವ ಜನಾಂಗಕ್ಕಾಗಿ ವಿಶೇಷ ಪೈಪೋಟಿಯನ್ನು ಏರ್ಪಡಿಸಲಾಗಿದ್ದು ಯರವಾಟ್ ಪೈಪೋಟಿಯೊಂದಿಗೆ,  ಈ ಬಾರಿ ಚೀನಿ ಹಾಗೂ ಚೀನಿ ದುಡಿಯನ್ನು ನುಡಿಸುವ ವಿಶೇಷ ಪೈಪೋಟಿಯನ್ನು ಏರ್ಪಡಿಸಲಾಗಿದ್ದು ಇದರ ಪರಿಕರವನ್ನು ಅವರೇ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಪೈಪೋಟಿಗೆ ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಕಾರ್ಯಕ್ರಮವು ಪುತ್ತರಿ ಕಳೆದು ಎರಡನೇ ದಿನದಂದು ಬೆಳಿಗ್ಗೆ 10.30 ಗಂಟೆಯಿಂದ ಸಂಜೆಯವರೆಗೆ ನಡೆಯಲ್ಲಿದ್ದು ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಸಭೆಯಲ್ಲಿ ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಸೇರಿದಂತೆ ಕುತ್ತ್'ನಾಡ್ ತಕ್ಕರಾದ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿ ನಾಡ್ ತಕ್ಕರಾದ ಮಳವಂಡ ಭುವೇಶ್ ದೇವಯ್ಯ, ಮೂರು ನಾಡಿನ ಗೌರವ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ, ಊರು ತಕ್ಕರು ಹಾಗೂ ನಾಡಿನವರಾದ ಕೊಂಡಂದೇರ ಬಾಂಡ್ ಗಣಪತಿ, ಅಪ್ಪಂಡೇರಂಡ ಮನು ಮೋಹನ್, ಚಮ್ಮಟೀರ ಸುಗುಣ ಮುತ್ತಣ್ಣ, ತೀತಮಾಡ ಉತ್ತಪ್ಪ, ತೀತಮಾಡ ವಾಸು ಗಣಪತಿ, ಸಣ್ಣುವಂಡ ಅಪ್ಪಿ , ಚಮ್ಮಟೀರ ಪ್ರವೀಣ್ ಉತ್ತಪ್ಪ, ಮೇಚಂಡ ಹ್ಯಾರಿ ಅಚ್ಚಪ್ಪ, ತೀತಿಮಾಡ ಗಾಂದಿ, ಬಲ್ಲಣಮಾಡ ಲಿತಿನ್, ಕಡೇಮಾಡ ಶರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.