ಕೊಡಗಿನ ಮಂದ್ ಮಾನಿ ಹಾಗೂ ದೇವಸ್ಥಾನವಿರುವ ದೇವರ ಕಾಡುಗಳನ್ನು ತಕ್ಕ ಮುಖ್ಯಸ್ಥರ ಹೆಸರಿಗೆ ಮಾಡಲು ಅಖಿಲ ಕೊಡವ ಸಮಾಜ ಹಾಗೂ ಅಂಗಸಂಸ್ಥೆಗಳು ಒತ್ತಾಯ
ಕೊಡಗು ಜಿಲ್ಲೆಯ ಮಂದ್ ಮಾನಿ ಹಾಗೂ ಊರು ನಾಡಿನಲ್ಲಿ ದೇವಸ್ಥಾನಗಳಿರುವ ದೇವರ ಕಾಡುಗಳನ್ನು ಆಯಾಯ ಊರು /ನಾಡುಗಳ ತಕ್ಕ ಮುಖ್ಯಸ್ಥರ ಹೆಸರಿಗೆ ಪಹಣಿಪತ್ರ ಮಾಡಲು ಅಖಿಲ ಕೊಡವ ಸಮಾಜ, ಯೂತ್ ವಿಂಗ್ ಹಾಗೂ ಪೊಮ್ಮಕ್ಕಡ ಪರಿಷತ್ ಒತ್ತಾಯ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ದೇಶ ವಿದೇಶವೇ ಬೆರಗು ಗಣ್ಣಿನಿಂದ ನೋಡುತ್ತಿರುವ ಕೊಡಗಿನ ಶ್ರೀಮಂತ ಸಂಸ್ಕೃತಿ ಈ ಮಂದ್ ಮಾನಿಗಳಲ್ಲಿ ಅಡಗಿದೆ ಎಂದರೆ ತಪ್ಪಲ್ಲ. ಇಂದು ಮಂದ್ ಮಾನಿಗಳು ಉಳಿದರೆ ಮಾತ್ರ ಈ ಕೊಡಗಿನ ಶ್ರೀಮಂತ ಸಂಸ್ಕೃತಿ ಉಳಿಯಲು ಸಾಧ್ಯ. ಇಂದು ಅದೆಷ್ಟೋ ಮಂದ್ ಮಾನಿ ಹಾಗೂ ದೇವರಕಾಡುಗಳು ಒತ್ತುವರಿಯಾಗಿ ಉಳಿದಿರುವುದು ಅಲ್ಪಸ್ವಲ್ಪ ಅಷ್ಟೆ. ಇಂದು ಬಹುತೇಕ ಮಂದ್ ಮಾನಿ ದೇವರಕಾಡುಗಳು ಸರಕಾರದ ಸೊತ್ತು ಎಂದು ಆರ್ ಟಿ ಸಿ ಗಳಲ್ಲಿ ನಮೂದಿಸಲಾಗಿದ್ದರು ಅನಾದಿಕಾಲದಿಂದಲೂ ಇದನ್ನು ಉಳಿಸಿ ಬೆಳೆಸಿಕೊಂಡು ಬಂದವರು ಆಯಾಯ ಊರು ನಾಡಿನ ಜನರು ಹೊರತು ಯಾವುದೇ ಸರಕಾರಗಳಲ್ಲ ಹಾಗೂ ಜನಪ್ರತಿನಿಧಿಗಳು ಅಲ್ಲಾ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ.
ಜಿಲ್ಲೆಯ ಬಹುತೇಕ ಕೋಲ್ ಮಂದ್'ಗಳು ಇವತ್ತು ಒತ್ತುವರಿಯಾಗಿ ಕಣ್ಮರೆಯಾಗುತ್ತಿದ್ದರೆ, ಬೆರಳೆಣಿಕೆಯ ಮಂದ್'ಗಳು ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಕಾಯ್ದಿರಿಸಲ್ಪಟ್ಟಿದೆ. ಇದರಲ್ಲಿ ಕೆಲವು ಕೋಲ್ ಮಂದ್'ಗಳು ಸರಕಾರದ ಹೆಸರಿನಲ್ಲಿ ಪೈಸಾರಿ ಎಂದಿದ್ದರೆ ಮತ್ತೆ ಕೆಲವು ದಾನ ನೀಡಲಾದ ದಾನಿಗಳ ಹೆಸರಿನಲ್ಲಿಯೇ ಇದೆ. ಮತ್ತೆ ಕೆಲವು ಸರಕಾರದ ಹೆಸರಿನಲ್ಲಿದ್ದರು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ ಎಂಬಂತೆ ಸರಕಾರದೊಂದಿಗೆ ಆ ಮಂದ್ ಹೆಸರು ಕೂಡ ಆರ್.ಟಿ.ಸಿ ಯಲ್ಲಿ ದಾಖಲಾಗಿದೆ ಎಂದರೆ ತಪ್ಪಲ್ಲ. ಇಂತಹ ಬೆರಳೆಣಿಕೆಯ ಮಂದ್'ಗಳಲ್ಲಿ ಪೊನ್ನಂಪೇಟೆ ತಾಲೂಕು ಕುಂದಾ ಮುಗುಟಿಗೇರಿ ಗ್ರಾಮದಲ್ಲಿರುವ ಹಾಗೂ ಇದರ ಸುತ್ತಮುತ್ತಲ ಆರು ಗ್ರಾಮಗಳಾದ ಹುದೂರು, ಹಳ್ಳಿಗಟ್ಟು, ಈಚೂರು, ಕುಂದಾ, ಅರ್ವತೋಕ್ಲು ಹಾಗೂ ಮುಗುಟಿಗೇರಿ ಗ್ರಾಮಗಳಿಗೆ ಸೇರಿದ ಇತಿಹಾಸ ಪ್ರಸಿದ್ದದ "ದೇವಮಕ್ಕಡ ಬಾಣೆ ಕೋಲ್ ಮಂದ್'' ಒಂದು ಎಂದರೆ ತಪ್ಪಲ್ಲ. ಆದರೆ ಇದರೊಳಗೆ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ತಕ್ಕ ಮುಖ್ಯಸ್ಥರ ಗಮನಕ್ಕೆ ಬಾರದಂತೆ ನೀರಿನ ಟ್ಯಾಂಕ್ ನಿರ್ಮಿಸಲು ಹೊರಟ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಇದರ ಅಂಗಸಂಸ್ಥೆಗಳು ಖಂಡಿಸುತ್ತದೆ, ಇದು ಹೀಗೆ ಮುಂದುವರಿದ್ದರೆ ಮುಂದಿನ ದಿನಗಳಲ್ಲಿ ಊರು ನಾಡಿನವರೊಂದಿಗೆ ನಾವು ಕೂಡ ಕೈಜೋಡಿಸುತ್ತೇವೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಮೂಲ ನೀಡುತಿದ್ದೇವೆ.
ತಕ್ಕಾಮೆ ಎಂಬ ನೆರಳಿನಡಿಯಲ್ಲಿ ಸ್ವಾತಂತ್ರ್ಯ ಪೂರ್ವ 1942ರಲ್ಲಿ ಸ್ಥಾಪನೆಯಾದ ಅಖಿಲ ಕೊಡವ ಸಮಾಜ ಕೊಡವರ ತಕ್ಕಾಮೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಈ ತಕ್ಕಾಮೆ ಎಂಬ ಪರಿಕಲ್ಪನೆಯಲ್ಲಿಯೇ ನಮ್ಮ ಪೂರ್ವಿಕರು ತಲತಲಾಂತರದಿಂದ ಉಳಿಸಿ ಬೆಳೆಸಿಕೊಂಡು ಬಂದಿರುವ ಈ ಮಂದ್ ಮಾನಿ ಹಾಗೂ ದೇವರಕಾಡುಗಳ ಮೇಲೆ ಸರಕಾರದ ಕಣ್ಣು ಬಿದ್ದಿರುವುದು ಖಂಡನೀಯ ಈ ಕೂಡಲೇ ಜಿಲ್ಲೆಯ ವಿವಿಧ ಊರು ನಾಡುಗಳಲ್ಲಿರುವ ಮಂದ್ ಮಾನಿ ಹಾಗೂ ದೇವಸ್ಥಾನಗಳಿರುವ ದೇವರಕಾಡುಗಳನ್ನು ಆಯಾಯ ಊರು ನಾಡಿನ ತಕ್ಕಮುಖ್ಯಸ್ಥರ ಹೆಸರಿಗೆ ಅಂದರೆ ಉದಾಹರಣೆಗೆ "ತಕ್ಕಮುಖ್ಯಸ್ಥರು ದೇವಮಕ್ಕಡ ಬಾಣೆ ಕೋಲ್ ಮಂದ್" "ತಕ್ಕಮುಖ್ಯಸ್ಥರು ಭದ್ರಕಾಳಿ ದೇವಸ್ಥಾನ ಹಳ್ಳಿಗಟ್" ಹೀಗೆ ಆರ್.ಟಿ.ಸಿ ಗಳಲ್ಲಿ ನಮೂದಿಸಬೇಕು ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅಂಗಸಂಸ್ಥೆಗಳು ಒತ್ತಾಯಿಸಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network