Header Ads Widget

Responsive Advertisement

ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ವಿಜೃಂಭಣೆಯಿಂದ ಆಚರಿಸಲು ತಕ್ಕಮುಖ್ಯಸ್ಥರು ತಿರ್ಮಾನ


ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ವಿಜೃಂಭಣೆಯಿಂದ ಆಚರಿಸಲು ತಕ್ಕಮುಖ್ಯಸ್ಥರು ತಿರ್ಮಾನ

ಈ ಬಾರಿ ಜಿಲ್ಲಾ ಮಟ್ಟದಲ್ಲಿ ಪೈಪೋಟಿ...

ಇತಿಹಾಸ ಪ್ರಸಿದ್ದದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಅನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಲಾಯಿತು.

ಮೂರು ನಾಡಿನ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್'ನಲ್ಲಿ ನಡೆದ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಯಿತು. ಕಳೆದೆರಡು ವರ್ಷ ಕೊರೋನ ಮಹಾ ಮಾರಿಯಿಂದ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಬಾರಿ ಪುತ್ತರಿ ಕೋಲ್ ಮಂದನ್ನು ವಿಜೃಂಭಣೆಯಿಂದ ಜಿಲ್ಲಾ ಮಟ್ಟದಲ್ಲಿ ಪೈಪೋಟಿಯನ್ನು ಆಯೋಜಿಸಲು ತಿರ್ಮಾನ ಕೈಗೊಳ್ಳಲಾಯಿತು. ವಿವಿಧ ಕಾರ್ಯಕ್ರಮಗಳೊಂದಿಗೆ ಮೂರು ವಿಭಾಗದಲ್ಲಿ ಪೈಪೋಟಿಯನ್ನು ನಡೆಸಲು ಸಭೆ ತಿರ್ಮಾನಿಸಿತು. ಶಾಲಾಕಾಲೇಜು ವಿಧ್ಯಾರ್ಥಿಗಳಿಗಾಗಿ ಹತ್ತನೇ ತರಗತಿಯ ಒಳಗೆ ಒಂದು ವಿಭಾಗ, ಪಿ.ಯು.ಸಿಯಿಂದ ಪದವಿ ಕಾಲೇಜು ವಿಧ್ಯಾರ್ಥಿಗಳು ಸೇರಿ ಮತ್ತೊಂದು ವಿಭಾಗ ಹಾಗೂ ಸಾರ್ವಜನಿಕರಿಗೆ ಬೇರೆಯದೇಯಾದ ವಿಭಾಗವಾಗಿ ವಿಂಗಡಿಸಿ ವಿವಿಧ ಪೈಪೋಟಿ ನಡೆಸಲು ತಿರ್ಮಾನಿಸಲಾಯಿತು. ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಪರೆಯ ಕಳಿ, ಕಪ್ಪೆಯಾಟ್, ಕೊಡವ ಪಾಟ್ ಪೈಪೋಟಿ ಸೇರಿದಂತೆ ವಾಲಗತಾಟ್, ಯರವಾಟ್ ಪೈ ಪೋಟಿಯ ಜೊತೆಗೆ ಅಳಿವಿನಂಚಿನಲ್ಲಿರುವ ಯರವ ಜನಾಂಗದ ಚೀನಿ ದುಡಿಯನ್ನು ನುಡಿಸುವ ವಿಶೇಷ ಪೈಪೋಟಿ ವಿಭಾಗಕ್ಕೂ ಬಹುಮಾನ ನೀಡುವ ಮೂಲಕ ಇವರಿಗೂ ಉತ್ತೇಜನ ನೀಡಲೂ ತಿರ್ಮಾನಿಸಲಾಯಿತು.

ಸಭೆಯ ಮೊದಲಿಗೆ ಬೊಟ್ಟಿಯತ್ ನಾಡಿನ "ದೇವಮಕ್ಕಡ ಬಾಣೆ ಕೋಲ್ ಮಂದ್'ನಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಮುಂದಾದ ಗ್ರಾಮ ಪಂಚಾಯತ್ ಕ್ರಮವನ್ನು ಖಂಡಿಸಿ ರೆಕಾರ್ಡ್ ಮಾಡಲಾಯಿತು. ಅನಿವಾರ್ಯ ಎಂದಾದರೆ ಮೂರು ನಾಡಿನವರು ದೇವಮಕ್ಕಡ ಬಾಣೆ ಕೋಲ್ ಮಂದ್'ನಲ್ಲಿ ಸಭೆ ಸೇರಲು ತಿರ್ಮಾನಿಸಲಾಯಿತು. ಇನ್ನೂ ಹಲವಾರು ವಿಷಯಗಳು ಚರ್ಚೆಗೆ ಬಂದು ಪ್ರತಿವರ್ಷ ಪುತ್ತರಿ ಕಳೆದು ಎರಡು ದಿವಸದಲ್ಲಿ ಕೈಮುಡಿಕೆ ಕೋಲ್ ಮಂದ್ ನಡೆಸುವ ಹಾಗೆ ಹಬ್ಬವನ್ನು ಆಚರಿಸುವಂತೆ ಅಂದು ಬೆಳಿಗ್ಗೆ 10.30ರಿಂದ ಸಂಜೆಯವರೆಗೆ ವಿವಿಧ ಪೈಪೋಟಿಗಳನ್ನು ಆಯೋಜಿಸಲು ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಏರ್ಪಾಡು ಮಾಡಲುಸಭೆ  ತಿರ್ಮಾನಿಸಲಾಯಿತು. ಪೈಪೋಟಿ ಜಿಲ್ಲಾ ಮಟ್ಟದಲ್ಲಿ ಕೂಡಿದ್ದು ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದಾಗಿದ್ದು, ಸಾರ್ವಜನಿಕ ವಿಭಾಗದಲ್ಲಿ ವಿವಿಧ ಊರು ನಾಡಿನ ಸಂಘ ಸಂಸ್ಥೆ ಕ್ಲಬ್ ತಂಡಗಳು ಅಥವಾ ವಿವಿಧ ಕೊಡವ ಸಮಾಜ ತಂಡಗಳು ಭಾಗವಹಿಸಬಹುದಾಗಿದೆ. 

ಈ ಸಂದರ್ಭ ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಕುತ್ತ್'ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿ ನಾಡ್ ತಕ್ಕರಾದ ಮಳವಂಡ ಬೋಸು ದೇವಯ್ಯ ಸೇರಿದಂತೆ ಮೂರು ನಾಡಿನ ಗೌರವ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ, ಊರು ತಕ್ಕರು ಹಾಗೂ ನಾಡಿನವರಾದ ಚಮ್ಮಟೀರ ಸುಗುಣ ಮುತ್ತಣ್ಣ, ಅಚ್ಚಿಯಂಡ ಬೋಸು, ತೀತಮಾಡ ಉತ್ತಪ್ಪ, ತೀತಮಾಡ ವಾಸು ಗಣಪತಿ, ಚಮ್ಮಟೀರ ಪ್ರವೀಣ್ ಉತ್ತಪ್ಪ, ಮೇಚಂಡ ಹ್ಯಾರಿ ಅಚ್ಚಪ್ಪ, ತೀತಿಮಾಡ ಗಾಂದಿ, ಬಲ್ಲಣಮಾಡ ಲಿತಿನ್, ಚೇರಂಡ ಮೋಟಯ್ಯ, ಬಲ್ಲಣಮಾಡ ರಾಜ್ ತಿಮ್ಮಯ್ಯ, ನಾಮೇರ ಬೋಸು, ಕಡೇಮಾಡ ಶರತ್, ಚೊಟ್ಟೆಪಂಡ ಶರತ್ ಕಡೇಮಾಡ ರಿಜು, ಬಾನಂಡ ಸಿರಿ, ಎ.ಜಿ ವಿವೇಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.