ಮಡಿಕೇರಿ ಜ.24: ಕರ್ನಾಟಕ ರಾಜ್ಯವು ಭಾರತದಲ್ಲಿಯೇ ಸಂಬಾರ ಬೆಳೆಗಳಿಗೆ ಅತ್ಯುತ್ತಮ ಮಾರುಕಟ್ಟೆಯಾಗಿದ್ದು, ಸಾಂಬಾರ ಬೆಳೆಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ 6 ನೇ ಸ್ಥಾನ ಪಡೆದಿದೆ ಎಂದು ಭಾರತೀಯ ಸಾಂಬಾರ ಮಂಡಳಿಯ ಉಪ ನಿರ್ದೇಶಕರಾದ ಡಾ.ಜಾನ್ಸಿ ಮಣಿತೋಟಂ ಅವರು ಹೇಳಿದ್ದಾರೆ.
ನಗರದ ಹೋಟೆಲ್ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಂಬಾರ ಮಂಡಳಿಯಿಂದ ಆಯೋಜಿತ ಸಾಂಬಾರ ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಂಬಾರ ಮಂಡಳಿಯು ಸಾಂಬಾರ ಪದಾರ್ಥಗಳ ರಫ್ತಿಗೆ ಆದ್ಯತೆ ನೀಡಿದ್ದು, ಮಾರಾಟಗಾರರ ಮತ್ತು ಖರೀದಿದಾರರ ನಡುವೆ ಸಮನ್ವಯತೆ ಸಾಧಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ಕೊಡಗು ಕಾಫಿ ಸೊಸೈಟಿಯ ಅಧ್ಯಕ್ಷರಾದ ಎಂ.ಬಿ.ದೇವಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಏಲಕ್ಕಿ ಬಿಟ್ಟು ಬೇರೆ ಬೆಳೆಗಳನ್ನು ಚೆನ್ನಾಗಿ ಬೆಳೆಯಲಾಗುತ್ತದೆ. ಆದರೆ ಜಿಲ್ಲೆಯ ಗಡಿಭಾಗವಾದ ಕರಿಕೆಯಲ್ಲಿ ಸ್ವಲ್ಪಮಟ್ಟಿಗೆ ಏಲಕ್ಕಿಯನ್ನು ಬೆಳೆಯಲಾಗುತ್ತದೆ. ಏಲಕ್ಕಿ ಬೆಳೆಗೆ ಕಟ್ಟೆ ರೋಗದಿಂದಾಗಿ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ರೋಗಕ್ಕೆ ಔಷಧಿಯನ್ನು ಕಂಡುಹಿಡಿದು ರೈತರಿಗೆ ಏಲಕ್ಕಿ ಬೆಳೆಯಲು ಪ್ರೇರೇಪಿಸಬೇಕಿದೆ ಎಂದು ಅವರು ಹೇಳಿದರು.
ರೈತರಿಗೆ ಸಾಂಬಾರ ಪದಾರ್ಥಗಳನ್ನು ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ. ಸಾಂಬಾರ ಮಂಡಳಿ ಈ ದಿಸೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶಗಳಿದ್ದು, ರೈತರಿಗೆ ಒಳ್ಳೆಯ ಮಾರುಕಟ್ಟೆ ಸಿಗಬೇಕು ಆಗ ಮಾತ್ರ ರೈತರು ಬೆಳೆದ ಬೆಳೆಗೆ ಉತ್ತಮ ಲಾಭ ದೊರೆತಂತಾಗುತ್ತದೆ ಅವರು ಹೇಳಿದರು.
ಜಿಲ್ಲೆಯಲ್ಲಿ ಸಾಂಬಾರ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಾಳು ಮೆಣಸು, ಏಲಕ್ಕಿ, ಶುಂಠಿ ಬೆಳೆಗಳ ಜೊತೆಗೆ ಕಾಫಿ, ಕಿತ್ತಳೆ ಹೀಗೆ ಹಲವು ಬೆಳೆ ಬೆಳೆಯಲಾಗುತ್ತದೆ. ಸಾಂಬಾರ ಮಂಡಳಿ, ರೈತರಿಗೆ ಹಾಗೂ ಮಾರಾಟಗಾರರಿಗೆ ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಹೇಳಿದರು
ರಾಜ್ಯದ ವಿವಿಧೆಡೆಗಳಿಂದ 150 ಕ್ಕೂ ಅಧಿಕ ಖರೀದಿದಾರರು ಮತ್ತು ಮಾರಾಟಗಾರರು 1 ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸಾಂಬಾರ ಪದಾರ್ಥಗಳ ಭವಿಷ್ಯದ ಕುರಿತು ಚರ್ಚಿಸಿದರು.
ಸಾಂಬಾರ ಮಂಡಳಿಯ ಸದಸ್ಯರಾದ ಕೆ.ಎಸ್.ಸತ್ಯನಾರಾಯಣ್, ಹುಬ್ಬಳಿಯ ಕೆಎಸ್‍ಎಸ್‍ಡಿಬಿ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಆರ್.ಗಿರೀಶ್, ಬಸಾನಿ ಆಗ್ರೋ ಇನ್ನೋವೇಷನ್ ಪ್ರೈ.ಲಿ.ರಫ್ತುದಾರರಾದ ಡಾ.ಸ್ವರೂಪ ರೆಡ್ಡಿ, ಮಡಿಕೇರಿ ಸಾಂಬಾರ ಮಂಡಳಿಯ ಸಹಾಯಕ ನಿರ್ದೇಶಕರಾದ ಬಿಜು ಎಸ್.ಎಸ್., ಸಂಬಾರ ಮಂಡಳಿಯ ಹಿರಿಯ ಕ್ಷೇತ್ರ ಅಧಿಕಾರಿ ಎಸ್.ಕುಮಾರ, ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network