Header Ads Widget

Responsive Advertisement

"ಕೊಡವ ಭಾಷಾ ಸಾಹಿತ್ಯ"ದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.?!!

"ಕೊಡವ ಭಾಷಾ ಸಾಹಿತ್ಯ"ದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.?!!

"ಗೋಣಿಕೊಪ್ಪದಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವೀಚಾರಗೋಷ್ಠಿಯ ಉಪನ್ಯಾಸ"

ವಿಷಯ: ಕೊಡವ ಭಾಷಾ ಸಾಹಿತ್ಯ 

ಮೂಲ ದ್ರಾವಿಡ ಭಾಷೆಯ ಬೇರಿನಿಂದ ಕವಲೊಡೆದು ಬೆಳೆದು ಬಂದ ಕೊಡವ ಭಾಷೆ, ಇಂದು ತನ್ನದೆಯಾದ ಭಾಷಾ ಶ್ರೀಮಂತಿಕೆಯನ್ನು ಹೊಂದಿದೆ. ತುಳು ಹಾಗೂ ಕೊಡವ ಭಾಷೆಗಳು ಮೂಲ ದ್ರಾವಿಡ ಗುಂಪಿನ ಭಾಷೆಯಾಗಿಯೇ ಬೆಳೆದು ಬಂದರೂ ಯಾವುದೇ ರೀತಿಯಲ್ಲಿ ಭಾಷೆಯ ಅನುಕರಣೆಗೆ ಇತರ ಭಾಷೆಯನ್ನು ಅವಲಂಬಿಸದೆ, ತನ್ನದೇ ಆದ ಶಬ್ಧ ನಿಷ್ಪತ್ತಿಯನ್ನು ಹೊಂದಿ ಎಷ್ಟೋ ಶತಮಾನಗಳಿಂದ ತನ್ನದೆಯಾದ ಶ್ರೀಮಂತಿಕೆಯಲ್ಲಿ ಬೆಳೆದು ಬಂದಿದೆ ಎಂದರೆ ತಪ್ಪಲ್ಲ. ಕೊಡವ ಭಾಷೆಗೂ ಕೂಡ ಕನ್ನಡ ಭಾಷೆಯಷ್ಟೆ ಇತಿಹಾಸವಿದೆ. ಅದು ಗ್ರಂಥ ರೂಪದಲ್ಲಿ ನಾವು ಕಾಣದೇ ಹೋದರೂ ಜಾನಪದ ಸಾಹಿತ್ಯದ ಪ್ರಕಾರದಲ್ಲಿ ಭಾಷೆಯ ಮೂಲ ಸೊಗಡನ್ನು ತಿಳಿಯಬಹುದು. ಕೊಡವ ಭಾಷೆ, ಕೊಡವರ ಸಂಸ್ಕೃತಿ, ಆಚಾರ- ವಿಚಾರ ಎಲ್ಲವೂ ಜನಪದೀಯವೇ. 

ಇಂದು ಕನ್ನಡ ಭಾಷೆ- ಅತ್ಯಂತ ಪ್ರಬುದ್ಧ ಭಾಷೆಯಾಗಿ ಬೆಳೆದುನಿಂತಿದೆ. ಕನ್ನಡದ ಶಾಸನ, ಲಿಪಿಯ ದಾಖಲೆಗಳು ನಮಗೆ ಕ್ರಿ. ಶ. 450 ರಲ್ಲಿ ಸಿಕ್ಕಿದ್ದರು ಕೂಡ, ಜನಪದ ಸಾಹಿತ್ಯ ಬೆಳಕಿಗೆ ಬಂದದ್ದು ಮಾತ್ರ ಕೊಡವ ಭಾಷೆಯ ಮೂಲಕ ಎನ್ನುವುದು ಗಮನಾರ್ಹ. ಅದೂ ಒಬ್ಬ ಕೊಡವನಿಂದ ಎನ್ನುವುದನ್ನು ಅತ್ಯಂತ ಹೆಮ್ಮೆಯಿಂದ ಹೇಳುವುದಕ್ಕೆ ನಾನು ಇಷ್ಟ ಪಡುತ್ತೇನೆ. ತ್ರಿಭಾಷಾ ಸಾಹಿತಿ, ಕವಿ, ಸಂಶೋಧಕರು ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದ ನಡಿಕೇರಿಯಂಡ ಚಿಣ್ಣಪ್ಪನವರು ಜಾನಪದ ಸಾಹಿತ್ಯಕ್ಕೆ "ಪಟ್ಟೋಲೆ ಪಳಮೆ“ ಎಂಬ ಅಮೋಘ ಜನಪದ ಸಾಹಿತ್ಯದ  ಕೊಡುಗೆ ನೀಡಿ,  ಕೊಡಗಿನ ಮೇರು ಸಂಸ್ಕೃತಿಯ ಪರಿಚಯವನ್ನು ನಾಡಿನಾದ್ಯಂತ ಪಸರಿಸಿದ್ದಾರೆ. ಕೊಡವ ಭಾಷಾ ಸಾಹಿತ್ಯಕ್ಕೆ ಶತಶತಮಾನಗಳ ಇತಿಹಾಸವಿದ್ದು ಕನ್ನಡ ಸಾಹಿತ್ಯದ ಜೊತೆ ಜೊತೆಯಲ್ಲಿಯೇ ಕೊಡವ  ಭಾಷಾ ಸಾಹಿತ್ಯ ಕೂಡ ಬೆಳೆದು ಬಂದಿದೆ ಎನ್ನುವುದಕ್ಕಿಂತ ದಕ್ಷಿಣ ಭಾರತದ ಮೊಟ್ಟ ಮೊದಲ ಸಂಗ್ರಹ ಜಾನಪದ ಕೃತಿ ಅಥವಾ ಗ್ರಂಥ "ಪಟ್ಟೊಳೆ ಪಳಮೆ" ಎನ್ನುವುದು ಕೊಡಗಿನಲ್ಲಿ ಹೆಮ್ಮೆ ಕೂಡ. "ಪಟ್ಟೊಳೆ ಪಳಮೆ" ಕೃತಿ ಕನ್ನಡದಲ್ಲಿ ಮುದ್ರಣವಾಗಿದ್ದರೂ ಕೂಡ ಇದರೊಳಗೆ ಬಹುತೇಕ ಉಲ್ಲೇಖವಾಗಿರುವುದು ಕೊಡವ ಜಾನಪದೀಯ ಹಾಡುಗಳು ಎಂದರೆ ಕೊಡವ ಭಾಷಾ ಸಾಹಿತ್ಯಕ್ಕೆ ಇತಿಹಾಸ ಏಷ್ಟಿರಬಹುದೆಂದು ಊಹಿಸಲು ಅಸಾಧ್ಯ. ಪಟ್ಟೊಳೆ ಪಳಮೆಗೂ ಮುಂಚೆ ಕೊಡವ ಸಾಹಿತ್ಯ ಲೋಕ ಬಹಳಷ್ಟು ಬೆಳೆದಿದೆಯಾದರೂ ಪುಸ್ತಕ ರೂಪದಲ್ಲಿ ಮುದ್ರಣವಾಗದೆ, ಜಾನಪದೀಯ ಹಾಡುಗಳ ರೂಪದಲ್ಲಿ ಅಥವಾ ಒಗಟಿನ ರೂಪದಲ್ಲಿ ಹೆಚ್ಚಾಗಿ ಮನೆ ಮಾತಾಗಿತ್ತು ಎಂಬುದಕ್ಕೆ ಪಟ್ಟೊಳೆ ಪಳಮೆಯಲ್ಲಿ ಉಲ್ಲೇಖವಾಗಿರುವ ಹಾಗೂ ಉಲ್ಲೇಖವಾಗದೆ ಇರುವ ಹಲವಾರು ಮೌಖಿಕ ಸಾಹಿತ್ಯಗಳೇ ಸಾಕ್ಷಿ. ಉದಾಹರಣೆಗೆ ಬಾಳೋಪಾಟ್, ಚಾವು ಪಾಟ್, ಮಾದಪಾಟ್, ಪೊಲ್ಚಿ ಪಾಟ್ ಸೇರಿದಂತೆ ಕೊಡವರ ಮದುವೆಗಳಲ್ಲಿ ಇಂದಿಗೂ ಕಾಣ ಸಿಗುವ ಸಂಬಂಧ ಅಡ್ಕುವೋ ಪದ್ದತಿ ಸೇರಿದಂತೆ ಗುರುಕಾರೋಣರ ನೆಲೆ ಹಾಗೂ ಊರಿನ ದೇವಸ್ಥಾನಗಳಲ್ಲಿ ದೇವರಿಗೆ ಒಪ್ಪಿಸುವ ಪರಿ, ಹೀಗೆ ನಾನಾ ರೀತಿಯಲ್ಲಿ ಸಾಹಿತ್ಯ ಕೃಷಿಯನ್ನು ಕೂಡಾ ನಾವು ಇಂದು ಕೊಡವ ಭಾಷಾ ಸಾಹಿತ್ಯದಲ್ಲಿ ಕಾಣಬಹುದು. 

16ನೇ ಶತಮಾನದ ಪೂರ್ವದಲ್ಲಿಯೇ ಕೊಡವ ಭಾಷೆಯು ಭಾಷಾ ವಿಜ್ಞಾನಿಗಳ ಆಸಕ್ತಿಯನ್ನು ತನ್ನತ್ತಾ ಸೆಳೆದುಕೊಂಡಿತು. ಆರಂಭದಲ್ಲಿ ಕೆಲವರು ಕೊಡವ ಭಾಷೆಯನ್ನು ಕನ್ನಡ ಭಾಷೆಯ ಉಪಭಾಷೆ ಎಂದರು, ಇನ್ನೂ ಕೆಲವರು ಕೊಡವ ಭಾಷೆಯೊಂದು ಸ್ವತಂತ್ರ ಭಾಷೆ ಎಂದು ಕರೆದರು. 1816ರಲ್ಲಿ ಲೇಖಕ ಫ್ರಾನ್ಸಿಸ್ ಎಲ್ಲಿಸ್ ಎಂಬುವವರು ಕೊಡವ ಭಾಷೆಯನ್ನು ಕೊಡಗು ಎಂಬ ಜಿಲ್ಲೆಯಲ್ಲಿ ಆಡುವ ಪ್ರಾದೇಶಿಕ ಭಾಷೆ ಎಂದರು. 1855ರಲ್ಲಿ ಡಾ. ಹರ್ಮನ್ ಮೊಗ್ಲಿಂಗ್ ಎಂಬುವವರು ಕೊಡವ ಭಾಷೆಯನ್ನು ತಮಿಳು ಹಾಗೂ ಮಲೆಯಾಳಂನೊಂದಿಗೆ ನಿಕಟ ಸಂಬಂಧವಿರುವ ಭಾಷೆ ಎಂದು ಕರೆದರು. ಇದಕ್ಕೆ ಪೂರಕ ಎಂಬಂತೆ 1926ರಲ್ಲಿ ಪ್ರೊ. ರಾಮಸ್ವಾಮಿ ಅಯ್ಯರ್ ಹಾಗೂ ಡಾ. ಪಿ.ಎಸ್ ಸುಬ್ರಹ್ಮಣ್ಯಂ ಅವರು ಕೂಡ ಕೊಡವ ಭಾಷೆಗೆ ತಮಿಳು ಹಾಗೂ ಮಲೆಯಾಳಂನೊಂದಿಗೆ ಸಾಮ್ಯತೆ ಇದೆ ಎಂದರು. ಇನ್ನು ಖ್ಯಾತ ಇತಿಹಾಸಕಾರ ಡಾ. ಕಾಲ್ಡ್'ವೆಲ್ ಅವರು 1956ರಲ್ಲಿ ತಾವು ರಚಿಸಿದ "ಎ ಕಂಪಾರಿಟೀವ್ ಗ್ರಾಮರ್ ಆಫ್ ದಿ ಡ್ರಾವಿಡಿಯನ್ ಆರ್ ಸೌತ್ ಇಂಡಿಯನ್ ಲ್ಯಾಂಗ್ವೇಜಿಸ್" ಎಂಬ ಕೃತಿಯಲ್ಲಿ ಕೊಡವ ಭಾಷೆಯು ಹಳೆಗನ್ನಡ ಹಾಗೂ ತುಳು ಭಾಷೆಯ ಸಾಲಿನಲ್ಲಿ ನಿಲ್ಲುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಒಂದು ಮೂಲದ ಪ್ರಕಾರ ಕ್ರಿ.ಪೂ 1000ದಿಂದಲೇ ಕೊಡವ ಭಾಷೆ ಎನ್ನುವುದು ಪ್ರತ್ಯೇಕ ಭಾಷಾ ಶ್ರೀಮಂತಿಕೆಯನ್ನು ಹೊಂದಿತ್ತು ಎಂಬುದನ್ನು ಹಲವಾರು ಅಧ್ಯಯನಗಳು ಸಾಬೀತು ಪಡಿಸಿದೆ. ಭಾಷಾ ವಿಜ್ಞಾನಿಗಳಾದ ಪ್ರೋ ಎಂ.ಬಿ ಎಮಿನೋ  ಹಾಗೂ ಪ್ರೊ. ಪಿ.ಎಸ್ ಸುಬ್ರಹ್ಮಣ್ಯಂ ಪ್ರಕಾರ ಕೊಡವ ಭಾಷೆಯು ಸ್ವತಂತ್ರ  ದ್ರಾವಿಡ ಭಾಷೆಯಾಗಿದೆ. ಇದು ಮೂಲ ದ್ರಾವಿಡದಿಂದ ಕವಲೊಡೆದ ಭಾಷೆಯಾಗಿದ್ದು ಕೊಡವ ಭಾಷೆಯು ದಕ್ಷಿಣ ಮೂಲ ದ್ರಾವಿಡ ಗುಂಪಿಗೆ ಸೇರುತ್ತದೆ ಎನ್ನುತ್ತಾರೆ ಅವರು. ಡಾ. ಆರ್ ಬಾಲಕೃಷ್ಣನ್ ಅವರು ಕೊಡವ ಭಾಷೆಯ ವ್ಯಾಕರಣಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ 1977ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾದ  "ಎ ಗ್ರಾಮರ್ ಆಫ್ ಕೊಡಗು" ಎಂಬ ಮಹಾಪ್ರಬಂಧದಲ್ಲಿ ಕೊಡವ ಭಾಷೆಯು ಕನ್ನಡಕ್ಕಿಂತ ತಮಿಳು ಮತ್ತು ಮಲೆಯಾಳಂ ಭಾಷೆಗೆ ಹತ್ತಿರವಾಗಿದೆ, ಇದರಲ್ಲಿ ಹಲವಾರು ಮೂಲ ದ್ರಾವಿಡದ ಅಂಶಗಳನ್ನು ಹಾಗೆಯೇ ಉಳಿಸಿಕೊಂಡಿದೆ ಮಾತ್ರವಲ್ಲ 17ನೇ ಶತಮಾನದವರೆಗೂ ಕೊಡವ ಭಾಷೆಯು ಕೊಡಗಿನ ಪ್ರಮುಖ ಭಾಷೆಯಾಗಿತ್ತು ಎಂದು ಅವರು ತಮ್ಮ ಮಹಾಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.

ಇದೆಲ್ಲಾದಕ್ಕೂ ಪುಷ್ಟಿ ನೀಡುವಂತೆ ತಮಿಳು ಭಾಷೆಯ ಬಹಳಷ್ಟು ಪದಗಳಿಗೂ ಹಾಗೂ ಕೊಡವ ಭಾಷೆಯ ಪದಗಳಿಗೂ ಬಹಳಷ್ಟು ಸಾಮ್ಯತೆ ಇದೆ, ಕೊಡವ ಭಾಷೆ ಕೂಡ ತಮಿಳು ಭಾಷೆಯಷ್ಟೇ ಪ್ರಾಚೀನತೆಯನ್ನು ಹೊಂದಿದೆ ಎನ್ನುತ್ತಾರೆ ತಮಿಳಿನ ಖ್ಯಾತ ಕವಿ ತಿರುವಳ್ಳುವರ್ ಅವರ ಪ್ರಾಚೀನ ಕೃತಿಗಳಲ್ಲಿ ಒಂದಾದ ತಿರುಕ್ಕುರಳ್ ಕೃತಿಯನ್ನು ಕೊಡವ ಭಾಷೆಗೆ ಭಾಷಾಂತರ ಮಾಡಿರುವ ಸಾಹಿತಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯನವರು. ಇನ್ನು ಕೊಡವ ಭಾಷೆಯ ತಿರುಳನ್ನು ಒಂದಷ್ಟು ಆಳವಾಗಿ ಹುಡುಕುತ್ತಾ ಹೋದರೆ ನಮಗೆ ಹಲವಾರು ವಿಷ್ಮಯಗಳು ಬಾಯಿ ತೆರೆದುಕೊಳ್ಳುತ್ತವೆ. ಕ್ರಿ. ಶ. 7ನೇಯ ಶತಮಾನದಲ್ಲಿ ಲಭ್ಯವಾದ ಮೊದಲ ಕನ್ನಡದ ಗ್ರಂಥ ಕವಿರಾಜಮಾರ್ಗದಲ್ಲಿ ಕೊಡಗು – ಕಾವೇರಿ ನಾಡು ಎಂಬುದು ಅಸ್ಥಿತ್ವದಲ್ಲಿ ಇತ್ತು ಎಂಬುದು ಉಲ್ಲೇಖವಿದೆ. ಹಾಗಾದರೆ ಕೊಡವ ಭಾಷೆ ಕೂಡ ಅಸ್ಥಿತ್ವದಲ್ಲಿ ಇರಲೇಬೇಕಲ್ಲವೇ.?!!

ಕೊಡವ ಭಾಷೆಗೆ 1887ರಲ್ಲಿಯೇ ಡಾ. ಕೊರವಂಡ ಅಪ್ಪಯ್ಯನವರು ಕೊಡವ ಲಿಪಿಯನ್ನು ಕಂಡುಹಿಡಿದರಾದರೂ ಕನ್ನಡದ ಲಿಪಿಯೊಂದಿಗೆ ಗುರುತಿಸಿಕೊಂಡ ಕೊಡವ ಸಾಹಿತ್ಯ ಕೃಷಿ ತನ್ನ ಮೂಲ ಲಿಪಿಯನ್ನು ಬಳಸದೆ ಕನ್ನಡ ಲಿಪಿಯನ್ನೇ ಬಳಸಿಕೊಳ್ಳುವುದರ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ ಎಂದರೆ ತಪ್ಪಲ್ಲ. ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮದ ಕೊರವಂಡ ಅಪ್ಪಯ್ಯ ಇವರು ಮೈಸೂರು ಅರಮನೆಯ ವೈದ್ಯರು ಮತ್ತು ಜಿಲ್ಲಾ ಸರ್ಜನ್ ಆಗಿದ್ದರು. ಇವರು ಕೊಡವ ಸಾಹಿತ್ಯ ಮತ್ತು ಸಂಸ್ಕೃತಿಗೆ ತಮ್ಮದೇ ಆದ ರೀತಿಯಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. “ನೀರಿನ ಜಲರತ್ನಾಕರ”, “ಗೋರಕ್ಷಣೆ”. “ಕೊಡಗರ ಕುಲಾಚಾರಾದಿ ತತ್ತ್ವೋಜೀವಿನಿ”, “ಇಹಪರಗ್ರಂಥ”, “ಆಸ್ಥಿ ಪಂಜರ”, “ವ್ಯವಸಾಯ ಬೋದಿನಿ”, “ಭಗವದ್ಗೀತೆ”, ಹೀಗೆ ಇತ್ಯಾದಿ ಕೃತಿಗಳನ್ನು ರಚಿಸಿದ ಡಾ. ಕೊರವಂಡ ಅಪ್ಪಯ್ಯನವರು ಕೊಡವ ಭಾಷೆಯಲ್ಲಿ ಕೃತಿಯನ್ನು ರಚಿಸಲು ಪ್ರಯತ್ನ ಪಡಲಿಲ್ಲ, ಬದಲಾಗಿ ಕೊಡವ ಲಿಪಿಯನ್ನು ಕಂಡುಹಿಡಿಯಲು  ಪ್ರಯತ್ನಿಸಿದ್ದರು ಎಂದಾದರೆ ಅದಕ್ಕೂ ಹಿಂದೆ ಕೊಡವ ಲಿಪಿ ಚಾಲ್ತಿಯಲ್ಲಿತ್ತು ಎನ್ನುವುದು ಗಮನಾರ್ಹ ಸಂಗತಿ. ಇವರು 1902ರಲ್ಲಿ ಬರೆದ "ಕೊಡಗರ ಕುಲಾಚಾರದಿ ತತ್ತ್ವೋಜೀವಿನಿ" ಎಂಬ ಕನ್ನಡ ಕೃತಿಯನ್ನು  ಡಾ. ತೀತೀರ ರೇಖಾ ವಸಂತ್ ಅವರು ಕೊಡವ ಭಾಷೆಗೆ ಇತ್ತೀಚೆಗೆ ಭಾಷಾಂತರ ಮಾಡಿದ್ದರು. 

ಇನ್ನು  ಕ್ರಿ.ಶ 1174ರ ಪಾಲ್ಪರೆ ಶಾಸನದಲ್ಲಿ ಎಲ್ಲಾ ನಾಡ ಕೊಡಗರು ಎಂಬ ಉಲ್ಲೇಖವಿದೆಯಾದರೂ ಅಂದಿನಿಂದ ಇಂದಿನವರೆಗೂ ಕೊಡವ ಸಾಹಿತ್ಯದ ದಾಖಲೆಗಳ ಬಗ್ಗೆ ಹೆಚ್ಚಾಗಿ ಯಾರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. 1924ರ ಕಾಲಘಟ್ಟದಲ್ಲಿ ಪಟ್ಟೋಳೆ ಪಳಮೆ ಕೃತಿ ಮೊದಲಬಾರಿಗೆ ಪ್ರಕಟಗೊಳ್ಳುವುದಕ್ಕೂ ಹಿಂದೆ ಕೊಡವ ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಇತ್ತು ಎನ್ನುವುದಕ್ಕೆ ಪಟ್ಟೋಲೆ ಪಳಮೆಯಲ್ಲಿಯೇ ಉಲ್ಲೇಖವಾಗಿರುವ ಕೊಡವ ಜಾನಪದೀಯ ಸಾಹಿತ್ಯಗಳೇ ಸಾಕ್ಷಿ ಎಂಬುದನ್ನು ಮತ್ತೊಮ್ಮೆ ತಮಗೆ ತಿಳಿಯಬಯಸುತ್ತೇನೆ. 

ಇನ್ನೂ ಕೊಡಗಿನಲ್ಲಿ ಕೊಡವ ಸಾಹಿತ್ಯ ಕೃಷಿಗೆ ಮೊದಲು ಬಿತ್ತನೆ ಕೆಲಸ ಮಾಡಿದ ವ್ಯಕ್ತಿ ಯಾರು ಎಂದರೆ ಆ ಕೀರ್ತಿ ಸಲ್ಲುವುದು ಕೊಡವ ಭಾಷೆಯ ಆದಿಕವಿ, ಕೊಡಗಿನ ಕಾಳಿದಾಸ ಹಾಗೂ ಕೊಡಗಿನ ಶೇಕ್ಸ್'ಫೀಯರ್ ಎಂದು ಹೆಸರಾದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಎಂದರೆ ಅದು ಬಹಳ ಚಿಕ್ಕ ಮಾತು. ಕೊಡಗಿನಲ್ಲಿ ಸಾಹಿತ್ಯದ ಗಂಧಗಾಳಿಯೇ ಇಲ್ಲದೆ ಸಮಯದಲ್ಲಿ ಕೊಡವ ಸಾಹಿತ್ಯಕ್ಕೊಂದು ಹೊಸ ಆಯಾಮ ಕಲ್ಪಿಸಿ ಕೊಟ್ಟವರು ಹರದಾಸ ಅಪ್ಪಚ್ಚಕವಿ. ಮಡಿಕೇರಿ ತಾಲ್ಲೂಕಿನ ಕಿರುಂದಾಡು ಗ್ರಾಮದವರಾದ ಅಪ್ಪನೆರವಂಡ ಅಪ್ಪಚ್ಚಕವಿ ಮುಜರಾಯಿ ಇಲಾಖೆಯ ನೌಕರರಾಗಿದ್ದುಕೊಂಡೆ ಕೊಡವ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ವ್ಯಕ್ತಿ. ಇವರು ಬರೆದಿರುವ ಮೊದಲ ನಾಟಕ ಯಯಾತಿ ರಾಜ, ನಂತರದ ದಿನಗಳಲ್ಲಿ ಕಾವೇರಿ ನಾಟಕ, ಸುಬ್ರಹ್ಮಣ್ಯ ನಾಟಕ, ಹಾಗೂ ಸಾವಿತ್ರಿ ನಾಟಕಗಳನ್ನು ರಚಿಸಿದರು. ಈ ನಾಲ್ಕು ಪೌರಾಣಿಕ ಕೊಡವ ನಾಟಕಗಳು ಇಂದೀಗೂ ಜಗತ್ಪ್ರಸಿದ್ಧ ಎಂದರೆ ತಪ್ಪಲ್ಲ. ಇದರೊಂದಿಗೆ  ಸುಕನ್ಯಾ ಪರಿಣಯ ಹಾಗೂ ವಿರಾಟಪರ್ವ ಎಂಬ ಎರಡು ಕನ್ನಡ ನಾಟಕಗಳನ್ನು ಬರೆದಿರುತ್ತಾರೆ. ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪಾರುಪತ್ಯಗಾರರಾಗಿ ಕೂಡ ಕರ್ತವ್ಯ ನಿರ್ವಹಿಸಿದ ಇವರು ತಮ್ಮ ಕೆಲಸದ ಒತ್ತಡದ ನಡುವೆಯೂ ರಚಿಸಿರುವ ಒಂದೊಂದು ಸಾಹಿತ್ಯಗಳು ಕೂಡ ಇಂದಿಗೂ ಸಾರ್ವಕಾಲಿಕ ಮತ್ತು ಅಜರಾಮರವಾಗಿದೆ ಎನ್ನುವುದನ್ನು ನಾವು ಒಪ್ಪಲೇಬೇಕು. ಇಂದಿಗೂ ಯುವಜನಾಂಗ ನಿದ್ದೆ ಕೆಡಿಸಿದ "ನಿಪ್ಪುಲಳಪಳ ಬೊಳ್ಳವ್ವ ಬೊಳ್ಳೆ ಕಳ್ಳವ್ವ ಸಾಹಿತ್ಯ" ಯುವಜನಾಂಗದ ಆಕರ್ಷಣೆ ಎನ್ನಬಹುದು. ಇನ್ನು ಅಂಬಿಕೆ ಸುಖ ಮಾಡ್ ಈ ಜಗಕ್ ಎಂದು ತನಗೇನನ್ನೂ ಕೇಳದೆ ಈ ವಿಶ್ವಕ್ಕೆ ಒಳಿತನ್ನು ಬಯಸಿದ ಕವಿಯ ವಿಶಾಲ ಹೃದಯವನ್ನು ನಾವು ಇಂದಿಗೂ ನೆನಯಲೇಬೇಕಾಗಿದೆ. ಇವರ ಶ್ರೀಮಂತ ಸಾಹಿತ್ಯಗಳು ಒಂದೇ ಎರಡೇ ನಿಜಕ್ಕೂ ಇವರೊಬ್ಬರು ಕೊಡವ ಸಾಹಿತ್ಯ ಲೋಕದ ಬ್ರಹ್ಮ ಎಂದರೆ ತಪ್ಪಾಗಲಾರದು. ಆದರೆ ಇವರ ಬಹಳಷ್ಟು ಸಾಹಿತ್ಯಗಳು ಪುಸ್ತಕ ರೂಪದಲ್ಲಿ ಬೆಳಕಿಗೆ ಬಂದಿದ್ದು ಮಾತ್ರ ನಂತರದ ದಿನಗಳಲ್ಲಿ ಎನ್ನುವುದು ಗಮನಾರ್ಹ.

ಇನ್ನೂ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ಪದವಿ ಪಡೆದ ಮೊದಲ ಕೊಡವ ಯಾರು ಎಂದರೇ ಅದು ಡಾ. ಐ‌.ಮಾ ಮುತ್ತಣ್ಣನವರ ಹೆಸರು ಮೊದಲಿಗೆ ಕೇಳಿಬರುತ್ತದೆ, ಅಂದರೆ ಇವರ ಪೂರ್ಣ ಹೆಸರು ಐಚೆಟೀರ ಮಾದಪ್ಪ ಮುತ್ತಣ್ಣನವರು ಇವರು ಕೊಡವ, ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಿಡಿತವಿದ್ದ ಸಾಹಿತಿ. "ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ", ಷೇಕ್ಸ್'ಪಿಯರ್  ಕವಿಯ ಮರ್ಚೆಂಟ್ ಆಫ್ ವೆನಿಸ್ ನಾಟಕವನ್ನು ಕೊಡವ ಭಾಷೆಗೆ ಭಾಷಾಂತರ ಮಾಡಿ "ಕೊಡಗ್'ಡ ಕೋಮಟಿ" ಎಂದು ಹೆಸರಿಟ್ಟರು ಮಾತ್ರವಲ್ಲ, ಅಪ್ಪಚ್ಚಕವಿಯ ನಾಲ್ಕು ನಾಟಕಗಳನ್ನು ಕೊಡವ ಭಾಷೆಯಿಂದ ಕನ್ನಡ ಭಾಷೆಗೆ ಭಾಷಾಂತರ ಮಾಡಿ ಹತ್ತು ಹಲವಾರು ಕೃತಿಗಳನ್ನು ರಚಿಸಿರುವ ಐ.ಮಾ ಮುತ್ತಣ್ಣನವರು ಕೊಡವ, ಕನ್ನಡ, ಇಂಗ್ಲಿಷ್ ಸೇರಿದಂತೆ ಸುಮಾರು 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ ಮಾತ್ರವಲ್ಲ, ತಮ್ಮ ಸಾಹಿತ್ಯ ಕೃಷಿಯ ಜೊತೆಜೊತೆಗೆ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಒಂದಷ್ಟು ಸಾಹಿತ್ಯಗಳು ಪುಸ್ತಕ ರೂಪದಲ್ಲಿ ಇಂದು ನಮಗೆ ದೊರೆಯುತ್ತಿದೆ ಎಂದಾದರೆ ಅದಕ್ಕೆ ಮೂಲ ಕಾರಣಕರ್ತರು ಡಾ. ಐ.ಮಾ ಮುತ್ತಣ್ಣನವರು ಎಂದರೆ ತಪ್ಪಲ್ಲ. ತಮ್ಮ ಸ್ವಂತ ಹಣದಿಂದಲೇ ಅಚ್ಚಾಗದೆ ಉಳಿದುಹೋದ ಕವಿಯ ಹಲವಾರು ಪುಸ್ತಕಗಳನ್ನು ಹೊರತಂದಿರುವ ಮೇರು ವ್ಯಕ್ತಿತ್ವ ಇವರದು.

ಇನ್ನು ಕಾಕೆಮಾನಿ ಎಂಬ ನಾಮಾಂಕಿತರಾದ ಪತ್ರಕರ್ತ ಲೇಖಕ ಸಾಹಿತಿ ಬಾಚಮಾಡ ಡಿ ಸುಬ್ಬಯ್ಯ ಅಂದರೆ ಬಿ.ಡಿ ಸುಬ್ಬಯ್ಯ ಕನ್ನಡ ಭಾಷೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರು, ಇವರು ರಚಿಸಿರುವ ಹಲವಾರು ಬೇಟೆ ಸಾಹಿತ್ಯಗಳು ಇಂದೀಗೂ ಅಜರಾಮರವಾಗಿದೆ ಎನ್ನಬಹುದು, ಆದರೆ ಇವರು ಕೊಡವ ಭಾಷೆಯಲ್ಲಿ ಸಾಹಿತ್ಯ ರಚನೆ ತೀರಾ ಕಡಿಮೆ ಎನ್ನುವುದಕ್ಕಿಂತ ಕನ್ನಡಕ್ಕೆ ಹೆಚ್ಚು ಒತ್ತುಕೊಟ್ಟರು ಎನ್ನಬಹುದು. ಇನ್ನು ಇದೇ ಮನೆತದನ ಮತ್ತೋರ್ವ ಮೇರು ಸಾಹಿತಿ ಬಿ.ಡಿ ಗಣಪತಿ ಎಂದೇ ಚಿರಪರಿಚಿತರಾಗಿದ್ದ ಬಾಚಮಾಡ ಡಿ ಗಣಪತಿ ಕನ್ನಡದೊಂದಿಗೆ ಕೊಡವ ಭಾಷೆಗೂ ಹಲವಾರು ಕೊಡುಗೆಗಳನ್ನು ನೀಡಿದ್ದು "ಕೊಡಗಿನ ಕಥೆ", "ಕೊಡವರು ಮತ್ತು ಅವರ ಸಂಸ್ಕೃತಿ" ಸೇರಿದಂತೆ ಹಲವಾರು ಕೊಡವ ಹಾಗೂ ಕನ್ನಡ ಕೃತಿಗಳನ್ನು ರಚಿಸಿದ್ದು ಇದರೊಂದಿಗೆ 1973ರಲ್ಲಿ "ಪಾಪಿ ಪಣ" ಎಂಬ ಸಾಮಾಜಿಕ ನಾಟಕವನ್ನು ಕೂಡ  ಇವರು ರಚಿಸಿದ್ದಾರೆ. 

ಹೀಗೆ ಹೇಳುತ್ತಾ ಹೋದರೆ ಮಧ್ಯಮ ಸಾಹಿತ್ಯದ ಕಾಲಘಟ್ಟದಲ್ಲಿ ನಮಗೆ ಕಾಣಸಿಗುವ ಮೇರು ವ್ಯಕ್ತಿತ್ವದ ಸಾಹಿತಿ ಹಾಗೂ ಜಾನಪದ ತಜ್ಞ ಬಾಚರಣಿಯಂಡ ಪಿ ಅಪ್ಪಣ್ಣ ಹಾಗೂ ದಂಪತಿಗಳು ಹತ್ತು ಹಲವಾರು ಕೊಡವ ಸಾಹಿತ್ಯಗಳ ಹಾಗೂ ಕೃತಿಗಳ ರಚನೆ ಮಾತ್ರವಲ್ಲ, ಬಾಚರಣಿಯಂಡ ಅಪ್ಪಣ್ಣ ಅವರ ಹತ್ತಿರ ಕೊಡವ ಸಾಹಿತ್ಯದ ಹಾಗೂ ಸಂಸ್ಕೃತಿಯ ಭಂಡಾರವೇ ಅಡಕವಾಗಿದೆ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಜೀವಂತವಾಗಿರುವ ಹಾಗೂ ಅತ್ಯಂತ ಶ್ರೇಷ್ಠ ಕೊಡವ ಸಾಹಿತಿಗಳ ಸಾಲಿನಲ್ಲಿ  ನಮಗೆ ಮೊದಲಿಗರಾಗಿ ಕಾಣಲಿಕ್ಕೆ ಸಿಗುವವರೇ ಬಾಚರಣಿಯಂಡ ಪಿ ಅಪ್ಪಣ್ಣ ಮಾಸ್ಟರ್ ಎಂದರೆ ತಪ್ಪಲ್ಲ, ಇತ್ತಿಚಿನ ದಿನಗಳಲ್ಲಿ ಗೌರವ ಡಾಕ್ಟರೇಟ್ ಅಥವಾ ಕೊಡವ ಭಾಷಾ ಸಮ್ಮಾನ್ ಸೇರಿದಂತೆ ಉನ್ನತಮಟ್ಟದ ಪ್ರಶಸ್ತಿ ಸನ್ಮಾನಗಳು ಕೊಡವ ಸಾಹಿತ್ಯ ಲೋಕಕ್ಕೆ ದೊರೆಯುದಾದರೆ ಅದು ಅಪ್ಪಣ್ಣ ಅವರಿಗೆ ಸಲ್ಲಬೇಕು ಎಂದರೆ ಅದು ಹೊಗಳಿಕೆಯಾಗಲಾರದು. ಇನ್ನು ಕೊಡವ ಭಾಷೆಯ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಮಹನೀಯರ ಕೊಡುಗೆಗಳು ಅಪಾರವಾಗಿದ್ದು ಕೊಡವ ಭಾಷೆಯಲ್ಲಿ  ಭಾಷಾ ಸಮ್ಮಾನ್ ಪಡೆದ ದಿವಂಗತ ಮಂಡೀರ ಜಯ ಅಪ್ಪಣ್ಣ, ಕೊಡವ ಭಾಷೆಯಲ್ಲಿ ಶ್ರೀಹರಿಯ ದಶಾವತಾರ ಎಂಬ ಪ್ರಥಮ ಮಹಾಕಾವ್ಯ ರಚನೆ ಮಾಡಿದ ದಿವಂಗತ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ, ಮೊದಲು ಬಾರಿಗೆ ಕೊಡವ ಪ್ರವಾಸಿ ಕಥನವನ್ನು ಬರೆದಿರುವ ದಿವಂಗತ ಮುಲ್ಲೇಂಗಡ ಬೇಬಿ ಚೋಂದಮ್ಮ,    ಕೊಡವ ಭಾಷಾ ಸಾಹಿತ್ಯದ ಬೆಳವಣಿಗೆಗೆ ತಮ್ಮದೆಯಾದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಡಾ. ಉಳ್ಳಿಯಡ ಎಂ ಪೂವಯ್ಯ ಹಾಗೂ ಡಾಟಿ ಪೂವಯ್ಯ ದಂಪತಿಗಳು, ಅಜ್ಜಿನಿಕಂಡ ಮಹೇಶ್ ನಾಚಯ್ಯ ಹಾಗೂ ಪ್ರಮೀಳಾ ನಾಚಯ್ಯ ದಂಪತಿಗಳು, ವಿರಾಜಪೇಟೆಯಲ್ಲಿ ಹರದಾಸ ಅಪ್ಪಚ್ಚಕವಿ ಪ್ರತಿಮೆಯ ಮುಖ್ಯ ರೂವಾರಿ ಹಾಗೂ ಕೊಡವ ಭಾಷೆಯ ಬರಹಗಾರರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಕೊಡುಗೆಯನ್ನು ನೀಡಿ ಕೊಡವ ಭಾಷಾ ಸಾಹಿತ್ಯ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿರುವ ಪ್ರೊ. ಇಟ್ಟೀರ ಬಿದ್ದಪ್ಪ, ಪತ್ರಿಕೋದ್ಯಮದ ಜೊತೆಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ಹೊರತರುವ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ತನ್ನದೆಯಾದ ಚಾಪು ಮೂಡಿಸಿರುವ ಐತಿಚಂಡ ರಮೇಶ್ ಉತ್ತಪ್ಪ, ಕಳೆದ ಸಾಲಿನ ಸಮ್ಮೇಳನಾಧ್ಯಕ್ಷರಾಗಿ ಉತ್ತಮವಾಗಿ ಸಮ್ಮೇಳನ ನಡೆಸಿಕೊಟ್ಟ ಖ್ಯಾತ ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ, "ಜಗತ್ತಿಗೊಂದೇ ಕೊಡಗು" ಎಂಬ ಸಂಶೋಧನಾ ಕೃತಿಯನ್ನು ಹೊರತಂದಿರುವ ಕೋಟೆರ ಪಿ ಮುತ್ತಣ್ಣ,  "ಭುಗಿಲು ಗೊಂಚಲು" "ಭೈರವಿ" "ವಿಧಿವಿಲಾಸ" ಮೊದಲಾದ ಕೃತಿಗಳನ್ನು ರಚನೆ ಮಾಡಿರುವ  ಖ್ಯಾತ ಸಾಹಿತಿ ಕೂತಂಡ ಪಾರ್ವತಿ ಪೂವಯ್ಯ, "ಕಲಿಯಾಟಂಡ ಅಜ್ಜಪ್ಪ" "ಅಚ್ಚುನಾಯಕ" ಸೇರಿದಂತೆ ಹಲವಾರು ಕೊಡಗಿನ ಚಾರಿತ್ರಿಕ ಹಾಗೂ ಜನಪದ ಕೃತಿಗಳನ್ನು ಹೊರತಂದಿರುವ ಬಿದ್ದಂಡ ಸುಬ್ಬಯ್ಯ ಕುಶಾಲಪ್ಪ, "ಕೊಡವರ ಅರಾಬೇರಾ ಪುರಾಣ" ಸೇರಿದಂತೆ ಹಲವಾರು ಕೃತಿಗಳನ್ನು ಹೊರತಂದಿರುವ ಅಪಾಡಂಡ ಗಣಪತಿ, "ಕಾವೇರಿ ದಕ್ಷಿಣ ಗಂಗೆ"ಯನ್ನು ಬರೆದ ಪಿ ಎಂ ಚೆಂಗಪ್ಪ, "ದಕ್ಷಿಣ ಕಾಶಿ ಕಾವೇರಿ ಮಹಾತ್ಮೆ"ಯ ಲೇಖಕ ಬಾಚೇಟೀರ ಅಪ್ಪಯ್ಯ, "ಕೊಡವ ಅಂದೋಳತ ಪಾಟ್" ಸೇರಿದಂತೆ ಹಲವಾರು ಕೃತಿಗಳನ್ನು ಹೊರತಂದಿರುವ ಸಾಹಿತಿ ಪೇರಿಯಂಡ ಚೆಂಗಪ್ಪ, "ಕೊಡವ ಮಹಾಭಾರತ"ವನ್ನು ರಚನೆ ಮಾಡಿರುವ ಕಾಣತಂಡ ಎಸ್ ಮುತ್ತಪ್ಪ,  ಹತ್ತು ಹಲವಾರು ಕೃತಿಗಳನ್ನು ಹೊರತರುವ ಮೂಲಕ ಕೊಡವ ಭಾಷಾ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿಗಳಾದ ಬೆಂಜಾಂಡ ತಂಗಚ್ಚಿ ಕಾರ್ಯಪ್ಪ, ಚೇಂದ್ರಿಮಾಡ ಗ ಮುತ್ತಪ್ಪ, ಐನಂಡ ಧನು, ಮುಕ್ಕಾಟೀರ ನೀಲಮ್ಮ ಮುತ್ತಣ್ಣ, ತೇಲಪಂಡ ಎಂ ಕಾರ್ಯಪ್ಪ, ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ತಾತಂಡ ರಾಣಿ ಗಣೇಶ್ ಹೀಗೆ ಮಧ್ಯಮ ತಲೆಮಾರಿನ ಸಾಹಿತಿಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದು ಮುಗಿಯುವುದೇ ಇಲ್ಲ. 

ಇನ್ನು ನಂತರ ದಿನಗಳಲ್ಲಿ ಬರುತ್ತಿರುವ ನವ್ಯ ಸಾಹಿತ್ಯದಲ್ಲಿ ಕೊಡವ ಭಾಷೆಯ ಸಾಹಿತಿಗಳ ಪಟ್ಟಿ ಮಾಡಿದ್ದರೆ, ಒಬ್ಬರನ್ನು ಬಿಟ್ಟು ಮತ್ತೊಬ್ಬರನ್ನು ಪಟ್ಟಿ ಮಾಡಿದರು ಎಂಬ ಆರೋಪ ಹೊರುವುದಕ್ಕಿಂತ ಪಟ್ಟಿ ಮಾಡದೆ ಇರುವುದೇ ಸೂಕ್ತ ಎನ್ನಬಹುದು. ಕಾರಣ ಕಳೆದೆರಡು ದಶಕಗಳಿಂದ ಇಲ್ಲಿಯವರೆಗೆ ಬಹಳಷ್ಟು ಕವಿ, ಸಾಹಿತಿಗಳು ಕೊಡವ ಭಾಷೆಯನ್ನು ಶ್ರೀಮಂತಗೊಳಿಸಲು  ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರೆ ತಪ್ಪಲ್ಲ, ಇದರ ಜೊತೆ ಜೊತೆಗೆ ಇದೀಗ ಹಿಂದಿನ ಮೌಖಿಕ ಸಾಹಿತ್ಯದಂತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಬಳಗೆ ಕಟ್ಟಿಕೊಂಡು ಸಾಕಷ್ಟು ಮಂದಿ ಸಾಹಿತ್ಯ ಕೃಷಿಗಳನ್ನು ಮಾಡುತ್ತಿದ್ದಾರೆ. ಆದರೆ ಇದು ಕೂಡ ಮೌಖಿಕ ಸಾಹಿತ್ಯದಂತೆ ಯಾವುದೇ ದಾಖಲೆಗಳಲ್ಲಾಗಲಿ ಅಥವಾ ಪುಸ್ತಕ ರೂಪದಲ್ಲಾಗಲಿ ಹೊರಬಾರದೆ  ಈ ಪೀಳಿಗೆಗೆ ಮಾತ್ರ ಸೀಮಿತವಾಗಲಿದೆಯಾ ಎಂದು  ಅನಿಸದೆ ಇರಲಾರದು. ಹಾಗೇ ಇತ್ತೀಚಿನ ಸಾಹಿತಿಗಳಿಗೆ ಬರಹಗಾರರಿಗೊಂದು ಕಿವಿ ಮಾತು ದಯವಿಟ್ಟು ತಮ್ಮ ಕಥೆ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಮುಂದಿನ ಪೀಳಿಗೆಗೂ ಕಾಯ್ದಿರಿಸಿ ಹಾಗೂ ಕೊಡವ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ ಎಂದು. 

ಇವತ್ತು ಕೊಡವ ಭಾಷಾ ಸಾಹಿತ್ಯ ನಡೆದು ಬಂದಿರುವ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಿದ್ದರೆ ಕೊಡವ ಭಾಷಾ ಸಾಹಿತ್ಯಕ್ಕೆ ಕೇವಲ ಕೊಡವರ ಕೊಡುಗೆ ಮಾತ್ರ ಇರುವುದೇ ಎಂದು ಯೋಚಿಸಿದ್ದಾಗ ಇಲ್ಲಾ,  ಕೊಡವರೊಂದಿಗೆ ಕೊಡವೇತರರ ಸಹಕಾರ ಕೂಡ ಸಾಕಷ್ಟು ಇದ್ದು ಕೆಲವರು ಭಾಷಿಕರಲ್ಲದವರು ಕೂಡ ಕೊಡವ ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸಿದ್ದಾರೆ ಎಂದರೆ ತಪ್ಪಲ್ಲ. ಇಂದಿನ ಕಾಲಘಟ್ಟವನ್ನು ತೆಗೆದುಕೊಂಡರೆ ನಾಗೇಶ್ ಕಾಲೂರ್ ಇರಬಹುದು, ಶಶಿಪ್ರಿಯ ಕಾವ್ಯನಾಮದ ಮಿನ್ನಿಕರ ಮಹಮದ್ ಇರಬಹುದು ಅಥವಾ ಪತ್ರಕರ್ತ ಎಂ ಈ ಮಹಮದ್ ಹೀಗೆ ಹತ್ತುಹಲವು ಲೇಖಕರು, ಖ್ಯಾತ ಕವಿಗಳು ಸೇರಿದಂತೆ ಹಲವಾರು ಕೊಡವೇತರರು ಇದೀಗಲೂ ಕೂಡ ಕೊಡವ ಭಾಷಾ ಸಾಹಿತ್ಯದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಪಾರ ಕೊಡುಗೆಯನ್ನು ನೀಡಿ ಕೊಡವರ ಮನೆ ಮನಗಳಲ್ಲಿ ಚಾಪು ಮೂಡಿಸಿದ್ದಾರೆ. ಇವರೆಲ್ಲಾರ ಹೆಸರನ್ನು ಹೇಳುತ್ತಾ ಹೋದರೆ ಸಮಯದ ಅವಕಾಶ ಕೂಡ ಸಾಲದು. 

ಇನ್ನು ಕೊಡವ ಭಾಷಾ ಸಾಹಿತ್ಯದ ಬೆಳವಣಿಗೆಗೆ ಕೇವಲ ಪುಸ್ತಕಗಳು ಮಾತ್ರ ಕೊಡುಗೆಯೆ ಎಂದು ಹುಡುಕುತ್ತಾ ಹೋದರೆ ಇದರ ಜೊತೆ ಜೊತೆಗೆ ಕೊಡವ ನಾಟಕ, ಕೊಡವ ಸಿನೆಮಾ, ಕೊಡವ ಹಾಡುಗಳು ಹೀಗೆ ಹಲವಾರು ಕೊಂಡಿಗಳು ಕಾಣಸಿಗುತ್ತದೆ. ನಾಟಕ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ರಂಗಕರ್ಮಿ ಹಾಗೂ ಕೊಡವ ಭಾಷೆಯಲ್ಲಿ ಅದರಲ್ಲೂ ನಾಟಕ ಕ್ಷೇತ್ರದಲ್ಲಿ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದ ಅಡ್ಡಂಡ ಕಾರ್ಯಪ್ಪ ಹಲವಾರು ನಾಟಕಗಳನ್ನು ರಚನೆ ಮಾಡುವ ಮೂಲಕ ಕೊಡವ ಭಾಷಾ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ್ದಾರೆ, 1975ರ ಕಾಲಘಟ್ಟದಲ್ಲಿ ತನ್ನದೇಯಾದ ತಂಡವನ್ನು ಕಟ್ಟಿಕೊಂಡು ನಾಟಕದ ಮೂಲಕ ಜನಜಾಗೃತಿ ಹಾಗೂ ಮನರಂಜನೆ ನೀಡುತ್ತಿದ್ದ ದಿವಂಗತ ಮನೆಯಪಂಡ ಪ್ರಭು ನಿರ್ಮಾಣದ "ಕೊಂಬ್ ತಪ್ಪುನ ಕೋಡ"ಸೇರಿದಂತೆ ಇತರ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೊಡವ ಭಾಷೆಯ ಬೆಳವಣಿಗೆಗೆ ತಮ್ಮದೆಯಾದ ರೀತಿಯಲ್ಲಿ ಶ್ರಮಿಸಿದ್ದರು. ಹಲವಾರು ನಾಟಕಗಳನ್ನು ರಚಿಸಿರುವ ಬಿದ್ದಂಡ ಎಸ್ ಚಿಟ್ಟಿಯಪ್ಪನವರ ಕೊಡುಗೆ ಕೂಡ ಕೊಡವ ಭಾಷಾ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾಗಿದೆ. ಇನ್ನೂ ಕೊಡವರಲ್ಲದಿದ್ದರೂ ಕೂಡ ಕೊಡವ ಭಾಷೆಯೇ ತನ್ನ ಮಾತೃ ಭಾಷೆ ಎಂಬಷ್ಟರ ಮಟ್ಟಿಗೆ ಕೊಡವ ಭಾಷೆಯನ್ನು ಕೊಡವರಿಗಿಂತ ಸ್ಪುಟವಾಗಿ ಬಳಸುತ್ತಿದ್ದ ರಂಗ ಕಲಾವಿದ ಹಾಗೂ ನಾಟಕ ರಚನೆಕಾರ ಪೊನ್ನಂಪೇಟೆಯ ಶ್ರೀನಿವಾಸ್ ನಾಯ್ಡು ಇವರ ಕೊಡುಗೆ ಕೂಡ ಕೊಡವ ಭಾಷಾ ಸಾಹಿತ್ಯಕ್ಕೆ ಅಪಾರ ಎನ್ನಬಹುದು.

ಹೀಗೆ ಕೊಡವ ನಾಟಕ ರಚನೆಯಲ್ಲಿ ಕೂಡ ಹಲವಾರು ರಂಗಕರ್ಮಿಗಳು ತಮ್ಮನ್ನು ತೊಡಗಿಸಿಕೊಂಡಿದ್ದು ಸಾಹಿತ್ಯ ಕೃಷಿ ಮಾಡಿದ್ದಾರೆ.

ಇನ್ನು ಕೊಡವ ಸಿನಿಮಾ ಕ್ಷೇತ್ರ ಕೂಡ ಕೊಡವ ಭಾಷಾ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ ಎಂದರೆ ತಪ್ಪಲ್ಲ. 1972ರಲ್ಲಿ ತೆರೆಕಂಡ "ನಾಡ ಮಣ್ಣ್ ನಾಡ ಕೂಳ್" ನಿಂದ ಹಿಡಿದು ಇಲ್ಲಿಯತನಕ ಹಲವಾರು ಕೊಡವರು ಹಾಗೂ ಕೊಡವೇತರರು ಕೊಡವ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ್ದಾರೆ. ಆದರೆ 2009ರವರೆಗೂ ಕೇವಲ 7 ಕೊಡವ ಸಿನೆಮಾಗಳು ಮಾತ್ರ ತೆರೆದುಕಂಡವು. ಈ 7 ಸಿನೆಮಾಗಳನ್ನು ಕೂಡ ಕೊಡವೇತರರೇ ನಿರ್ಮಿಸಿ ನಿರ್ದೇಶಿಸಿದ್ದರು ಎನ್ನುವುದು ಗಮನಾರ್ಹ. ಆದರೆ 2010ರಲ್ಲಿ ಮುಲ್ಲೇಂಗಡ ಮಧೋಶ್ ಪೂವಯ್ಯ ನಿರ್ಮಾಣದಲ್ಲಿ ತೆರೆಕಂಡ "ಜಡಿಮಳೆ" ಕೊಡವ ಸಿನೆಮಾದಿಂದ ಹಿಡಿದು ಇಲ್ಲಿಯವರೆಗೆ ಹಲವಾರು ಕೊಡವ ನಿರ್ಮಾಪಕ ಹಾಗೂ ನಿರ್ದೇಶಕರು ಕೊಡವ ಸಿನೆಮಾ ಮಾಡಲು ಮುಂದೆ ಬಂದರು. ಆದರೆ ಕೊಡವರೊಬ್ಬರು ಕೊಡವ ಸಿನೆಮಾವನ್ನು ಮೊದಲು ನಿರ್ಮಿಸಿದರು ಎಂಬ ಹೆಗ್ಗಳಿಕೆ ಮುಲ್ಲೇಂಗಡ ಮಧೋಶ್ ಪೂವಯ್ಯನವರಿಗೆ ಸೇರುತ್ತದೆ, ಹಾಗೆ ಕೊಡವ ಸಿನೆಮಾದ ಸ್ವತಂತ್ರ ನಿರ್ದೇಶಕ ಕೂಡ ಇದೇ ಸಿನೆಮಾದಿಂದ ಬಾಚಮಾಡ ವಿಶು ಕರುಂಬಯ್ಯ ಗುರುತಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ  ಎಂಬಂತೆ ಜಡಿಮಳೆ ಕೊಡವ ಸಿನೆಮಾದ ಬಹುತೇಕ ತಂತ್ರಜ್ಞರು ಕೊಡವರಾಗಿ ಗುರುತಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಇದೀಗ ಕೊಡವ ಸಿನೆಮಾ ಲೋಕ ಹೆಮ್ಮರವಾಗಿ ಬೆಳೆಯುತ್ತಿದೆ. ವರ್ಷಕ್ಕೆ ಮೂರ್ನಾಲ್ಕು ಸಿನೆಮಾಗಳು ಬರುತ್ತಿವೆ ಎಂಬುದು ಗಮನಾರ್ಹ. ಕೊಡವ ಭಾಷಾ ಸಾಹಿತ್ಯಕ್ಕೆ ಕೊಡವ ಸಿನೆಮಾ ರಂಗ ಕೂಡ ತನ್ನದೇಯಾದ ಸೇವೆಯನ್ನು ಮಾಡುತ್ತಿದೆ ಎಂದರೆ ತಪ್ಪಲ್ಲ.

ಇನ್ನು ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರವನ್ನು ತೆಗೆದುಕೊಂಡರೆ ಒಂದು ಕಾಲಘಟ್ಟದಲ್ಲಿ ಮೈಸೂರು  ಅರಮನೆಯ ಸಂಗೀತಗಾರ ಎಂದು ಹೆಸರಾದ ಕೂರ್ಗ್ ಸ್ಟಾರ್ ಚಕ್ಕೇರ ಅಪ್ಪಯ್ಯ ಮಗ ಚಕ್ಕೇರ ತ್ಯಾಗರಾಜ್ ಅಪ್ಪಯ್ಯ ಕೂಡ ಕೊಡವ ಭಾಷೆಯಲ್ಲಿ ಹಲವಾರು ಸಾಹಿತ್ಯ ಕೃಷಿ ಮಾಡುವುದರ ಜೊತೆಗೆ ತಮ್ಮ ಮಧುರ ಕಂಠದಿಂದ ಕೂಡ ಜನರ ಮನೆ ಮಾತಾಗಿದ್ದಾರೆ. ಹೀಗೆ ಕೊಡವ ಸಾಹಿತ್ಯದ ಕೊಂಡಿಗಳನ್ನು ಹುಡುಕುತ್ತಾ ಹೊರಟಾಗ ತೊ.ನಾ.ಚಂ ಎಂದು ಹೆಸರುವಾಸಿಯಾಗಿದ್ದ ತೋಲಂಡ ನಾಣಯ್ಯ ಚೆಂಗಪ್ಪನವರ ಸಾಹಿತ್ಯ ಹಾಗೂ ಮುಲ್ಲೇರ ಜಿಮ್ಮಿಯವರ ಸಾಹಿತ್ಯ ಸೇರಿದಂತೆ ಕೆಲವೇ ಕೆಲವು ಸಾಹಿತಿಗಳ ಸಾಹಿತ್ಯ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಕೊಡವ ಭಾಷೆಗೆ ಅಂದಿನಿಂದ ಇಂದಿನವರೆಗೂ ಹಲವಾರು ಕವಿ ಸಾಹಿತಿಗಳು ದುಡಿದಿದ್ದಾರೆ, ಕೊಡವ ಹಾಡುಗಳನ್ನು ಕೂಡ ರಚನೆ ಮಾಡಿದ್ದಾರೆ, ಕೊಡವ ಸಿನೆಮಾಗಳಿಗೂ ಕೂಡ ಬಹಳಷ್ಟು ಮಂದಿ ಸಾಹಿತ್ಯವನ್ನು ಬರೆಯುವ ಮೂಲಕ ಕೊಡವ ಸಾಹಿತ್ಯ ಕ್ಷೇತ್ರವನ್ನು ತನ್ನತ್ತಾ ತಿರುಗಿ ನೋಡುವಂತೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೂಡ ಹಲವಾರು ಗಟ್ಟಿ ಸಾಹಿತ್ಯಗಳು ರಚನೆಯಾಗುತ್ತಿದ್ದು ಕೆಲವೇ ಕೆಲವರು ಮಾತ್ರ ಅವರು ಮಾಡುತ್ತಾರೆ ನಾನೇಕೆ ಮಾಡಬಾರದೆಂದು ಹಠಕ್ಕೆ ಬಿದ್ದು ಸಾಹಿತ್ಯ ಕ್ಷೇತ್ರವನ್ನು ಹದಗೆಡಿಸುತ್ತಿದ್ದಾರೆ ಎನ್ನಬಹುದು.

ಹೀಗೆ ಹೇಳುತ್ತಾ ಹೋದರೆ ಹಾಗೂ ಕೊಡವ ಭಾಷಾ ಸಾಹಿತ್ಯದ ಮೂಲ ಬೇರನ್ನು ಹುಡುಕುತ್ತಾ ಹೋದರೆ  ಕೊಡವ ಭಾಷಾ ಸಾಹಿತ್ಯದ ಬೆಳವಣಿಗೆಗೆ ಕೊಡವರು, ಕೊಡವ ಭಾಷಿಕರು, ಕೊಡವೇತರರು ಸೇರಿದಂತೆ ಎಲ್ಲಾ ಜಾತಿ ಜನಾಂಗದ ಅಳಿಲು ಸೇವೆ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಇದೆ ಎನ್ನಬಹುದು. ಕನ್ನಡ ಭಾಷೆಯ ಜೊತೆ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿರುವ ಕೊಡವ ಭಾಷಾ ಸಾಹಿತ್ಯ ಒಂದು ಕಾಲದಲ್ಲಿ ಶ್ರೀಮಂತವಾಗಿತ್ತು ಎಂಬ ಹಲವಾರು ಕುರುಹುಗಳು ನಮ್ಮ ನಿಮ್ಮ ಕಣ್ಣಿನ ಮುಂದೆ ಕಾಣಲಿಕ್ಕೆ ಸಿಗುತ್ತಿರುವಾಗ, ಒಂದು ಕಾಲಘಟ್ಟದಲ್ಲಿ ಕೊಡವ ಭಾಷೆಯೇ ಕೊಡಗಿನಲ್ಲಿ ಆಡಳಿತ ಭಾಷೆಯಾಗಿತ್ತು ಎಂಬ ಬಗ್ಗೆ ಹಲವಾರು ಸಂಶೋಧಕರು, ಲೇಖಕರು, ಸೇರಿದಂತೆ ಭಾಷಾ ಪಾಂಡಿತ್ಯವನ್ನು ಪಡೆದವರು ಅಭಿಪ್ರಾಯ ಪಟ್ಟಿರುವಾಗ ಕೊಡವ ಭಾಷಾ ಸಾಹಿತ್ಯದ ಬಗ್ಗೆ ಇನ್ನಷ್ಟು ಆಳವಾದ ಸಂಶೋಧನೆಗಳು ಅಗತ್ಯವಾಗಿದೆ. ಭಾಷೆಗೆ ಲಿಪಿ ಇಲ್ಲದ ಕಾರಣ ಅಥವಾ ಲಿಪಿ ಇದ್ದರೂ ಕನ್ನಡದ ಮೇಲಿನ ಅಭಿಮಾನದಿಂದ ಅದನ್ನು ಕಲಿಯುವ ಪ್ರಯತ್ನ ಮಾಡದೇ ಇರುವ ಕಾರಣ ಅಥವಾ ನಮಗೆಲ್ಲಾ ಲಿಪಿ ತಿಳಿಯದ ಕಾರಣವೋ ಏನೋ ಕೊಡವ ಜಾನಪದ ಸಾಹಿತ್ಯಕ್ಕೂ ಹಿಂದಿನ ಅಥವಾ ನಂತರದ ಜಾಡನ್ನು ಹಿಡಿಯಲು ಸಾದ್ಯವಾಗಲಿಲ್ಲ, ಆದರೆ ಮುಂದೆ ಇದು ಸಾಧ್ಯ ಆಗಲೂಬಹುದಲ್ಲವೇ.? ಈ ಪ್ರಯತ್ನವನ್ನು ಸರಕಾರವೇ ಮಾಡಬೇಕಿದೆ. ಕಾರಣ ವಿಶಿಷ್ಟ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಆಚಾರ ವಿಚಾರ ಪದ್ದತಿ ಪರಂಪರೆಯನ್ನು ಹೊಂದಿದ್ದು ಇದೀಗ ಅಳಿವಿನಂಚಿನಲ್ಲಿರುವ ಭಾಷಾ ಅಲ್ಪ ಸಂಖ್ಯಾತರಾದ ಕೊಡವರನ್ನು ಅವರ ಭಾಷೆಯೊಂದಿಗೆ ಈ ಮಣ್ಣಿನ ಸೊಗಡಿನೊಂದಿಗೆ ಉಳಿಸಿ ಬೆಳಸಿ ಪೋಷಿಸಬೇಕಾಗಿರುವುದು ಸರ್ಕಾರದ ಕರ್ತವ್ಯ ಕೂಡ. ಕೊಡವ, ಕೊಡವಾಮೆ, ಕೊಡವ ಸಂಸ್ಕೃತಿ, ಕೊಡವರ ಆಚಾರ ವಿಚಾರ, ಕೊಡವ ಸಾಹಿತ್ಯ ಹಾಗೂ ಕೊಡವ ತಕ್ಕ್ ಆ ಸೂರ್ಯ ಚಂದ್ರ ಇರುವಲ್ಲಿ ತನಕ ಶಾಶ್ವತವಾಗಿರಲೆಂದು ಮಾತೆ ಕಾವೇರಿ ಹಾಗೂ ಮಹಾಗುರು ಇಗ್ಗುತಪ್ಪನಲ್ಲಿ ಪ್ರಾರ್ಥೀಸುತ್ತಾ ನನಗೆ ನೀಡಿರುವ ವಿಷಯಕ್ಕೊಂದು ಚುಕ್ಕಿ ಇಡುತ್ತಿದ್ದೇನೆ. 

ವಂದನೆಗಳು🙏

✍️ಚಮ್ಮಟೀರ ಪ್ರವೀಣ್ ಉತ್ತಪ್ಪ

📲9880967573