Header Ads Widget

Responsive Advertisement

ಕೊಡವ ತಕ್ಕ್ ಎಳ್ತ್’ಕಾರಡ ಕೂಟದ ‘ಬೆಳ್ಳಿ ಹಬ್ಬ’ : ಜು.23ಕ್ಕೆ 25 ಪುಸ್ತಕಗಳ ಬಿಡುಗಡೆ

ಕೊಡವ ತಕ್ಕ್ ಎಳ್ತ್’ಕಾರಡ ಕೂಟದ ‘ಬೆಳ್ಳಿ ಹಬ್ಬ’ : ಜು.23ಕ್ಕೆ 25 ಪುಸ್ತಕಗಳ ಬಿಡುಗಡೆ

ಕೊಡವ ತಕ್ಕ್ ಎಳ್ತ್’ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ಸಮಾಜದ ಆವರಣದಲ್ಲಿ ಜು.23ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 6.30ರವರೆಗೆ ನಡೆಯುವ ‘ಕೊಡವ ತಕ್ಕ್ ಎಳ್ತ್’ಕಾರಡ ಕೂಟ’ದ “ಬೆಳ್ಳಿ ಹಬ್ಬ”ದಂದು 4 ವಿವಿಧ ಹಂತಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಥೆ, ಕಾದಂಬರಿ, ಕವನ, ಚುಟುಕ, ನಾಟಕ, ವೈಚಾರಿಕ, ಮಕ್ಕಳ ಕಥೆ, ಮಕ್ಕಳ ನಾಟಕ, ಭಕ್ತಿ ಗೀತೆ, ಸಣ್ಣ ಕಥೆಗಳು, ಮಕ್ಕಳ ವಿವಿಧ ಲೇಖನಗಳು, ಪದ್ಧತಿ-ಜಾನಪದ, ಪೌರಾಣಿಕ, ಗಾದೆ,  ಯೋಗಾಭ್ಯಾಸ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯಗಳುಳ್ಳ 25 ಪುಸ್ತಕಗಳನ್ನು  ಪ್ರಥಮ ಬಾರಿಗೆ ಏಕ ವೇದಿಕೆಯಲ್ಲಿ ಏಕ ಕಾಲಕ್ಕೆ ಬಿಡುಗಡೆ ಮಾಡಲಾಗುವುದು.

ಇದರೊಂದಿಗೆ ‘ಕೊಡವ ತಕ್ಕ್ ಎಳ್ತ್’ಕಾರಡ ಕೂಟ’ ನಡೆದು ಬಂದ ದಾರಿಯ ಸಮಗ್ರ ಚಿತ್ರಣಗಳುಳ್ಳ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ಈ ಸಂದರ್ಭ ‘ಕೂಟ’ದ 25ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮ ಹಾಗೂ ಪೈಪೋಟಿಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.

ಇದರೊಂದಿಗೆ ‘ಕೂಟ’ದ ಸ್ಥಾಪನೆಗೆ ಕಾರಣಕರ್ತರಾದ ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರಾದಿಯಾಗಿ ಇದುವರೆಗೆ ‘ಕೂಟ’ದಲ್ಲಿ ಕಾರ್ಯ ನಿರ್ವಹಿಸಿದ ಅಧ್ಯಕ್ಷ, ಆಡಳಿತ ಮಂಡಳಿಯವರಿಗೆ, ಇದುವರೆಗೆ ‘ಕೂಟ’ದ ವತಿಯಿಂದ ಬಿಡುಗಡೆಯಾದ ಎಲ್ಲಾ ಪುಸ್ತಕಗಳ ಲೇಖಕರಿಗೆ ಹಾಗೂ ‘ಕೂಟ’ದ ಪುಸ್ತಕ ಯೋಜನೆಗೆ ಧನ ಸಹಾಯ ನೀಡಿದ ಎಲ್ಲಾ ದಾನಿಗಳಿಗೂ ಸೇರಿದಂತೆ ಒಟ್ಟು 300 ಜನರಿಗೆ ಸನ್ಮಾನ ಮಾಡಲಾಗುವುದು.

ವಿವಿಧ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಗಣ್ಯಾತಿಗಣ್ಯ ಅತಿಥಿಗಳ ಭಾಷಣ ಸೇರಿದಂತೆ ಹಲವು ವಿಶೇಷಗಳನ್ನೊಳಗೊಂಡ ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಲ್ಲಿರುವ ಕೊಡವ ಭಾಷೆ, ಸಾಹಿತ್ಯ, ಕಲೆ- ಸಂಸ್ಕೃತಿಯ ಅಭಿಮಾನಿಗಳು ಭಾಗವಹಿಸಲಿದ್ದು, ‘ಕೂಟ’ದ”ಬೆಳ್ಳಿ ಹಬ್ಬ”ಕ್ಕೆ ಎಲ್ಲಾ ಕೊಡವ ಸಂಘಟನೆಗಳು ಸಹಕಾರ ನೀಡಲಿವೆ ಎಂದು ಪ್ರಕಟಣೆಯಲ್ಲಿ ‘ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಹಾಗೂ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.