ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ 4.24 ಕೋಟಿ ರೂ ನಗದು ವರ್ಗಾವಣೆ: ಜಿಲ್ಲಾಧಿಕಾರಿ ವೆಂಕಟ್ ರಾಜಾ
ಮಡಿಕೇರಿ ಜು.17: ಸರ್ಕಾರದ ಆದೇಶದಂತೆ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 05 ಕೆ.ಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 05 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಜುಲೈ ಮಾಹೆಯಿಂದ ಪ್ರತಿ ಕೆ.ಜಿಗೆ ರೂ.34 ರಂತೆ (34*5 ಕೆ.ಜಿ=170) 170 ರೂ.ಗಳನ್ನು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಇನ್ನು 2 ಅಥವಾ 3 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದ್ದು, ಈಗಾಗಲೇ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಕೊಡಗು ಜಿಲ್ಲೆಯ 80,525 ಫಲಾನುಭವಿಗಳಿಗೆ ರೂ. 4,24,67,530 ಮೊತ್ತವನ್ನು ಪಡಿತರ ಚೀಟಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.
ಫಲಾನುಭವಿಗಳು ಖಾತೆಗೆ ಜಮೆ ಆಗಿರುವ ಬಗ್ಗೆ ಮತ್ತು ಈ ಕುರಿತು ಸಮಸ್ಯೆಗಳಿದ್ದರೆ ಸ್ಥಳೀಯವಾಗಿ ತಾಲ್ಲೂಕಿನ ಆಹಾರ ಶಿರಸ್ತೇದಾರರು/ ನಿರೀಕ್ಷಕರುಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಕುಟುಂಬಗಳು ನೇರ ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಕಳೆದ ಮಾರ್ಚ್, ಏಪ್ರಿಲ್, ಮೇ-2023ರ ತಿಂಗಳುಗಳಲ್ಲಿ ಸತತವಾಗಿ ಪಡಿತರ ಆಹಾರ ಧಾನ್ಯವನ್ನು ಪಡೆಯದ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದ ಶರತ್ ಅವರು ಮಾಹಿತಿ ನೀಡಿದರು.
ಅಂತ್ಯೋದಯ ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳ ಪಡಿತರ ಚೀಟಿಗೆ ಈಗಾಗಲೆ 35 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ನೀಡುತ್ತಿರುವುದರಿಂದ ಅಂತಹ ಅಂತ್ಯೋದಯ ಪಡಿತರ ಚೀಟಿಗಳಿಗೆ ನೇರ ನಗದು ವರ್ಗಾವಣೆ ಸೌಲಭ್ಯವನ್ನು ನೀಡಲಾಗುವುದಿಲ್ಲ. ಉಳಿದಂತೆ 04 ಸದಸ್ಯರಿದ್ದರೆ, ಈ ಕುಟುಂಬವು ರೂ 170 (34x5x1) ಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬವು ರೂ 510 (34x5x3) ಗಳನ್ನು ಅಥವಾ 06 ಸದಸ್ಯರನ್ನು ಹೊಂದಿರುವ ಕುಟುಂಬವು ರೂ.850/- (34x5x5) ಗಳನ್ನು ಪಡೆಯುತ್ತದೆ. ಇದಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತವು ಮುಂದುವರೆಯುತ್ತದೆ ಎಂದು ಹೇಳಿದರು.
ಡಿ.ಬಿ.ಟಿ ಮುಖಾಂತರ ಪಡಿತರ ಚೀಟಿ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡುವ ಯೋಜನೆ ಸಂಬಂಧ ಒಟ್ಟು 12930 ಡಿ.ಬಿ.ಟಿ ಫಲಾನುಭವಿಗಳ ಬ್ಯಾಂಕ್ ಖಾತೆಯು Inactive/ Not available in DB ಸ್ಥಿತಿಯಲ್ಲಿದ್ದು, ಇಂತಹ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರದರ್ಶಿಸಲಾಗಿರುತ್ತದೆ. ಈ ಪಟ್ಟಿಯಲ್ಲಿರುವ ಫಲಾನುಭವಿಗಳು ತುರ್ತಾಗಿ ತಮ್ಮ ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಮತ್ತಷ್ಟು ಮಾಹಿತಿ: ಕೊಡಗು ಜಿಲ್ಲೆಯಲ್ಲಿ 274 ನ್ಯಾಯಬೆಲೆ ಅಂಗಡಿಗಳಿದ್ದು, ಸರ್ಕಾರದ ನಿರ್ದೇಶನದಂತೆ ಆಹಾರ ಧಾನ್ಯ ಪೂರೈಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ಕೆಎಫ್‍ಸಿಎಸ್‍ಇ, ಟಿಎಪಿಸಿಎಂಎಸ್/ವಿಎಸ್‍ಎಸ್‍ಎನ್, ಪ್ರಾಥಮಿಕ ಕೃಷಿ ಸಹಕಾರ ಸಂಘ, ಸ್ತ್ರೀಶಕ್ತಿ ಗುಂಪು, ಮಹಿಳಾ ಮಂಡಳಿ/ಯುವಕ ಮಂಡಳಿ, ಇತರೆ ಸಂಘ ಸಂಸ್ಥೆಗಳು ಸೇರಿದಂತೆ 274 ನ್ಯಾಯಬೆಲೆ ಅಂಗಡಿಗಳಿದ್ದು, ನಿಯಮಾನುಸಾರ ಪಡಿತರ ವಿತರಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರದ 12 ಸಾವಿರದಷ್ಟು ಕುಟುಂಬಗಳಿದ್ದು, ಇವರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು ಇಕೆವೈಸಿ ಮಾಡುವ ನಿಟ್ಟಿನಲ್ಲಿ ಅಂಚೆ ಕಚೇರಿ, ಬ್ಯಾಂಕ್ ಹಾಗೂ ಇತರರು ಶ್ರಮಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಅವರು ಕೊಡಗು ಜಿಲ್ಲೆಗೆ ಪ್ರತೀ ತಿಂಗಳು ಅಂತ್ಯೋದಯ ಅನ್ನ ಯೋಜನೆಯಡಿ 3,453.44 ಕ್ವಿಂಟಾಲ್, ಬಿಪಿಎಲ್ ಕುಟುಂಬದವರಿಗೆ 15,412.5 ಕ್ವಿಂಟಾಲ್ ಪಡಿತರ ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಮಡಿಕೇರಿಯ ಆರ್‍ಎಂಸಿ. ಆವರಣ, ಕಾಂತೂರು ಮೂರ್ನಾಡು ಟಿ.ಎಪಿಸಿಎಂಎಸ್, ಕುಶಾಲನಗರ ಆರ್‍ಎಂಸಿ ಮತ್ತು ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನ ಬಳಿ ಇರುವ ಎಪಿಸಿಎಂಎಸ್, ವಿರಾಜಪೇಟೆ ಪಟ್ಟಣದ ಚಿಕ್ಕಪೇಟೆ ಚತ್ರಕೆರೆ ಎಪಿಸಿಎಂಎಸ್, ಗೋಣಿಕೊಪ್ಪದ ಎಪಿಸಿಎಂಎಸ್ ಈ ಗೋದಾಮುಗಳಲ್ಲಿ ಸಗಟು ಗೋದಾಮು ಹೊಂದಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗಾಗಿ 6,666 ಅರ್ಜಿಗಳು ಸಲ್ಲಿಕೆಯಾಗಿದ್ದು, 4,210 ಅರ್ಜಿಗಳಿಗೆ ಅನುಮೋದನೆಯಾಗಿದೆ. 338 ತಿರಸ್ಕøತವಾಗಿದೆ. ಉಳಿದಂತೆ 2,118 ಬಾಕಿ ಇದೆ ಎಂದು ಕುಮುದಾ ಶರತ್ ಅವರು ಮಾಹಿತಿ ನೀಡಿದರು.
ಕುಟುಂಬದ ಮುಖ್ಯಸ್ಥರನ್ನು ಗುರುತಿಸಿರುವ ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ ಎಂದು ಮಾಹಿತಿ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯಕ್, ಅಂಚೆ ಕಚೇರಿಯ ವ್ಯವಸ್ಥಾಪಕರಾದ ಬಿಬಿನ್ ಅವರು ಬ್ಯಾಂಕ್ ಖಾತೆ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದರು.
ಕೆಎಪ್‍ಸಿಸಿಎಫ್ ಕೊಡಗು ಜಿಲ್ಲಾ ವ್ಯವಸ್ಥಾಪಕರಾದ ಪ್ರೇಮ್ ಕುಮಾರ್, ಬೆಂಬಲ ಬೆಲೆ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ ಕೆ.ಪಿ.ಸೋಮಯ್ಯ, ಸಗಟು ಮಳಿಗೆ/ಗೋದಾಮು ವ್ಯವಸ್ಥಾಪಕರು, ಆಹಾರ ನಿರೀಕ್ಷಕರು, ಆಹಾರ ಶಿರಸ್ತೆದಾರರು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network