Header Ads Widget

Responsive Advertisement

ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪೊಲಿಂಕಾನ ಉತ್ಸವ

ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪೊಲಿಂಕಾನ ಉತ್ಸವ

ಮಡಿಕೇರಿ ಜು.17: ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ‘ಪೊಲಿಂಕಾನ ಉತ್ಸವ’ ವಿಶೇಷ ಪೂಜೆ ಜರುಗಿತು. 

ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಿಗೆ  ಪೂಜೆ, ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣವಿಟ್ಟು ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ಬಳಿಕ ತ್ರಿವೇಣಿ ಸಂಗಮದಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ವಿಸರ್ಜಿಸಲಾಯಿತು. ಪೊಲಿಂಕಾನ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.      

ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದಲ್ಲಿ ಪೊಲಿಂಕಾನ ಉತ್ಸವ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಗಂಡೇಶ್ವರ ದೇವಾಲಯದ ಎಲ್ಲಾ ದೇವರಿಗೆ ಪೂಜೆ ಪುರಸ್ಕಾರ ಕೈಗೊಂಡು ಕರಿಮಣಿ, ಚಿನ್ನದ ಸರ, ತೊಟ್ಟಿಲು, ಬೆಳ್ಳಿತಟ್ಟೆ ಮತ್ತಿತರವನ್ನು ಸುಮಂಗಲಿಯ ಬಾಳೆ ದಿಂಡಿನ ಮಂಟಪಕ್ಕೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದರು.   

ಭಾಗಮಂಡಲ ಭಗಂಡೇಶ್ವರ ದೇವಾಯಲಯದ ಪ್ರಧಾನ ಅರ್ಚಕರಾದ ಹರೀಶ್ ಮತ್ತು ರವಿಕುಮಾರ್ ಅವರು ಆಷಾಢ ಮಾಸದ ಅಮಾವಾಸ್ಯೆ ದಿನದಂದು ಭಗಂಡೇಶ್ವರ ದೇವಾಲಯದಲ್ಲಿ ಮಧ್ಯಾಹ್ನ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬಾಳೆದಿಂಡಿನಿಂದ ಅಲಂಕರಿಸಿದ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪೊಲಿಂಕಾನ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. 

ಗ್ರಾಮಸ್ಥರಾದ ಕುದುಕುಳಿ ಭರತ್ ಅವರು ನಾಡಿನ ಜೀವನದಿ ಕಾವೇರಿಯ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇದಾಗಿದೆ. ವಜ್ರ ವೈಡೂರ್ಯಗಳಿಂದ ಅಲಂಕರಿಸಿ ಕಾವೇರಿ ಮಾತೆಗೆ ಬೇಕಾದ ವಸ್ತುಗಳನ್ನು ಬಾಗಿನ ಅರ್ಪಿಸುವ ಕಾರ್ಯಕ್ರಮವು ಪೊಲಿಂಕಾನದ ವಿಶೇಷ ಪೂಜಾ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದರು.   

ಜೀವನದಿ ಕಾವೇರಿ ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರು, ನಾಡಿನ ಜನರಲ್ಲಿ ಸುಭಿಕ್ಷೆ ತರುವಂತಾಗಬೇಕು ಎಂದು ಪೊಲಿಂಕಾನ ಉತ್ಸವದಲ್ಲಿ ಪ್ರಾರ್ಥಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. 

ಪೊಲಿಂಕಾನ ಉತ್ಸವದಲ್ಲಿ ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ, ಪಾರುಪತ್ತೆದಾರರಾದ ಕೆ.ಪಿ.ಪೊನ್ನಣ್ಣ, ಕುದುಪಜೆ ಪ್ರಕಾಶ್, ಎ.ಎಸ್.ಶ್ರೀಧರ ಇತರರು ಇದ್ದರು.