ಕರಿಕೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಔಷಧ ಪೂರೈಕೆ ಮಾಡುವಂತೆ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಮನವಿ
ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಔಷಧ ಪೂರೈಕೆ ಮಾಡುವಂತೆ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್‌ರವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್‌ರವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಗಡಿಗ್ರಾಮ ಕರಿಕೆ ಕೂಡ ಒಂದು. ಮಳೆಗಾಲದಲ್ಲಿ ರೋಗಿಗಳ ಸಂಖ್ಯೆಯೂ ಇಲ್ಲಿ ಹೆಚ್ಚು. ಆದರೆ, ಇಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ಔಷಧಿ ಲಭಿಸುತ್ತಿಲ್ಲ. ಪ್ರತಿವರ್ಷ ಮಳೆಗಾಲ ಬಂತೆಂದರೆ ಕೊಡಗು-ಕೇರಳ ಗಡಿಯಲ್ಲಿರುವ ಕರಿಕೆ ಗ್ರಾಮದಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿನ ರೋಗಿಗಳು ಸುಮಾರು 70 ಕಿ.ಮೀ ದೂರದಲ್ಲಿರುವ ಮಡಿಕೇರಿಯ ಜಿಲ್ಲಾಸ್ಪತ್ರೆ ಅಥವಾ ಕೇರಳದ ಪಾಣತ್ತೂರು ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಕರಿಕೆಯಲ್ಲಿ ಆರೋಗ್ಯ ಕೇಂದ್ರ ಇದೆಯಾದರೂ ಸೂಕ್ತ ಔಷಧಿಗಳು ಸಕಾಲದಲ್ಲಿ ದೊರೆಯುತ್ತಿಲ್ಲ. ದೂರದ ಊರುಗಳಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಡ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಕರಿಕೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳು ಹಾಗೂ ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೋಗಗಳು ಕಾಣಿಸಿಕೊಂಡರೆ ಇವರುಗಳಿಗೆ ದೂರದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ತೆರಳಿದರೆ ಔಷಧಿಯ ಕೊರತೆ ಎದುರಾಗುತ್ತಿದೆ. ಆದ್ದರಿಂದ ಕರಿಕೆ ಆಸ್ಪತ್ರೆಗೆ ಸಕಾಲದಲ್ಲಿ ಹೆಚ್ಚಿನ ಪ್ರಮಾಣದ ಔಷಧಿಯನ್ನು ವಿತರಿಸಬೇಕೆಂದು ಮನವಿ ಮಾಡಿದರು.
ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್, ಔಷಧಿ ಸರಬರಾಜು ಮಾಡುವ ಭರವಸೆ ನೀಡಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network