Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿಜೃಂಭಣೆಯಿಂದ ನಡೆದ ಹಳ್ಳಿಗಟ್ಟು "ಮಾರಿಗುಡಿ" ನಮ್ಮೆ

ವಿಜೃಂಭಣೆಯಿಂದ ನಡೆದ ಹಳ್ಳಿಗಟ್ಟು "ಮಾರಿಗುಡಿ" ನಮ್ಮೆ

ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಮಾರಮ್ಮ ದೇವರ ವಾರ್ಷಿಕ ಉತ್ಸವ  "ಮಾರಿಗುಡಿ ನಮ್ಮೆ" ಭಾನುವಾರ  ಅತ್ಯಂತ ಶೃದ್ಧಾ ಭಕ್ತಿ ಹಾಗೂ  ವಿಜೃಂಭಣೆಯಿಂದ ನಡೆಯಿತು. 

ವರ್ಷಂಪ್ರತಿ ಕಕ್ಕಡ ಮಾಸದ ಒಂದು ದಿನದ ಮುಂಚಿತವಾಗಿ ಸಂಕ್ರಮಣದಂದು ಅಂದರೆ ಜುಲೈ-16ರಂದು ನಡೆಯುವ ಹಳ್ಳಿಗಟ್ಟು ಮಾರಮ್ಮ ದೇವರ ವಾರ್ಷಿಕ ಉತ್ಸವದಲ್ಲಿ ಮಚ್ಚಿಯಂಡ ಕುಟುಂಬದವರೇ ಪೂಜಾರಿಗಳಾಗಿ ವಿವಿಧ ವಿಧಿವಿಧಾನಗಳನ್ನು ಪೂರೈಸುತ್ತಾರೆ. ಹಳ್ಳಿಗಟ್ಟು ಊರಿನಲ್ಲಿ ಪ್ರಮುಖವಾಗಿ ನಾಲ್ಕು ದೇವಸ್ಥಾನಗಳಿದ್ದು, ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಮಾತ್ರ ಬ್ರಾಹ್ಮಣರ ಪೂಜೆ ನೆರವೇರಿಸುತ್ತಿದ್ದು ಉಳಿದ ಮೂರು ದೇವಸ್ಥಾನಗಳಲ್ಲಿ ಕೊಡವ ಜನಾಂಗದವರೇ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಇಲ್ಲಿನ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಹಾಗೂ ಪೊಲವಪ್ಪ ದೇವಸ್ಥಾನದಲ್ಲಿ ಚಮ್ಮಟೀರ ಹಾಗೂ ಮೂಕಳೇರ ಕುಟುಂಬ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರೆ, ಮಾರಮ್ಮ ದೇವಸ್ಥಾನದಲ್ಲಿ ಮಚ್ಚಿಯಂಡ ಕುಟುಂಬ ವಿವಿಧ ಕಟ್ಟುಪಾಡುಗಳೊಂದಿಗೆ ಪೂಜೆಯನ್ನು ನೆರವೇರಿಸುತ್ತಾರೆ.

ಭಾನುವಾರ ನಡೆದ ಮಾರಮ್ಮ ದೇವರ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿ ತಮ್ಮ ತಮ್ಮ ಇಷ್ಟಾನುಸಾರ ಹರಕೆಗಳನ್ನು ಅರ್ಪಿಸಿದ್ದರು.  ಕಕ್ಕಡ ಮಾಸಕ್ಕೆ ಒಂದು ದಿನ ಮುಂಚಿತವಾಗಿ ಹಾಗೂ ಕಕ್ಕಡದ ಮೊದಲ ವಾರದಲ್ಲಿ ನಡೆಯುವ ಹಳ್ಳಿಗಟ್ಟು ಮಾರಿಗುಡಿ ನಮ್ಮೆ ಮುಂದಿನ ಶನಿವಾರ ಅಂದರೆ ಜುಲೈ 22ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದ್ದಾರೆ.