Header Ads Widget

ಸರ್ಚ್ ಕೂರ್ಗ್ ಮೀಡಿಯ

ಚೆಯ್ಯಂಡಾಣೆ ಪಟ್ಟಣದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕಾಡಾನೆ-ಜನರಲ್ಲಿ ಹೆಚ್ಚಿದ ಆತಂಕ

ಚೆಯ್ಯಂಡಾಣೆ ಪಟ್ಟಣದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕಾಡಾನೆ-ಜನರಲ್ಲಿ ಹೆಚ್ಚಿದ ಆತಂಕ 

ಚೆಯ್ಯಂಡಾಣೆ: ಸಮೀಪದ ನರಿಯಂದಡ,ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ಎರಡು ದಿನಗಳ ಹಿಂದೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಮರುದಿನವೇ ಕಾಡಾನೆಯೊಂದು ಚೆಯ್ಯಂಡಾಣೆ ಪಟ್ಟಣದಲ್ಲಿ ಸಂಚರಿಸಿ ಗ್ರಾಮಸ್ಥರಲ್ಲಿ ಸಂಚಲನ ಮೂಡಿಸಿದ ಘಟನೆ ನಡೆದಿದೆ.

ಚೆಯ್ಯಂಡಾಣೆ ಪಟ್ಟಣದಲ್ಲಿರುವ ಕರ್ನಾಟಕ ಬ್ಯಾಂಕ್ ಸಮೀಪದ ವೆಸ್ಟರ್ನ್ ವ್ಯಾಲ್ಯೂ ಟ್ರೇಡರ್ಸ್ ನ ಸಿಸಿ ಕ್ಯಾಮರದಲ್ಲಿ ರಾತ್ರಿ ಒಂಟಿ ಕಾಡಾನೆಯೊಂದು ಸಂಚರಿಸುವ ದೃಶ್ಯ ಸೇರಿಯಾಗಿದೆ. ಸಮೀಪದ ತೋಟದಿಂದ ನೇರವಾಗಿ ಗೇಟ್ ತೆರೆದು ಹೊರಬಂದ  ಕಾಡಾನೆ ರಸ್ತೆಗೆ ಬಂದು ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ರಸ್ತೆಯ ಮೂಲಕ ಪಟ್ಟಣದಲ್ಲಿ ಸಂಚರಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದೇ ಮಾರ್ಗವಾಗಿ ಸಂಚರಿಸಿದ ಆನೆ  ಸಮೀಪದಲ್ಲೇ ಇರುವ ಚೈಯಂಡ ಪ್ರಕಾಶ್ ರವರ ಮನೆಯ ಆವರಣಕ್ಕೆ ನುಗ್ಗಿ ಅವರಣದಲ್ಲಿ ನಿಲ್ಲಿಸಿದ್ದ ಕಾರಿಗೆ ಅಲ್ಪ ಪ್ರಮಾಣದ ಹಾನಿ ಮಾಡಿದಲ್ಲದೆ ಮನೆ ಆವರಣದಲ್ಲಿರುವ ಹೂಗಿಡ ಹಾಗೂ  ಬಾಳೆ ಗಿಡಗಳನ್ನು ತುಳಿದು ನಾಶಪಡಿಸಿದೆ.

ಕಳೆದ ಒಂದು ತಿಂಗಳ ಹಿಂದೆ ಇದೇ ಸಿಸಿ ಕ್ಯಾಮರದಲ್ಲಿ ಕಾಡಾನೆ ತೆರಳುವ ದೃಶ್ಯ ಸೆರಿಯಾಗಿತ್ತು.ಮತ್ತೆ ಅದೇ ಕಾಡಾನೆ ಮರಳಿ ಬಂದಿದ್ದು, ಈ ಭಾಗದ ಜನರು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ  ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಚೆಯ್ಯಂಡ ಪ್ರಕಾಶ್ ರವರ ಸಹೋದರ ಚೆಯ್ಯ0ಡ ರಮೇಶ್ ಕಳೆದ ಮೂರು ವರ್ಷದಿಂದ ನಮ್ಮ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಗ್ರಾಮದ ಹಲವರ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ. ಈಗ ಪಟ್ಟಣದಲ್ಲಿ ಸಂಚರಿಸುತ್ತಿದ್ದು ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ವೀಕ್ಷಣೆಗೆ ಮಾತ್ರ ಸೀಮಿತವಾಗಿದ್ದು ಕಾಡಾನೆ ಹಾವಳಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಕೂಡಲೆ ಸರ್ಕಾರ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ರಮೇಶ್ ಒತ್ತಾಯಿಸಿದರು. ಸ್ಥಳಕ್ಕೆ ಅರಣ್ಯ ಕ್ಯಾಂಪ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ