Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿಯಲ್ಲಿ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ –ಕೆ.ವಿ.ಕೆ ಸಲಹೆ

ಕಾಫಿಯಲ್ಲಿ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ –ಕೆ.ವಿ.ಕೆ ಸಲಹೆ

ಕಾಫಿ ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆೆಯಾಗಿದ್ದು, ಕೃಷಿಕರ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇಂತಹ ಪ್ರಮುಖ ಬೆಳೆಯಾದ ಕಾಫಿಯನ್ನು ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದ್ದರೂ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಸ್ವಲ್ಪ ದಿನಗಳಲ್ಲೆ ಹೆಚ್ಚು ಮಳೆಯಾಗುವುದರಿಂದ, ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯು ಸರ್ವೆ ಸಾಮಾನ್ಯವಾಗಿ ಕಂಡುಬರುತ್ತಿದ್ದು ಇದರಿಂದ ಅಪಾರ ನಷ್ಟ ಉಂಟಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳು ಕಾಫಿಯ ಬೀಜದ ಬೆಳವಣಿಗೆಯ ಹಂತವಾಗಿದ್ದು, ಈ ಸಮಯದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಅರೇಬಿಕಾ ಕಾಫಿಯಲ್ಲಿ ಶೇ. 5 ರಿಂದ 8 ಮತ್ತು ರೋಬಸ್ಟಾ ಕಾಫಿಯಲ್ಲಿ ಶೇ. 10 ರಷ್ಟು ಅಕಾಲಿಕ ಕಾಫಿ ಉದುರುವುದು ಕಂಡುಬರುತ್ತಿದೆ. ಆದರೆ ಈ ವರ್ಷ ಜೂನ್ ತಿಂಗಳಿನಲ್ಲಿ ಹೆಚ್ಚು ಮಳೆ ಬೀಳದೆ ಇದ್ದರು ಜಿಲ್ಲೆಯ ಕಾಫಿತೋಟಗಳಲ್ಲಿ ರೆಂಬೆಯಲ್ಲಿ ಮತ್ತು ಕಾಫಿ ಬೀಜದಲ್ಲಿ ಕೊಳೆ ರೋಗ ಕಂಡು ಕೊಳೆತು ಉದುರುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ವರ್ಷ ಕೊಳೆ ರೋಗಕ್ಕೆ ತುತ್ತಾಗಿ ಉದುರಿದ ರೆಂಬೆಗಳು, ಕಾಯಿಗಳಲ್ಲಿ, ಈ ಕೊಳೆ ರೋಗವನ್ನು ಉಂಟುಮಾಡುವ ಶಿಲೀಂದ್ರ ಬದುಕುಳುದಿದ್ದು ಈ ವರ್ಷ ಜನವರಿಯಿಂದ ಮೇ ತಿಂಗಳಿನ ಕೊನೆಯವರೆಗೆ ಸೈಕ್ಲೋನ್‌ನಿಂದ ಮಳೆಯಾಗಿದ್ದರಿಂದ ಕ್ರಿಯಾಶೀಲವಾಗಿದ್ದು, ರೆಂಬೆಗಳಲ್ಲಿ ಮತ್ತು ಕಾಫಿ ಬೀಜದಲ್ಲಿ ಕೊಳೆ ರೋಗ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿರುತ್ತದೆ. ಆದರೆ ಜುಲೈ ತಿಂಗಳಿನ ಮೂರನೆ ವಾರದಿಂದ ಮುಂಗಾರು ಮಳೆ ಚುರುಕಾಗಿದ್ದು ಹೆಚ್ಚಿನ ಮಳೆ ಸುರಿಯುತ್ತೀರುವುದರಿಂದ ಕಾಫಿಗೆ ಕೊಳೆ ರೋಗವು ತೀವ್ರವಾಗುವ ಸಂಭವವಿರುತ್ತದೆ. ಈ ನಿಟ್ಟಿನಲ್ಲಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇದರ ಸಸ್ಯ ಸಂರಕ್ಷಣಾ ತಜ್ಞರಾದ ಡಾ. ವೀರೇಂದ್ರ ಕುಮಾರ್ ಕೆ.ವಿ ಇವರು ಜಿಲ್ಲೆಯ ಕಾಫಿ ಬೆಳೆಯುತ್ತೀರುವ ರೈತರಿಗೆ ಕಾಫಿಯಲ್ಲಿ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯ ಹತೋಟಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿರುತ್ತಾರೆ. ಆದ್ದರಿಂದ ಜಿಲ್ಲೆಯ ರೈತರು ಈ ಕೆಳಗೆ ಸೂಚಿಸಿರುವ ಕ್ರಮಗಳನ್ನು ಅನುಸರಿಸಿ ಕಾಫಿಯಲ್ಲಿ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯನ್ನು ಕಡಿಮೆ ಮಾಡಿ ಇಳುವರಿಯನ್ನು ಹೆಚ್ಚಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಸಲಹೆಗಳನ್ನು ನೀಡಿದ್ದಾರೆ.

ಅಕಾಲಿಕ ಕಾಫಿ ಉದುರುವಿಕೆಗೆ ಕಾರಣಗಳು:

*ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಅಕಾಲಿಕ ಮಳೆಯಾಗುವುದರಿಂದ ಒಂದಕ್ಕಿಂತ ಹೆಚ್ಚು ಬಾರಿ ಕಾಫಿಯಲ್ಲಿ ಹೂವಾಗಿ ವಿವಿಧ ಗಾತ್ರದ ಕಾಯಿಗಳ ಬೆಳವಣಿ ಗೆಯಾಗುತ್ತದೆ.

*ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೆ ಹೆಚ್ಚು ಮಳೆಯಾಗುವುದರಿಂದ ಕೊಳೆರೋಗದಿಂದ ಕಾಫಿ ಉದುರುವುದು.

*ಕಾಫಿ ಗಿಡದ ರೆಂಬೆಯಲ್ಲಿ ಹೆಚ್ಚಿನ ಕಾಯಿ ಕಚ್ಚುವುದು 

*ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೆ ಹೆಚ್ಚು ಮಳೆಯಾಗುವುದರಿಂದ ಬೇರುಗಳು ಉಸಿರಾಡಲು ಸಮಸ್ಯೆಯಾಗಿ (Wet feet) ಕಾಫಿ ಉದುರುವುದು 

ಹತೋಟಿ ವಿಧಾನಗಳು:  

*ಪ್ರತಿ ಎಕರೆ ಪ್ರದೇಶಕ್ಕೆ 50 ಕೆ.ಜಿ ಯೂರಿಯಾವನ್ನು ಎರಚಬೇಕು.

*ತೋಟಗಲ್ಲಿ ನೀರು ನಿಲ್ಲುತ್ತೀದ್ದರೆ, ನೀರನ್ನು ಬಸಿದು ಹೋಗುವಂತೆ ಮಾಡಬೇಕು

*ಕೊಳೆ ರೋಗ ಕಡಿಮೆ ಇರುವ ತೋಟಗಳಲ್ಲಿ ಶೇ. 1.0 ರ ಬೋರ್ಡೊ ದ್ರಾವಣ ಮತ್ತು ಪ್ಲನೋಫಿಕ್ಸ್ 50 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

*ಕೊಳೆ ರೋಗ ಕಂಡು ಬಂದ ತೋಟಗಳಲ್ಲಿ ಪೈರಕ್ಲೋಸ್ಟೋಬಿನ್ + ಏಪಾಕ್ಸಿಕೊನೊಜೋಲ್ 1.0 ಮಿ.ಲಿ ಅಥವಾ ಪ್ರ‍್ರೊಪಿಕೋನೊಜೋಲ್ 1.0 ಮಿ.ಲಿ ಅಥವಾ ಟೆಬ್ಯುಕೊನೋಜೋಲ್ 1.0 ಮಿ.ಲಿ  ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. 


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಮುಖ್ಯಸ್ಥರು

 ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ

ಗೋಣಿಕೊಪ್ಪಲು, ಕೊಡಗು ಜಿಲ್ಲೆ,   ದೂರವಾಣಿ : 08274-295274