Header Ads Widget

ಸರ್ಚ್ ಕೂರ್ಗ್ ಮೀಡಿಯ

ಕರ್ನಾಟಕ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಕೊಡಗಿನ ತೀತೀರ ರೋಶನ್ ಅಪ್ಪಚ್ಚು ನೇಮಕ

ಕರ್ನಾಟಕ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಕೊಡಗಿನ ತೀತೀರ ರೋಶನ್ ಅಪ್ಪಚ್ಚು ನೇಮಕ

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯವರಾದ ತೀತೀರ ರೋಶನ್ ಅಪ್ಪಚ್ಚು  ಕರ್ನಾಟಕ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ಪದೋನ್ನತಿ ಹೊಂದಿದ್ದು ಇದರೊಂದಿಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.

ರಾಜ್ಯ ಸರ್ಕಾರದ ಇಂಧನ ಸಚಿವಾಲಯದ ಅಧೀನದಲ್ಲಿ ಬರುವ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಪ್ರಭಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿದ್ದ ತೀತಿರ ರೋಷನ್ ಅಪ್ಪಚ್ಚು ಅವರನ್ನು ಸರ್ಕಾರ ಇದೀಗ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು ಇದರೊಂದಿಗೆ  ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಕಗೊಳಿಸಿದ್ದು, ವಿದ್ಯುತ್ ಇಲಾಖೆಯಲ್ಲಿ ರಾಜ್ಯಕ್ಕೆ ಇದು ಏಕೈಕ  ಹುದ್ದೆಯಾಗಿದ್ದು ಇಲಾಖೆಯ ಮುಖ್ಯಸ್ಥರಾಗಿದ್ದಾರೆ.

ಹುದಿಕೇರಿಯ ಜಿಎಂಪಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಆರಂಭಿಸಿದ ರೋಶನ್ ಅಪ್ಪಚ್ಚು ನಂತರ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ್ದರು. ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು ಕೋಲ್ಕತಾದ  ಮೆಂಬರ್ ಆಫ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್, ಮತ್ತು ದೆಹಲಿಯ ಮೆಂಬರ್ ಆಫ್ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. 

ಆರಂಭದಲ್ಲಿ ಗೋಣಿಕೊಪ್ಪಲಿನ ಕಾವೇರಿ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ಇವರು ನಂತರ 1994ರಲ್ಲಿ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ನಂತರ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಆಗಿ,  ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ, 2018ರಲ್ಲಿ ಡೆಪ್ಯುಟಿ ಚೀಫ್  ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಬಡ್ತಿ ಹೊಂದಿ ನಂತರ  ಪ್ರಭಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕಗೊಂಡಿದ್ದರು. ಕಳೆದ ಸರ್ಕಾರ ಇರುವಾಗಲೇ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕಗೊಂಡಿತ್ತಾದರು ಚುನಾವಣೆ ನೀತಿ ಸಂಹಿತೆಯಿಂದ ಹುದ್ದೆ ಹಾಗೆ ಉಳಿದಿತ್ತು. ಇದೀಗ ನೂತನ ಸರ್ಕಾರ ಅಪ್ಪಚ್ಚು ಅವರನ್ನು ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸುವುದರ ಜೊತೆಗೆ ವಿದ್ಯುತ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಿಸಿ ಆದೇಶ ಹೊರಡಿಸಿದೆ. 

ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದವರಾದ ತೀತೀರ ನಂಜಪ್ಪ ಹಾಗೂ ಶಾಂತಿ ದಂಪತಿಗಳ ಮಗನಾದ ರೋಶನ್ ಅಪ್ಪಚ್ಚು ಮೈಸೂರು, ಮಂಡ್ಯ, ಬೆಂಗಳೂರು, ಶಿವಮೊಗ್ಗ, ಕೊಲಾರ, ಕಲ್ಬುರ್ಗಿ, ರಾಯಚೂರು ಬಳ್ಳಾರಿ ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಅಮ್ಮತಿ ಪಚ್ಚಾಟ್ ಗ್ರಾಮದ ಬೇರೆರ ನಾಣಯ್ಯ ಹಾಗೂ ಪೊನ್ನಮ್ಮ ದಂಪತಿಗಳ ಮಗಳಾದ ಶರ್ಮಿಲಿ ಅವರನ್ನು ಮದುವೆಯಾಗಿದ್ದು ದಂಪತಿಗಳಿಗೆ ಮೂವರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ವೃಷಭ್ ಕುಶಾಲಪ್ಪ ಬಿಇ ಪದವಿ ಮುಗಿಸಿ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದಾರೆ, ಎರಡನೇ ಮಗ ವಿಖ್ಯಾತ್ ಮಲೆಷಿಯಾದ ಮಣಿಪಾಲ್ ಕಾಲೇಜಿನಲ್ಲಿ ದ್ವಿತೀಯ ಎಂಬಿಬಿಎಸ್ ಪದವಿ ಪಡೆಯುತ್ತಿದ್ದಾನೆ. ಮೂರನೆಯ ಮಗ ಶಿಶಾದ್ ಸೋಮಣ್ಣ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾರೆ.