Header Ads Widget

ಸರ್ಚ್ ಕೂರ್ಗ್ ಮೀಡಿಯ

ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಅಕ್ಟೋಬರ್ 03ರಿಂದ 12ರವರೆಗೆ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ

ಶತ ಶತಮಾನಗಳ ಇತಿಹಾಸವಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ  ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯನ್ನು ಇದೇ ಅಕ್ಟೋಬರ್ 03ರ ಗುರುವಾರದಿಂದ ಅಕ್ಟೋಬರ್ 12ರ ಶನಿವಾರದವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಊರಿನ ತಕ್ಕ ಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇದೇ ಅಕ್ಟೋಬರ್ 03ರಿಂದ ಅ-11ರವರೆಗೆ ಪ್ರತಿನಿತ್ಯ ಸಂಜೆ 7-00ಗಂಟೆಗೆ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ "ದುರ್ಗಾ ನಮಸ್ಕಾರ ಪೂಜೆ"ಯನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲ ದಿವಸ ಊರಿನ ತಕ್ಕ ಮುಖ್ಯಸ್ಥರಾದ ಚಮ್ಮಟೀರ ಕುಟುಂಬಸ್ಥರ ಪೂಜೆಯ ಮೂಲಕ ಒಂಬತ್ತು ದಿನಗಳ ರಾತ್ರಿ ಪೂಜೆ ಆರಂಭಗೊಳ್ಳಲಿದ್ದು ಎರಡನೇ ದಿವಸ ಮೂಕಳೇರ, ಮೂರನೇ ದಿವಸ ಮಚ್ಚಿಯಂಡ ಹೀಗೆ ಊರಿನ ಬೇರೆ ಬೇರೆ ಕುಟುಂಬಸ್ಥರ ಪೂಜೆಗಳು ನಂತರದ ದಿನಗಳಲ್ಲಿ ನಡೆಯಲಿದೆ. ಊರಿನವರಲ್ಲದೆ ಹೊರಗಿನ ಭಕ್ತರು ಕೂಡ ಈ ಸಾಮೂಹಿಕ ದುರ್ಗಾ ಪೂಜೆಯನ್ನು ಮಾಡಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಆಡಳಿತ ಮಂಡಳಿಯನ್ನು ಅಥವಾ ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಬಹುದಾಗಿದೆ.

ಅಕ್ಟೋಬರ್ 3ರಿಂದ ಪ್ರತಿ ದಿನ ರಾತ್ರಿ 7-00 ಗಂಟೆಯಿಂದ ನವ ದುರ್ಗೆಯರ ಆರಾಧನೆ ನಡೆಯಲಿದ್ದು ಪ್ರತಿ ದಿನವೂ ರಾತ್ರಿ ಅನ್ನ ಸಂತರ್ಪಣೆ ಇರುತ್ತದೆ. ವಿಜಯ ದಶಮಿಯ ದಿನವಾದ 12ರಂದು ಶನಿವಾರ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು, 12ರಂದು ಶನಿವಾರ ಬೆಳಿಗ್ಗೆ 7-00 ಗಂಟೆಗೆ "ಗಣಪತಿ ಹೋಮ" 10-30 ಗಂಟೆಗೆ ಶ್ರೀ ಭದ್ರಕಾಳಿ ದೇವರ ದರ್ಶನದ ಬಳಿಕ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನಕ್ಕೆ ಶತ ಶತಮಾನಗಳ ಇತಿಹಾಸವಿದ್ದು ಕಲ್ಲಿನ ಆನೆಯೊಂದು ದೇವಸ್ಥಾನಕ್ಕೆ ಮುಖ ಮಾಡಿ ನಿಂತಿರುವ ರಾಜ್ಯದ ಏಕೈಕ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು ಮದುವೆಯಾದ ಮಹಿಳೆಯರು ಅವರವರ ಸಾಂಪ್ರದಾಯಿಕ ಸೀರೆಯಲ್ಲಿಯೇ ಬರಬೇಕಾಗಿದೆ ಹಾಗೂ ದೊಡ್ಡವರು ಮಿಡ್ಡಿ, ಚಡ್ಡಿ ಸೇರಿದಂತೆ ಬಿಗಿಯಾದ ಉಡುಪುಗಳನ್ನು ಅಥವಾ ಮೈಮಾಟ ಪ್ರದರ್ಶಿಸುವ ಉಡುಗೆ ತೊಡುಗೆ ತೊಡುಗೆಗಳನ್ನು ಧರಿಸಿ ಬರುವಂತಿಲ್ಲ. ಪೂಜೆ ಮಾಡಿಸುವವರ ಈ ಕೆಳಗಿನ ಪೂಜಾ ಸಾಮಗ್ರಿಗಳನ್ನು ಪೂಜೆ ಮಾಡಿಸುವ ಸಂಜೆ 5-00 ಗಂಟೆಯ ಒಳಗೆ ದೇವಸ್ಥಾನದ ಅರ್ಚಕರಿಗೆ ತಲುಪಿಸಬೇಕಾಗುತ್ತದೆ.

 ಪೂಜೆಗೆ ಬೇಕಾಗಿರುವ ಸಾಮಗ್ರಿಗಳು
ವೀಳ್ಯದೆಲೆ,ಅಡಿಕೆ, ಅಕ್ಕಿ-1 ಕೆಜಿ, ತೆಂಗಿನಕಾಯಿ-3, ಬಿಳಿಬೆಲ್ಲ-ಅರ್ದ ಕೆಜಿ, ಅವಲಕ್ಕಿ- 1 ಕೆಜಿ, ಭತ್ತದ ಹರಳು-1 ಸೇರು, ಹುರಿಕಡ್ಲೆ-100 ಗ್ರಾಂ, ಎಳ್ಳು- 100 ಗ್ರಾಂ,  ಸಕ್ಕರೆ -ಅರ್ದ ಕೆಜಿ, ದೀಪದ ಎಣ್ಣೆ-ಅರ್ದ ಲೀಟರ್, ಬಾಳೆ ಹಣ್ಣು ಒಂದು ಚಿಪ್ಪು, ಮಲ್ಲಿಗೆ ಹೂ ಒಂದು ಮಾರು ಸೇರಿದಂತೆ ನಿಗದಿತ ಪೂಜಾ ದಕ್ಷಿಣೆಯನ್ನು ನೀಡಬೇಕಾಗುತ್ತದೆ. ಈ ಪೂಜೆಯನ್ನು ಊರಿನವರು ಮಾತ್ರವಲ್ಲದೆ ಹೊರಗಿನ ಭಕ್ತರು ಮಾಡಿಸಬಹುದಾಗಿದ್ದು ಈ ಕೆಳಗಿನ ಮೊಬೈಲ್ ಸಂಖ್ಯೆ 9880967573, 9483815430 ಅಥವಾ ಅರ್ಚಕರು-94499 47810 ನ್ನು ಸಂಪರ್ಕಿಸಬಹುದಾಗಿದೆ. ಆಯುಧಪೂಜೆಯ ದಿನವಾದ 11.10.2024 ರಂದು ಸಂಜೆ 4.00 ಗಂಟೆಗೆ ಸಾಮೂಹಿಕ ವಾಹನ ಪೂಜೆ ನಡೆಯಲಿದ್ದು, ಪೂಜೆ ಮಾಡಿಸುವವರು ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.